ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್  ಮೈದಾನದಲ್ಲಿ `ಶ್ವಾನಗಳ ವೈಯ್ಯಾರ’
ಮೈಸೂರು

ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ `ಶ್ವಾನಗಳ ವೈಯ್ಯಾರ’

January 14, 2019

ಮೈಸೂರು: ಅಲ್ಲಿ ಮುದ್ದು ಶ್ವಾನಗಳದ್ದೇ ಕಾರುಬಾರು. ಎಲ್ಲಿ ನೋಡಿದರೂ ಬಣ್ಣ ಬಣ್ಣದ ಶ್ವಾನಗಳು ತಮ್ಮ ಮೈಮಾಟ ಹಾಗೂ ಮುಗ್ಧತೆಯಿಂದ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದವಲ್ಲದೆ, ತಮ್ಮ ಪ್ರಾಮಾಣಿಕತೆಯಿಂದ ಗಮನ ಸೆಳೆಯುತ್ತಿದ್ದವು.

ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ `ಶ್ವಾನ ಪ್ರದರ್ಶನ’ದಲ್ಲಿ ಸುಮಾರು 22 ತಳಿಯ 250ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡು ನೆರೆದಿದ್ದ ಅಪಾರ ಸಂಖ್ಯೆಯ ಪ್ರಾಣಿ ಪ್ರಿಯರ ಮನ ಗೆದ್ದವು. ಮೈಸೂರಿನ ವಿವಿಧ ಬಡಾವಣೆ ಗಳಲ್ಲದೆ, ಬೆಂಗಳೂರು, ಮಡಿಕೇರಿ, ಕೇರಳ, ತಮಿಳುನಾಡು, ಪುಣೆ ಸೇರಿದಂತೆ ವಿವಿಧೆಡೆಗಳಿಂದ ಕರೆ ತರಲಾಗಿದ್ದ ಶ್ವಾನಗಳು ಪ್ರದರ್ಶನದಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ಸೈ ಎನಿಸಿ ಕೊಂಡವು. ಕಳೆದ ಕೆಲ ವರ್ಷಗಳಿಂದ ಕೆನೈನ್ ಕ್ಲಬ್ ಆಫ್ ಮೈಸೂರು ಸಂಸ್ಥೆ ಮೈಸೂರಿನಲ್ಲಿ ಶ್ವಾನ ಪ್ರದರ್ಶನ ಏರ್ಪಡಿಸು ತ್ತಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.

ಪ್ರದರ್ಶನದಲ್ಲಿ 3 ಕೆಜಿ ತೂಕದ ಮಿನೆಯೇಚರ್ ಪಿಂಚರ್ ತಳಿಯ ಶ್ವಾನದಿಂದ ಹಿಡಿದು 130 ಕೆಜಿ ತೂಕದ ಸೆಂಟ್ ಬರ್ನಾಡ್, ಗ್ರೇಟ್ ಡೇನ್ ಸೇರಿದಂತೆ ಇನ್ನಿತರ ತಳಿಗಳ ಶ್ವಾನಗಳು ಪಾಲ್ಗೊಂ ಡಿದ್ದವು. ಅಲ್ಲದೆ 20 ಸಾವಿರ ಬೆಲೆಬಾಳುವ ಶ್ವಾನದಿಂದ ಲಕ್ಷಾಂ ತರ ರೂ ಬೆಲೆಬಾಳುವ ಶ್ವಾನಗಳು ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದವು. ಪ್ರದರ್ಶನದಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ವನ್ ಹೌಂಡ್, ಮುದೋಳ್, ರಾಜಪಾಳ್ಯಂ, ವಿಪೆಟ್, ಪಗ್, ಶಿಜು ಟುಜ್ಸ್, ಇಂಗ್ಲೀಷ್ ಕುಕರ್ ಸ್ಪಾನಿಲ್, ಗೋಲ್ಡನ್ ರಿಟ್ರಿವರ್, ಲ್ಯಾಬ್ರಡಾರ್ ರಿಟ್ರವರ್, ಬೀಗಲ್, ಅಕಿಟ, ಚೌಚೌ, ಪಮೆರಿಯನ್, ಸೈಬೀರಿಯನ್ ಹಸ್ಕಿ, ಡಾಶ್‍ಹೌಂಡ್ ಮಿನಿಯೇಚರ್, ಡಾಶ್‍ಹೌಂಡ್ ಸ್ಟಾಂಡರ್ಡ್, ಬುಲ್ ಟೆರಿರ್, ಬಾಕ್ಸರ್, ಬುಲ್ಡಾಗ್, ಡಾಬರ್‍ಮನ್, ಗ್ರೇಟ್‍ಡೇನ್, ರಾಟ್‍ವೀಲರ್, ಸೇಂಟ್ ಬರ್ನಾಡ್, ಜೆರ್ಮನ್ ಶೆಫರ್ಡ್ ಸೇರಿದಂತೆ ಇನ್ನಿತರ ತಳಿಗಳ ಶ್ವಾನಗಳು ಎರಡು ರಿಂಗ್‍ನಲ್ಲಿ ಸ್ಪರ್ದೆಯಲ್ಲಿ ಪಾಲ್ಗೊಂಡಿದ್ದವು.

ಶ್ವಾನ ಪ್ರದರ್ಶನದಲ್ಲಿ ಉತ್ತಮ ಶ್ವಾನಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಕಾನ್ಫುರ ದಿಂದ ರಂಜೀತ್ ಎಸ್.ಮುಂಜಲ್, ಸಿ.ಎ.ಮಾರ್ಟಿನ್ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು. ಬಾಗಲಕೋಟೆ ಸಮೀಪದ ಲೋಕಪುರದ ಯಂಕಪ್ಪ ತಾವು ಸಾಕಿರುವ ಮುಧೋಳ ತಳಿಯ ಡಾಲಿ’ ಶ್ವಾನ, ಹಲಗಲಿ ನಿವಾಸಿಗಳಾದ ಬ್ಯಾನಪ್ಪ ಅವರಆರ್ಯ’, ಲಕ್ಷ್ಮಣ್ ಕಟ್ಟಿ ಅವರ ರಾಕಿ’ ಹಾಗೂ ಅರಕೆರೆ ಚೆನ್ನಬಸು ತಂದಿದ್ದ ರಕ್ಷಾ’ ಮುಧೋಳ ತಳಿ ಶ್ವಾನಗಳು ಗಮನ ಸೆಳೆದವು. ಈ ನಾಲ್ಕು ಶ್ವಾನಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿವೆ.

ಬಿಸಿಲಿನ ಬೇಗೆ: ಮುದ್ದು ಮುದ್ದಾದ ಶ್ವಾನಗಳು ಬಿಸಿಲಿನ ಬೇಗೆಗೆ ಬಳಲಿದವು. ಇಂದು ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ವಿದೇಶಿ ತಳಿಗಳ ಶ್ವಾನಗಳು ಪರದಾಡಿದವು. ಪ್ರೀತಿಯಿಂದ ಮಗುವಿನಂತೆ ಸಾಕಿದ್ದ ಶ್ವಾನಗಳು ಬಿಸಿಲಿನಿಂದ ರಕ್ಷಿಸಲು ಶ್ವಾನಗಳ ಮಾಲೀಕರು ಹರಸಾಹಸ ಮಾಡಿದರು. ನೆರೆ ರಾಜ್ಯ ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಶ್ವಾನಗಳ ಮಾಲೀಕರು ತಮ್ಮ ವಾಹನಗಳಲ್ಲಿ ಎಸಿ ಆನ್ ಮಾಡಿ ಬಿಸಿಲಿನಿಂದ ತಮ್ಮ ಮುದ್ದಿನ ಶ್ವಾನಗಳನ್ನು ರಕ್ಷಿಸಿದರು. ಕೆಲವರು ಮೈಗೆ ನೀರನ್ನು ಸಿಂಪಡಿಸಿದರೆ, ಮತ್ತೆ ಕೆಲವರು ಮಂಜುಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ ಶ್ವಾನಗಳ ಮೈಗೆ ಸವರುತ್ತಿದ್ದರು.

ಚಾಲನೆ: ಇದಕ್ಕೂ ಮುನ್ನ ಬೆಳಗ್ಗೆ ನಡೆದ ಶ್ವಾನ ಪ್ರದರ್ಶನದ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್, ಕೆನೈನ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ್, ಉಪಾಧ್ಯಕ್ಷರಾದ ಡಾ.ಎಸ್.ಸಿ.ಸುರೇಶ್, ಡಾ.ಜಯ ರಾಮಯ್ಯ, ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ, ಜಂಟಿ ಕಾರ್ಯದರ್ಶಿಗಳಾದ ಟಿ.ಶಶಿ ಕುಮಾರ್, ಎಂ.ಹೆಚ್.ತೇಜಸ್ವಿ, ಎಲ್.ಎಸ್.ಸಂದೀಪ್ ಸೇರಿದಂತೆ ಇನ್ನಿತರÀರಿದ್ದರು.

Translate »