ಬಸ್ಕಿ ಹೊಡೆದ್ರೆ ಉಚಿತ ಪ್ಲಾಟ್‍ಫಾರಂ ಟಿಕೆಟ್! ಭಾರತೀಯ ರೈಲ್ವೆ ಇಲಾಖೆಯಿಂದ ವಿನೂತನ ಯೋಜನೆ
ಮೈಸೂರು

ಬಸ್ಕಿ ಹೊಡೆದ್ರೆ ಉಚಿತ ಪ್ಲಾಟ್‍ಫಾರಂ ಟಿಕೆಟ್! ಭಾರತೀಯ ರೈಲ್ವೆ ಇಲಾಖೆಯಿಂದ ವಿನೂತನ ಯೋಜನೆ

February 23, 2020

ಬೆಂಗಳೂರು, ಫೆ. 22- ಸದೃಢ ಭಾರತವನ್ನು ರೂಪಿಸುವ ಜೊತೆಗೆ ಭಾರತದ ನಾಗರಿಕರ ಆರೋಗ್ಯದ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿ ಫಿಟ್ ಇಂಡಿಯಾ ಯೋಜನೆ ಜಾರಿಗೆ ತಂದರು. ಅದರ ಅಂಗವಾಗಿ ಈಗ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಬಂಪರ್ ಆಫರ್ ನೀಡಿದ್ದಾರೆ. ನಿಮ್ಮ ಆಪ್ತರನ್ನು ರೈಲಿಗೆ ಹತ್ತಿಸಲು ನಿಲ್ದಾಣಕ್ಕೆ ಹೋದ ವೇಳೆ ನೀವು ಪ್ಲಾಟ್‍ಫಾರಂ ಟಿಕೆಟ್ ಕೊಳ್ಳುವುದು ಅನಿವಾರ್ಯ. ಒಂದು ವೇಳೆ ಪ್ಲಾಟ್ ಫಾರಂ ಟಿಕೆಟ್ ಇಲ್ಲದೇ ನೀವು ರೈಲು ನಿಲ್ದಾಣ ದಲ್ಲಿದ್ದರೆ, ದಂಡ ತೆರಬೇಕಾಗಿರುವುದು ಅನಿವಾರ್ಯ.

ಈ ರೈಲ್ವೆ ಟಿಕೆಟ್‍ನ್ನು ಇನ್ಮುಂದೆ ನೀವು ಉಚಿತವಾಗಿ ಪಡೆಯಬಹುದು. ಅದು ಫಿಟ್ ಇಂಡಿಯಾ ಯೋಜನೆ ಮೂಲಕ. ರೈಲು ನಿಲ್ದಾಣದಲ್ಲಿ 3 ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಇನ್ಮುಂದೆ ಉಚಿತವಾಗಿ ಈ ಪ್ಲಾಟ್ ಫಾರಂ ಟಿಕೆಟ್ ಪಡೆಯಬಹುದು. ಈಗಾಗಲೇ ದೆಹಲಿಯಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಶೀಘ್ರದಲ್ಲಿಯೇ ದೇಶದ ಇತರೆ ರೈಲ್ವೆ ನಿಲ್ದಾಣದಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಟ್ವೀಟ್ ಮೂಲಕ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ. 180 ಸೆಕೆಂಡ್‍ಗಳಲ್ಲಿ 30 ಬಸ್ಕಿ ಹೊಡೆಯುವುದರಿಂದ ಉಚಿತ ಟಿಕೆಟ್ ಜೊತೆ ಆರೋಗ್ಯಕ್ಕೆ ಕೂಡ ಒಳಿತಾಗಲಿದೆ. ಈ ಮೂಲಕ ನಾವು ಇಂಡಿಯಾವನ್ನು ಫಿಟ್ ಆಗಿಡಬಹುದು ಎಂಬುದು ಕೇಂದ್ರ ಸಚಿವರ ಆಂಬೋಣ.

ಈ ಹಿಂದೆ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ರಾಜ ವರ್ಧನ್ ಸಿಂಗ್ ರಾಥೋಡ್ ಪ್ರಧಾನಿ ಅವರ ಈ ಅಭಿಯಾನದ ಅಂಗವಾಗಿ ‘ಹಮ್ ಫಿಟ್ ತೋ ದೇಶ್ ಫಿಟ್ ಹೋ’ ಅಭಿಯಾನ ಆರಂಭಿಸಿದ್ದರು.

Translate »