ಮೈಸೂರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭಾರೀ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭಾರೀ ಪ್ರತಿಭಟನೆ

September 5, 2019

ಮೈಸೂರು, ಸೆ.4(ಆರ್‍ಕೆ)-ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವ ಇಡಿ ಅಧಿಕಾರಿಗಳ ಕ್ರಮ ಖಂಡಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದರು.

ನಗರ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಗಾಂಧಿ ವೃತ್ತದಲ್ಲಿ ಧರಣಿ ನಡೆಸಿದ ನೂರಾರು ಕಾರ್ಯಕರ್ತರು, ರಾಜಕೀಯ ದುರುದ್ದೇಶಕ್ಕಾಗಿ ಇಡಿ ಅಧಿ ಕಾರಿಗಳನ್ನು ಬಳಸಿಕೊಂಡು ವಿಚಾರಣೆಗೆ ಸಹಕರಿಸಲಿಲ್ಲ ಎಂಬ ನೆಪವೊಡ್ಡಿ ಡಿ.ಕೆ.ಶಿವ ಕುಮಾರ್‍ರನ್ನು ಬಂಧಿಸಲಾಗಿದೆ. ಇದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪ್ರತಿಭಟನಾ ಕಾರರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ದ್ವೇಷದಿಂದ ಬಿಜೆಪಿಯವರು ಡಿ.ಕೆ.ಶಿವಕುಮಾರ್ ಬಂಧನಕ್ಕೆ ಕಾರಣರಾಗಿದ್ದಾರೆ. ಈ ಸೇಡಿನ ಕ್ರಮದ ವಿರುದ್ಧ ಇಡೀ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. 4 ದಿನಗಳಿಂದ ವಿಚಾರಣೆಗೆ ಸಹಕರಿಸುತ್ತಿದ್ದರೆ, ಅಸಹಕಾರದ ನೆಪದಲ್ಲಿ ಹಬ್ಬದ ದಿನವೂ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳ ಕ್ರಮ ಅಮಾನವೀಯ ಎಂದರು.

ನಾನೂ ವಕೀಲನಾಗಿ ಕೆಲಸ ಮಾಡಿದವನು. ಬಂಧನದ ವಾರಂಟ್, ಸಮನ್ಸ್ ಜಾರಿಯಾದರೆ, ಸಾಕ್ಷ್ಯ ನಾಶಪಡಿಸಬಹುದೆಂಬ ಸಂಶಯ ಬಂದಾಗ ಮಾತ್ರ ಬಂಧಿಸುವ ಪ್ರಸಂಗ ಬರುತ್ತದೆಯೇ ಹೊರತು. ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪವೊಡ್ಡಿ ವಿನಾಕಾರಣ ಡಿಕೆಶಿ ಅವರನ್ನು ಬಂಧಿಸಿರುವುದು ಬಿಜೆಪಿಯ ರಾಜಕೀಯ ಶಕ್ತಿಯ ದುರ್ಬಳಕೆ ಎಂದ ಸಿದ್ದರಾಮಯ್ಯ, ನರೇಂದ್ರ ಮೋದಿ, ಅಮಿತ್ ಶಾ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಾಯಕತ್ವ ಹಾಳು ಮಾಡುವ ಉದ್ದೇಶದಿಂದ ಈ ರೀತಿ ನಡೆದುಕೊಂಡಿರುವುದು ಖಂಡನೀಯ ಎಂದರು. ಈ ಮಾರ್ಗದಲ್ಲಿ ಕಾಂಗ್ರೆಸ್ ಮುಗಿಸುತ್ತೇವೆಂದುಕೊಂಡಿದ್ದರೆ ಅದು ಬಿಜೆಪಿಯವರ ಭ್ರಮೆ. ಪ್ರಜಾಪ್ರಭುತ್ವವನ್ನು ಕದಿಯಲು ಸಾಧ್ಯವಿಲ್ಲ. 17 ಮಂದಿ ಶಾಸಕರಂತೆ ಡಿಕೆಶಿಗೂ ಬಿಜೆಪಿಯವರು, ತನಿಖೆ ಎಂಬ ಗುಮ್ಮನ ಬಳಸಿ ಸೆಳೆಯಲು ಗಾಳ ಹಾಕಿದ್ದರು. ಅವರ ಬ್ಲಾಕ್‍ಮೇಲ್ ತಂತ್ರಕ್ಕೆ ಮಣೆ ಹಾಕದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಸಿದ್ದರಾಮಯ್ಯ ದೂರಿದರು.

ಈ ರೀತಿಯ ಬಿಜೆಪಿ ಬ್ಲಾಕ್‍ಮೇಲ್‍ಗೆ ಕಾಂಗ್ರೆಸ್ ಜಗ್ಗಲ್ಲ, ಬಗ್ಗುವುದೂ ಇಲ್ಲ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಇಡೀ ಕಾಂಗ್ರೆಸ್ ಪಕ್ಷವೇ ಇದೆ. ನಾಳೆ ರಾಜ್ಯ ದಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಭಾರೀ ಪ್ರತಿಭಟನೆಗೆ ಕೆಪಿಸಿಸಿ ಕರೆ ನೀಡಿದೆ. ರಾಜ್ಯದ ಜನರೂ ಸಹ ಡಿಕೆಶಿ ಪರ ಇದ್ದಾರೆ ಎಂದರು. ಪ್ರತಿಭಟನೆ ವೇಳೆ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ, ಶಾಂತಿಯುತವಾಗಿ ಹೋರಾಟ ನಡೆಸೋಣ ಎಂದ ಸಿದ್ದರಾಮಯ್ಯ, ತಕ್ಷಣವೇ ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಇದೇ ಸಂದರ್ಭ ಎಚ್ಚರಿಕೆ ನೀಡಿದರು. ನಂತರ ಮಾತನಾಡಿದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ, ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಬಿಜೆಪಿಯವರು ಇಡಿ ಮೂಲಕ ಹಬ್ಬದ ದಿನವೂ ಹಿರಿಯರಿಗೆ ಎಡೆ ಇಡಲೂ ಬಿಡದೆ ಡಿ.ಕೆ. ಶಿವಕುಮಾರ್‍ಗೆ ತೊಂದರೆ ಕೊಟ್ಟಿದ್ದಾರೆ. ಮುಂದೆ ಬಿಜೆಪಿಯವರಿಗೆ ನಾವು ಎಡೆ ಇಡುವ ಕಾಲ ಸಮೀಪಿಸಿದೆ ಎಂದು ವ್ಯಂಗ್ಯವಾಡಿದರು. ಶಾಸಕರಾದ ತನ್ವೀರ್‍ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಸಹ ಪ್ರತಿಭಟನೆಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಮೇಯರ್‍ಗಳಾದ ಮೋದಾಮಣಿ, ಬಿ.ಕೆ.ಪ್ರಕಾಶ್, ಟಿ.ಬಿ.ಚಿಕ್ಕಣ್ಣ, ಮಾಜಿ ಉಪಮೇಯರ್ ಪುಷ್ಪವಲ್ಲಿ, ಕಾಂಗ್ರೆಸ್ ಮುಖಂಡರಾದ ಎಂ.ಶಿವಣ್ಣ, ಈಶ್ವರ್ ಚಕ್ಕಡಿ, ಟಿ.ಎಸ್.ರವಿಶಂಕರ್, ಗೋಪಿನಾಥ್, ರಾಧಾಮಣಿ, ಶೌಕತ್ ಪಾಷಾ, ಪಿ.ರಾಜು, ಅಶೋಕ, ಶ್ರೀನಾಥಬಾಬು, ಕೆ.ಹರೀಶ್‍ಗೌಡ, ಕೆ.ಮರೀಗೌಡ, ಮಂಜುಳಾ ಮಾನಸ, ರವಿ ಮಂಚೇಗೌಡನಕೊಪ್ಪಲು, ಪೈಲ್ವಾನ್ ಚಿಕ್ಕಪುಟ್ಟಿ, ಹೆಚ್.ಎ.ವೆಂಕಟೇಶ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ದೇವರಾಜ ಉಪವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್‍ಗಳಾದ ಮುನಿಯಪ್ಪ, ಪ್ರಸನ್ನಕುಮಾರ್, ಸಿ.ಕಿರಣ್‍ಕುಮಾರ್, ಎ.ಮಲ್ಲೇಶ್, ಕವಿತಾ ಸೇರಿದಂತೆ ಪ್ರತಿಭಟನಾ ಸ್ಥಳದಲ್ಲಿ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Translate »