ಪ್ರಕೃತಿ ವಿಕೋಪ ಸಂತ್ರಸ್ತರ ನಿಧಿಗಾಗಿ ನಾಟಕ ಪ್ರದರ್ಶನ
ಕೊಡಗು

ಪ್ರಕೃತಿ ವಿಕೋಪ ಸಂತ್ರಸ್ತರ ನಿಧಿಗಾಗಿ ನಾಟಕ ಪ್ರದರ್ಶನ

October 26, 2018

ಮಡಿಕೇರಿ: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಮೈಸೂರಿನ ನಟನ ಸಂಸ್ಥೆ ಯಿಂದ ನಗರದಲ್ಲಿ ಆಯೋಜಿಸಲ್ಪಟ್ಟ ಹೆಸರಾಂತ ಕಲಾವಿದ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ಕಲಾಪ್ರೇಮಿಗಳ ಮನತಟ್ಟು ವಲ್ಲಿ ಸಫಲವಾಯಿತು. ಚೋರಚರಣದಾಸ ನಾಟಕಕ್ಕೆ ಭಾರತೀಯ ವಿದ್ಯಾಭವನದ ಸಭಾಂಗಣ ಸಂಪೂರ್ಣ ಭರ್ತಿಯಾಗಿದ್ದು ಕಲಾಪ್ರೇಮಿಗಳ ಸ್ಪಂದನೆಗೆ ಸಾಕ್ಷಿಯಾಗಿತ್ತು.

ನಾಟಕ ಪ್ರದರ್ಶನಕ್ಕೆ ಮುನ್ನ ಮಾತನಾಡಿದ ರಂಗನಿರ್ದೇಶಕ ಮಂಡ್ಯ ರಮೇಶ್, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಃಸ್ಥಿತಿ ಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟು ನಟನ ಎಂಬ ಸಮಾನ ಮನಸ್ಕರ ತಂಡ ರೂಪಿಸಿದ್ದಾಗಿ ಹೇಳಿದರು. ನಟನ ಮೂಲಕ ಈಗಾಗಲೇ ರಂಗತರಬೇತಿ ಶಿಬಿರ ಆಯೋಜಿಸುವ ಮೂಲಕ ನೂರಾರು ರಂಗನಟರನ್ನು ಕಲಾ ಪ್ರಪಂಚಕ್ಕೆ ಪರಿಚಯಿಸಿದ್ದಾಗಿ ಹೇಳಿದ ಅವರು, ನಟನ ತಂಡ ಜಾಗತಿಕ ಮಟ್ಟದಲ್ಲಿಯೂ ಹೆಸರು ವಾಸಿಯಾಗಿದ್ದು ಹಲವಾರು ದೇಶಗಳಲ್ಲಿಯೂ ನಟನ ತಂಡ ರಂಗಪ್ರದರ್ಶನ ನೀಡಿದ್ದಾಗಿ ಮಂಡ್ಯ ರಮೇಶ್ ಮಾಹಿತಿ ನೀಡಿದರು. ಚೋರಚರಣದಾಸ ಕೊಡಗಿನಲ್ಲಿ ಸಂಭವಿಸಿದ ಪ್ರಕೃತ್ತಿ ವಿಕೋಪ ಸಂತ್ರಸ್ಥರ ನೆರವಿಗಾಗಿ ನಿಧಿ ಸಂಗ್ರಹದ ಉದ್ದೇಶದಿಂದ ಪ್ರದರ್ಶಿತಗೊಂಡಿತ್ತು.

ಆಕರ್ಷಿಸಿದ ಚೋರಚರಣದಾಸ: ಇದು ವಚನ ಭ್ರಷ್ಟತೆಯ ಕಾಲ, ಮಾತು ತಪ್ಪುವುದರಲ್ಲಿ, ಕಣ್ಮುಂದೆಯೇ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಅನೇಕರು. ಅದರಲ್ಲೂ ಮೊಬೈಲ್ ಎಂಬ ನಿಸ್ತಂತು ದೂರವಾಣಿ ಬಂದ ಮೇಲಂತೂ ಯಾರ ಮಾತಿಗೂ ಬೆಲೆಯೇ ಇಲ್ಲ ಎಂಬಂತಾಗಿದೆ. ಬಾಯಿ ತೆರೆದರೆ ಸುಳ್ಳು ತಾಂಡವವಾಡುತ್ತದೆ. ಸತ್ಯ ಬಾಲ ಮುದುರಿಕೊಂಡು ಮೂಲೆ ಸೇರಿಬಿಡುತ್ತದೆ. ಮಾತು ಎನ್ನುವುದು ಕೇವಲ ಶಬ್ಧವಲ್ಲ, ಅದು ಅಂತರಾತ್ಮದ ಕೂಗು ಎಂಬ ವಾಸ್ತವ ಮರೆತೇ ಹೋಗಿದೆ. ಇದೇ ಅಂಶವನ್ನು ಮುಖ್ಯವಾಗಿರಿಸಿ ಕೊಂಡು ರೂಪುಗೊಂಡದ್ದೇ ಚೋರಚರಣದಾಸ ರಂಗ ಪ್ರಯೋಗ.

ಆ ಊರಲ್ಲೊಬ್ಬ ಸನ್ಯಾಸಿ, ಆತನ ಶಿಷ್ಯತ್ವವನ್ನು ಬಯಸಿ ಆಸ್ತಿಕರಲ್ಲದೇ, ಲಂಪಟರು, ಬ್ರಷ್ಟರು, ಲಫಂಗರು ಅಡ್ಡ ಬೀಳುತ್ತಿರುತ್ತಾರೆ. ‘ಸರ್ವಸಂಗ ಪರಿತ್ಯಾಗಿಯಾಗಿ ನನ್ನೆಡೆಗೆ ಬಾ’ ಎಂಬ ಗುರುವಿನ ಉಪದೇಶಕ್ಕನು ಗುಣವಾಗಿ ತಮ್ಮ ಇಚ್ಚಾನುಸಾರ ಶಿಷ್ಯ ಪಡೆ ಈ ಕಪಟ ಸನ್ಯಾಸಿಗೆ ಬೆಳೆಯುತ್ತದೆ. ಆಗ ಪ್ರತ್ಯಕ್ಷನಾಗು ತ್ತಾನೆ ಚೋರ ಚರಣದಾಸ.
ಆತನದ್ದು ಇಡೀ ಪ್ರದೇಶದಲ್ಲೇ ಕುಖ್ಯಾತ ಹೆಸರು. ಹೆಸರು ಕೇಳಿದರೆ ಜನ ನಡುಗುವಂಥ ಕುಖ್ಯಾತಿ ಈತನದ್ದು. ಅಂಥವನು ಆ ಯತಿಯ ಕಾಲಿಗೆ ಬೀಳು ತ್ತಾನೆ. ಶಿಷ್ಯತ್ವ ದಯಪಾಲಿಸು ಎನ್ನುತ್ತಾನೆ.

ಗುರು ಷರತ್ತು ವಿಧಿಸುತ್ತಾನೆ. ಒಂದೇನು ನಾಲ್ಕು ಮಾತು ಕೊಡುತ್ತೇನೆ. ಮಾತಿಗೆ ಬದ್ಧನಾಗುತ್ತೇನೆ ಎನ್ನುತ್ತಾನೆ ಚರಣದಾಸ.
ಚರಣದಾಸ ಬದುಕಿನಲ್ಲಿ ಹಂತ ಹಂತಕ್ಕೂ ಗುರು ವಿಗೆ ಕೊಟ್ಟ ಮಾತನ್ನು ಮುರಿಯುವ ಪ್ರಸಂಗಗಳು ಆಗಿಂದಾಗ್ಗೆ ಎದುರಾಗುತ್ತಲೇ ಇರುತ್ತದೆ. ಚೋರನಿಗೆ ಉಭಯ ಸಂಕಟ. ವಚನ ಭ್ರಷ್ಟನಾಗುವುದೆ? ಕೊಟ್ಟ ಮಾತಿಗೆ ಬದ್ಧನಾಗುವುದೇ? ಆತ ನಿಜಕ್ಕೂ ಗೊಂದಲಕ್ಕೊಳಗಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾನೆ ಎಂಬುದೇ ಚೋರಚರಣದಾಸದ ಕಥಾವಸ್ತು.
ಅಂತಿಮವಾಗಿ ನಾಟಕದ ಪ್ರೇಕ್ಷಕರು ಬಯಸುವಂತೆ ವಿಭಿನ್ನ ರೀತಿಯಲ್ಲಿ ನಾಟಕಕ್ಕೆ ಅಂತ್ಯಕಾಣಿ ಸುವ ಮೂಲಕ ಚೋರಚರಣದಾಸ ವಿಭಿನ್ನತೆ ಯೊಂದಿಗೆ ವಿಶಿಷ್ಟತೆಗೆ ಕಾರಣವಾಯಿತು.

ಮೂರು ದಶಕಗಳಷ್ಟು ಹಿಂದಿನ ಹಬೀಬ್ ತನ್ವೀರರ ಮೂಲಕಥೆಯ ಈ ರಂಗಪ್ರಯೋಗಕ್ಕೆ 2017 ರಲ್ಲಿ ರಂಗಸೇವೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದ ರಂಗ ನಿರ್ದೇಶಕ, ರಂಗನಟ, ಸಿನಿಮಾ ಕಲಾವಿದ ಮಂಡ್ಯ ರಮೇಶ್ ಅವರ ಸಮರ್ಥ ನಿರ್ದೇಶನವಿತ್ತು.

ಸಾರ್ವಕಾಲಿಕವಾಗಿದೆ ಎನ್ನುವಂತೆ ಅನೇಕ ವಾಸ್ತವ ಸತ್ಯಗಳನ್ನು ದ್ವನಿಸುತ್ತದೆ. ಅತ್ಯಂತ ವಿಡಂಬ ನಾತ್ಮಕವಾಗಿ, ಕೃತಿಯ ಆಂತರಿಕ ದ್ವನಿಯೊಂದಿಗೆ ಈ ಜಾಯಮಾನಕ್ಕೆ ಒಗ್ಗುವ ಹಾಗೆ ನಾಟಕ ವೇದಿಕೆಯಲ್ಲಿ ತೆರೆದುಕೊಳ್ಳುತ್ತದೆ.

ರಂಗದ ಮೇಲೆ ಕಾಣಿಸಿಕೊಂಡವರು: ಚರಣ ದಾಸನ ಪಾತ್ರದಲ್ಲಿ ಮಂಜು ಮೈಸೂರು, ಹವಾಲ್ದಾರ/ ಟಿ.ವಿ.ಶೂನ್ಯ ಪಾತ್ರಧಾರಿಯಾಗಿ ರಾಗ ಅರಸ್, ರಾಣಿಯಾಗಿ ಛಾಯಾಶ್ರೀ ಯು, ಸಖಿಯಾಗಿ ದಿಶಾ ರಮೇಶ್ ಸಾದುವಾಗಿ ರಾಮು ನಟನ, ಶಿಷ್ಯನಾಗಿ ಪೃಥ್ವಿ ಮೈಸೂರು, ಮಂತ್ರಿ/ಜೂಜುಗಾರನಾಗಿ ನಂಜುಂಡ ಸ್ವಾಮಿ, ಪೂಜಾರಿ/ ಸೈನಿಕ1/ ಕಳ್ಳ : ಅಖಿಲೇಶ್ ಕೃಷ್ಣ ಮೈಸೂರು. ಜಮೀನ್ದಾರ/ಸೈನಿಕನಾಗಿ ಅರ್ಜುನ್ ಬರ್ಲಳ್ಳಿ, ಗುಮಾಸ್ತನ ಪಾತ್ರದಲ್ಲಿ ಪ್ರಭು ಸರಗೂರು, ಭಿಕ್ಷುಕ ನಾಗಿ ಅಕ್ಷಯ್ ವಿ ಒಡೆಯರ್, ಕುಂಟನಾಗಿ ಚೇತನ್ ತಳಗ, ಕುಡುಕನಾಗಿ ತಿಲಕ್ ಕುಮಾರ್, ಗಾಂಜ ವಾಲನಾಗಿ ಮನೋಜ್ ಭಾರದ್ವಾಜ್, ಗುಂಡನ ಪಾತ್ರದಲ್ಲಿ ಬಸವರಾಜು, ಟಿವಿ ರಿಪೋರ್ಟರ್/ ಮಿ.ಕುಕ್ಕರಳ್ಳಿ ಪಾತ್ರಧಾರಿಯಾಗಿ ವೀಣಾ ನಾಗಮಂಗಲ, ಕ್ರಾಂತಿಕಾರಿ/ ಮುಸ್ಲಿಂ ಪಾತ್ರದಲ್ಲಿ ಅಮರ್ ಮೈಸೂರು, ಹಳ್ಳಿ ಹೆಂಗಸಾಗಿ ರಂಜನಾ ಖೇರಾ, ಹುಚ್ಚವೆಂಕಟ/ ಸೈನಿಕ ಪಾತ್ರದಲ್ಲಿ ಪ್ರಮೋದ್ ಮೈಸೂರು, ವಾಷಿಂಗ್ ಪೌಡರ್ ಪಾತ್ರಧಾರಿ ಯಾಗಿ ಹಿತಾ ರಾಗ್, ಊರಿನ ಜನರಾಗಿ ಕಾರ್ಣಿಕಾ ವಿ ನಾಯಕ್, ನಂದೀಶ್ ಮೈಸೂರು ಅಭಿನಯಿಸಿದ್ದರು.

ಚೋರಚರಣದಾಸ ನಾಟಕಕ್ಕೆ ಚಂದ್ರಶೇಖರ ಹೆಗ್ಗೂಠಾರ ಸ್ವರಸಂಯೋಜನೆ ನೀಡಿದ್ದು, ಸರೋಜ ಹೆಗಡೆ ರಂಗಾಯಣ ವಸ್ತ್ರವಿನ್ಯಾಸ ನೀಡಿದ್ದಾರೆ. ಮೇಘ ಸಮೀರ, ದಿಶಾ ರಮೇಶ್ ಸಂಗೀತ, ಚೇತನ್ ಸಿಂಗಾನಲ್ಲೂರು ಪ್ರಸಾಧನ ನೀಡಿದ್ದರು.

Translate »