ವಾರಾಂತ್ಯ ಬಹುರೂಪಿಗೆ ರಂಗಪ್ರಿಯರಿಂದ ಬಹುಪರಾಕ್
ಮೈಸೂರು

ವಾರಾಂತ್ಯ ಬಹುರೂಪಿಗೆ ರಂಗಪ್ರಿಯರಿಂದ ಬಹುಪರಾಕ್

January 14, 2019

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನು ವಾರ ಪ್ರದರ್ಶನಗೊಂಡ ನಾಟಕಗಳು, ಚಲನಚಿತ್ರಗಳು ಜನರಿಂದ ಮೆಚ್ಚುಗೆ ಪಡೆದವು.

ಕಿರುರಂಗ ಮಂದಿರದಲ್ಲಿ ಪ್ರದರ್ಶನ ಗೊಂಡ ಮರಾಠಿ ಭಾಷೆಯ ಏಕ ಧೋತ ರಾಚಿ ಗೋಷ್ಟಾ’, ಭೂಮಿಗೀತ-ಕನ್ನಡದ ಶ್ರೀದೇವಿ ಮಹಾತ್ಮೆ, ವನರಂಗ- ಬೆಂಗಾಲಿ ಭಾಷೆಯ 1084’ಸ್ ಮದರ್, ಕಲಾಮಂದಿರದಲ್ಲಿ ಪ್ರದರ್ಶನಗೊಂಡ ಮಲಯಾಳಂನ ಮಹಾಸಾರಂಗಂ’ ನಾಟಕಗಳು ಜನರ ಮನಗೆದ್ದವು.

ಡಾ.ಮಿಲಿಂದ್ ಇನಾಮ್‍ದಾರ್ ನಿರ್ದೇಶನದ ಏಕ ಧೋತರಾಚಿ ಕೋಷ್ಟಾ’ ನಾಟಕವು ಮಹಾರಾಷ್ಟ್ರದ ಜಾನಪದ ತಮಾಷಾ’ ಶೈಲಿಯಲ್ಲಿದ್ದು, ತಮಾಷಾ ಆಟಗಾರರಿಂದ ಏನೋ ಅಚಾತುರ್ಯ ನಡೆದುಬಿಡುತ್ತದೆ. ಈ ಕಾರಣಕ್ಕಾಗಿ `ಅಭಿಮಾನಿ ಸಂಘಟನಾ’ ಎಂಬ ಗುಂಪು ಮತ್ತೆ ಮತ್ತೆ ಆಟಗಾರರ ಮೇಲೆ ಹಲ್ಲೆ ಮಾಡುತ್ತಿರುತ್ತದೆ. ಇದು ಹಿಂಸಾಚಾರಕ್ಕೆ ಕಾರಣವಾಗುತ್ತದೆ. ಈ ತರಹದ ಗುಂಪುಗಳು ನಮ್ಮ ದೇಶದಲ್ಲಿ ಹೆಚ್ಚಾಗುತ್ತಿದ್ದು, ಇದರಿಂದ ಅಮಾಯಕರು ಬಲಿಪಶು ಆಗುತ್ತಿದ್ದಾರೆ ಎನ್ನುವುದರತ್ತ ಗಮನ ಸೆಳೆಯುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತುತ್ತದೆ.

ಭೂಮಿಗೀತದಲ್ಲಿ ಪ್ರದರ್ಶನಗೊಂಡ ಎನ್.ಮಂಗಳ ನಿರ್ದೇಶನದ `ಶ್ರೀದೇವಿ ಮಹಾತ್ಮೆ’ ನಾಟಕವು ವೇಗದ ಬದುಕಿಗೆ ಹೆಸರಾಗಿರುವ ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ ನಡೆಯುವ ಕಾರ್ಪೊರೇಟ್ ಜಗತ್ತು, ಬದುಕನ್ನು ಎದುರುಗೊಳ್ಳುವ ಬೇರೆ ಬೇರೆ ಸನ್ನಿವೇಶಗಳು ಮತ್ತು ಅದನ್ನು ಅರ್ಥೈಸಿಕೊಳ್ಳುವ ಮೂಲಕ ಜೀವನವನ್ನು ಗ್ರಹಿಸುವ ಪರಿಯ ದರ್ಶನ ಮಾಡಿಸುತ್ತದೆ.

ವಿಜಯ್ ಸಾಫ್ಟ್‍ವೇರ್ ಉದ್ಯೋಗಿ ಯಾಗಿದ್ದು, ಐಷಾರಾಮಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿರುತ್ತಾನೆ. ಮನೆ ಕೆಲಸಕ್ಕೆ ಚಿತ್ತೂರಿನ ಹಳ್ಳಿಯಿಂದ ಬಂದ ಶ್ರೀದೇವಿಗೆ ಎಲ್ಲವೂ ಹೊಸದಾಗಿ ಕಾಣಿಸು ತ್ತವೆ. ಶ್ರೀದೇವಿಯು ಮುಗ್ದ ಪ್ರಶ್ನೆಗಳು, ಸರಳ ಜೀವನ ತತ್ವಗಳ ಮೂಲಕ ವಿಜಯ್‍ಗೆ ಮುಖಾ-ಮುಖಿಯಾಗುತ್ತಾಳೆ. ಕಾರ್ಪೊ ರೇಟ್ ಬದುಕಿನಲ್ಲಿ ಕಳೆದುಹೋಗಿದ್ದ ವಿಜಯ್, ಶ್ರೀದೇವಿಯ ಮೂಲಕ ಮತ್ತೆ ಬದುಕಿನ ಹಲವು ವಿಷಯಗಳನ್ನು ಮತ್ತೆ ಹೊಸದಾಗಿ ನೋಡಲು ಪ್ರಾರಂಭಿಸು ತ್ತಾನೆ. ಅಪಾರ್ಟ್‍ಮೆಂಟ್ ಸೆಕ್ಯುರಿಟಿ, ಬದು ಕಿನ ವಾಸ್ತವದ ಹಲವು ಮುಖಗಳನ್ನು ವಿಜಯ್‍ಗೆ ಅರ್ಥ ಮಾಡಿಸುತ್ತಾನೆ. ಈ ಎಲ್ಲಾ ಸನ್ನಿವೇಶಗಳ ನಾಟಕ ಜನರ ಮೆಚ್ಚುಗೆ ಗಳಿಸಿತು.

ಕಲಾಮಂದಿರದಲ್ಲಿ ಪ್ರದರ್ಶನಗೊಂಡ ಪ್ರಶಾಂತ್ ನಾರಾಯ ಣನ್ ನಿರ್ದೇಶನದ ಮಲಯಾಳಂನ ಮಹಾಸಾಗರಂ’ ಎಂ.ಟಿ.ವಾಸುದೇವನ್ ಅವರ 12 ಕತೆಗಳನ್ನು ಆದರಿಸಿದ ನಾಟಕ. ಇದರಲ್ಲಿನ ಪಾತ್ರಗಳು ಪ್ರೇಕ್ಷಕರಿಗೆ ತೀರಾ ಪರಿಚಿತ ಎನ್ನುವಂತೆ ಕೌಟುಂಬಿಕ, ಸಾಮಾ ಜಿಕ ರೂಢಿಗಳು, ಇಂದಿನ ಕೇರಳದ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಆ ಮೂಲಕ ಕಲಾ ಪ್ರೇಕ್ಷಕರ ಪ್ರಸಂಶೆಗೆ ಪಾತ್ರವಾದವು. ವನರಂಗದಲ್ಲಿ ರೆಜಿನ್ ರೋಸ್ ನಿರ್ದೇಶನದ ಬೆಂಗಾಲಿಯ 1084ಸ್ ಮದರ್’ ನಾಟಕ ಪ್ರದರ್ಶನಗೊಂಡಿತು.

ಚಲನಚಿತ್ರೋತ್ಸವ- ಶ್ರೀರಂಗ: ಸ್ಯಾಮ್ಯೂಯಲ್ ಪಾಮೆರ್ ನಿರ್ದೇಶನದ ನೋ ಮೋರ್ ಬಾಯ್ಸ್ ಅಂಡ್ ಗಲ್ರ್ಸ್-ಕೆನ್ ಅವರ್ ಕಿಡ್ಸ್ ಗೋ ಜೆಂಡರ್ ಫ್ರೀ’, ಜೋಹಾನ್ ಡೆಮಿಟ್ರ್ರಿಕಸ್ ನಿರ್ದೇಶನದ ಫೆಮಿನಿಸ್ಟ್: ವಾಟ್ ಆರ್ ದೇ ಥಿಂಕಿಂಗ್’, ಲಾರ್ಸ್ ವಾನ್ ಟ್ರೈಯರ್ ನಿರ್ದೇಶನದ `ಡಾಗ್ವಿಲ್ಲಿ’ ಪ್ರದರ್ಶನಗೊಂಡವು.

ಸಾಂಸ್ಕೃತಿಕ ಕಾರ್ಯಕ್ರಮ: ವೃತ್ತಿ ರಂಗ ಭೂಮಿಯ ಕಲಾವಿದರಾದ ಹುಲಿಕಲ್ ನಾಗರಾಜು, ಶಾಂತಕುಮಾರ್, ಡಾ.ಜಿ. ಶೀಲಾನಾಯ್ಡು, ಎಲ್.ಎಂ.ಶ್ವೇತಾ ಅವರು ಹಾಡಿದ ವಿವಿಧ ವೃತ್ತಿರಂಗಭೂಮಿ ಗೀತೆ ಗಳಿಗೆ ಸಾಗರ್(ತಬಲ) ಸಾಥ್ ನೀಡಿ ದರೆ, ಚಿಕ್ಕಮಗಳೂರು ತಂಡದವರು ಮಹಿಳಾ ವೀರಗಾಸೆ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.
ರಂಗಾಯಣದತ್ತ ಪ್ರೇಕ್ಷಕರ ದಂಡು: ಶನಿವಾರದಿಂದ ಆರಂಭವಾದ ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ನಾಟಕಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆ ಯಲ್ಲಿ ಜನರು ಬಂದಿದ್ದರಿಂದ ರಂಗಾ ಯಣ ಕಿಕ್ಕಿರಿದು ತುಂಬಿತ್ತು.

ವಾಹನ ದಟ್ಟಣೆ: ನಾಟಕ, ಚಲನಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮ, ಉಡುಪುಗಳು, ಪುಸ್ತಕಗಳ ಖರೀದಿ, ಖಾದ್ಯಗಳ ಸವಿ ಯಲು ಬೈಕ್-ಕಾರುಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಜನರು ಆಗಮಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು.

ರಸ್ತೆ ಬದಿ ಪಾರ್ಕಿಂಗ್: ರಂಗಾಯಣಕ್ಕೆ ಆಗಮಿಸಿ ಸಾರ್ವಜನಿಕರ ವಾಹನಗಳಿಗೆ ಹುಣಸೂರು ರಸ್ತೆಯಿಂದ ಬೋಗಾದಿ ಜಂಕ್ಷನ್ ರಸ್ತೆಯ ಎರಡೂ ಬದಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಬಾಯಿರುಚಿ: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ 2ನೇ ದಿನವೂ ಜನರು ಖಾದ್ಯಗಳತ್ತ ಬಹಳ ಆಕರ್ಷಿತರಾಗಿ ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸವಿದರು.

ಮೈಸೂರಿನ ರಂಗಾಯಣದ ಆವರಣ ದಲ್ಲಿ ತೆರೆದಿರುವ ಆಹಾರ ಮಳಿಗೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೌಡಾ ಯಿಸಿ, ಮಸಾಲೆ ದೋಸೆ, ಚುರುಮುರಿ, ಹೋಳಿಗೆ ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನು ಆಸ್ವಾದಿಸಿದರು.

ಬಾಗಲಕೋಟೆ ಸ್ಪೆಷಲ್ ಮಳಿಗೆಯಲ್ಲಿ ಜೋಳದ ರೊಟ್ಟಿ-ಎಣ್ಣೆಕಾಯಿ ಪಲ್ಯ, ಹೋಳಿಗೆ, ಗಿರ್ಮಿಟ್ಟು, ಮಿರ್ಚಿಬಜ್ಜಿ, ಸಬ್ಬಕ್ಕಿ ವಡೆ, ದಾವಣಗೆರೆ ಬೆಣ್ಣೆ ದೋಸೆ ಗಳನ್ನು ಸವಿದರೆ, ರಾಮಣ್ಣ ಅಂಡ್ ಸನ್ಸ್ ಚುರುಮುರಿ ಕಾರ್ನರ್ ಮಳಿಗೆಯಲ್ಲಿ ದತ್ತ ಸ್ಪೆಷಲ್ ಕೊಬ್ಬರಿ ಮಿಠಾಯಿ, ಜೈನ್ ಸ್ಪೆಷಲ್, ಬೇಬಿ ಕಾರ್ನ್ ಮಸಾಲೆ, ದತ್ತ ಸ್ಪೆಷಲ್ ಮಾವಿನಕಾಯಿ, ಮಸಾಲೆ ನಿಪ್ಪಿಟ್ಟು ಮತ್ತಿತರೆ ಖಾದ್ಯಗಳನ್ನು ಸವಿದರು.

Translate »