ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗದಿರಲು ಮುಂಜಾಗ್ರತೆಗೆ ಡಿಸಿ ಸೂಚನೆ
ಮೈಸೂರು

ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗದಿರಲು ಮುಂಜಾಗ್ರತೆಗೆ ಡಿಸಿ ಸೂಚನೆ

March 3, 2020

ಮೈಸೂರು, ಮಾ.2- ಬೇಸಿಗೆ ಕಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ದ್ಯಂತ ಸಾರ್ವಜನಿಕರಿಗೆ ನೀರಿನ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಅನು ಸರಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿ ಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಜಿಲ್ಲಾಧಿಕಾರಿಗಳು, ನೀರಿನ ಅಭಾವ ಕಂಡು ಬರುವ ಮುನ್ಸೂಚನೆ ಇರುವ ಪ್ರದೇಶಗಳನ್ನು ಗುರುತಿಸಿ ಕೂಡಲೇ ಸ್ಪಂದಿಸಲು ಮುಂದಾಗಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಕಳೆದ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ಅಂತರ್ಜಲ ಸಮೃದ್ಧಿ ಯಾಗಿದೆ. ಆದ್ದರಿಂದ ನೀರಿನ ಕೊರತೆ ಕಂಡುಬಂದ ಪ್ರದೇಶಗಳಲ್ಲಿ ಬೋರ್ ವೆಲ್‍ಗಳ ಮೂಲಕ ನೀರನ್ನು ಒದಗಿಸಲು ಕಾರ್ಯಪ್ರವೃತ್ತರಾಗಬೇಕು. ಅಲ್ಲದೆ, ಜಿಲ್ಲಾ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ವಾಸಿ ಸುವ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ತಿಳಿಸಿದರು.

ತಿ.ನರಸೀಪುರ, ಹುಣಸೂರು, ಪಿರಿಯಾ ಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್.ನಗರ, ನಂಜನಗೂಡು ಸೇರಿದಂತೆ ಆಯಾ ತಾಲೂಕು ಅಧಿಕಾರಿಗಳು ನೀರಿನ ಅಭಾವ ಕಂಡು ಬರುವ ಗ್ರಾಮಗಳನ್ನು ಗುರುತಿಸಿ, ನೀರಿನ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಅನು ಸರಿಸಬೇಕು. ಅನಿವಾರ್ಯವಾದರೆ ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆದು ನೀರನ್ನು ಸರಬರಾಜು ಮಾಡಿ ಎಂದು ಅಧಿ ಕಾರಿಗಳಿಗೆ ಅವರು ಸೂಚಿಸಿದರು.

ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ವ್ಯತ್ಯಾಸದಿಂದ ಕಂಡುಬರುವ ಕಾಯಿಲೆಗಳ ಬಗ್ಗೆ ಆಯಾ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು. ಅಲ್ಲದೆ, ಸಹಾಯವಾಣಿ ಏರ್ಪಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ತಿಳಿಸಿದರು. ಸಭೆಯಲ್ಲಿ ಎಡಿಸಿ ಬಿ.ಆರ್.ಪೂರ್ಣಿಮಾ, ಜಿಪಂ ಸಿಇಓ ಕೆ.ಜ್ಯೋತಿ, ಉಪವಿಭಾಗಾಧಿಕಾರಿ ಡಾ.ವೆಂಕಟ ರಾಜು, ಡಿಡಿಪಿಐ ಡಾ.ಪಾಂಡುರಂಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ವೆಂಕಟೇಶ್ ಸೇರಿದಂತೆ ಜಿಲ್ಲೆಯ ತಾಲೂಕು ಅಧಿಕಾರಿಗಳು ಇದ್ದರು.

Translate »