ವರದಕ್ಷಿಣೆ ಕಿರುಕುಳ: ಗರ್ಭಿಣಿ ಆತ್ಮಹತ್ಯೆ ಪತಿ ಸೇರಿ ಐವರು ಪೊಲೀಸ್ ವಶಕ್ಕೆ
ಮೈಸೂರು ಗ್ರಾಮಾಂತರ

ವರದಕ್ಷಿಣೆ ಕಿರುಕುಳ: ಗರ್ಭಿಣಿ ಆತ್ಮಹತ್ಯೆ ಪತಿ ಸೇರಿ ಐವರು ಪೊಲೀಸ್ ವಶಕ್ಕೆ

March 8, 2020

ಹುಣಸೂರು, ಮಾ.7(ಕೆಕೆ)-ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ಶನಿವಾರ ನಗರದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಕಾಲೋನಿಯ ನಿವಾಸಿ ಯೋಗೇಶ್ ಪತ್ನಿ ಲಕ್ಷ್ಮಿ(23) ನೇಣಿಗೆ ಶರಣಾದ ಗೃಹಿಣಿ. ಘಟನೆ ಸಂಬಂಧ ಪತಿ ಯೋಗೇಶ್, ಮಾವ ಕಾಳೇಗೌಡ, ಅತ್ತೆ ಚಿಕ್ಕಮಣ್ಣಿ, ಯೋಗೇಶ್ ಸಹೋದರರಾದ ಕುಮಾರಸ್ವಾಮಿ, ಮಹೇಂದ್ರರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಘಟನೆ ವಿವರ: ಎಂದಿನಂತೆ ಶನಿವಾರ ಬೆಳಿಗ್ಗೆ ಮನೆ ಕೆಲಸ ಮುಗಿಸಿ 9.30ರ ಸಮಯ ದಲ್ಲಿ ತನ್ನ ರೂಂಗೆ ತೆರಳಿದ ಲಕ್ಷ್ಮಿ, ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೂಂಗೆ ತೆರಳಿದ ಪತ್ನಿ ಸಾಕಷ್ಟು ಸಮಯವಾದರೂ ಹೊರ ಬಾರದಿದ್ದನ್ನು ಗಮನಿಸಿದ ಪತಿ ಯೋಗೀಶ್, ರೂಂ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ದೇಹವನ್ನು ಕೆಳಗಿಳಿಸಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತದರೂ ಆ ವೇಳೆಗಾಗಲೇ ಲಕ್ಷ್ಮಿ ಅಸುನೀಗಿದ್ದರು.

ನಂಜನಗೂಡು ತಾಲೂಕು ಮಂಚ್ಚಳ್ಳಿಹುಂಡಿ ಗ್ರಾಮದ ಬಿ.ಬಸವಣ್ಣ ಪುತ್ರಿ ಲಕ್ಷ್ಮಿಯನ್ನು 10 ತಿಂಗಳ ಹಿಂದಷ್ಟೇ ಹುಣಸೂರು ನಗರದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿಯ ಕಾಳೇಗೌಡರ ಪುತ್ರ ಯೋಗೇಶ್‍ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ ವರೋಪಚಾರವಾಗಿ 50 ಲಕ್ಷ ರೂ. ನಗದು 400 ಗ್ರಾಂ. ಚಿನ್ನಾಭರಣ ನೀಡಲಾಗಿತ್ತು. ಅಲ್ಲದೆ ನಿವೇಶನ ಕೋಡುವುದಾಗಿಯೂ ಮಾತು ನೀಡಲಾಗಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಮನೆಯಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ನಿವೇಶನ ನೋಂದಣಿ ವಿಳಂಬದ ಹಿನ್ನೆಲೆಯಲ್ಲಿ ಪತಿ ಮನೆಯವರು ಕಿರುಕುಳ ನೀಡಿದ್ದರಿಂದ ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅರೊಪಿಗಳ ವಿರುದ್ಧ ವರದಕ್ಷಿಣೆ ಕಿರುಕುಳ ಸಂಬಂಧ ಪ್ರಕರಣ ಸಂಖ್ಯೆ.52/2020 ಐಪಿಸಿ ಕಾಯ್ದೆ 304ಬಿ ರೇಡ್ ವಿತ್ 34 ಅಡಿ ನಗರ ಠಾಣೆ ಪಿಎಸ್‍ಐ ಮಹೇಶ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ. ದೇಹವನ್ನು ಮರಣೋತ್ತರ ಮೈಸೂರು ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.

Translate »