ಮೈಸೂರು,ಆ.12(ಆರ್‍ಕೆ)-ಕೊಡಗು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳ ನೆರೆ ಸಂತ್ರಸ್ತರಿಗಾಗಿ ಅನಧಿಕೃತ ವ್ಯಕ್ತಿಗಳಿಗೆ ಹಣ ಅಥವಾ ಸಾಮಗ್ರಿಗಳನ್ನು ನೀಡಬಾರದೆಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಸಂತ್ರಸ್ತರ ನೆರವಿಗಾಗಿ ಹಲವು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ವಿವಿಧ ಸಾಮಗ್ರಿಗಳು ಹಾಗೂ ಹಣ ಸಂಗ್ರಹಿಸುತ್ತಿರು ವುದು ಸರಿಯಷ್ಟೆ. ಆದರೆ, ಕೆಲವು ಅನಧಿಕೃತ ವ್ಯಕ್ತಿಗಳೂ ಸಹ ದೇಣಿಗೆ ಹಣ ಸಂಗ್ರಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅದು ಕಾನೂನುಬಾಹಿರ ಎಂದು ಅವರು ತಿಳಿಸಿದ್ದಾರೆ. ಸಹಾಯ ಮಾಡಬಯಸುವವರು ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ-ನೈಸರ್ಗಿಕ ವಿಪತ್ತು ಖಾತೆ ಸಂಖ್ಯೆ 37887098605, ಐಎಫ್‍ಎಸ್‍ಸಿ ಕೋಡ್ ಎಸ್‍ಬಿಐಎನ್ 0040277, ಎಂಐಸಿಆರ್ 560002419ಗೆ ಹಣ ವರ್ಗಾವಣೆ ಮಾಡಬೇಕು ಹಾಗೂ ಮೈಸೂರಿನ ಪುರಭವನದಲ್ಲಿ ತೆರೆಯಲಾಗಿರುವ ಜಿಲ್ಲಾಡಳಿತದ ಕೇಂದ್ರಕ್ಕೆ ಅಗತ್ಯ ಸಾಮಗ್ರಿ ಗಳನ್ನು ನೀಡಿ ರಶೀದಿ ಪಡೆಯುವಂತೆ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ. ಅನಧಿಕೃತವಾಗಿ ದೇಣಿಗೆ ಹಣ ಮತ್ತು ಸಾಮಗ್ರಿ ಸಂಗ್ರಹಿಸಿ ದುರ್ಬಳಕೆ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಅಂತಹ ವ್ಯಕ್ತಿಗಳು ಹಣ ಸಂಗ್ರಹಣೆ ಮಾಡುತ್ತಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ (0821-2418339) ಗೆ ಮಾಹಿತಿ ನೀಡುವಂತೆಯೂ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.