ವರುಣಾ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗೆ ಸಚಿವರಿಂದ ಚಾಲನೆ
ಮೈಸೂರು

ವರುಣಾ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗೆ ಸಚಿವರಿಂದ ಚಾಲನೆ

October 6, 2018

ಮೈಸೂರು: ಮೈಸೂರು ತಾಲೂಕು, ವರುಣಾ ಕೆರೆಯಲ್ಲಿ ಶಾಶ್ವತ ಜಲ ಸಾಹಸ ಕ್ರೀಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಂದು ಚಾಲನೆ ನೀಡಿದರು.

ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯರೊಂದಿಗೆ ಬೋಟ್‍ನಲ್ಲಿ ಜಾಲಿ ರೈಡ್ ಮಾಡುವ ಮೂಲಕ ಸಚಿವದ್ವಯರು ಜಲ ಸಾಹಸ ಕ್ರೀಡೆಗೆ ಚಾಲನೆ ನೀಡಿದರು.

ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಜಿ.ಟಿ.ದೇವೇಗೌಡರು, ಕೇವಲ ದಸರಾ ಸಂದರ್ಭ ಆಯೋಜಿಸುತ್ತಿದ್ದ ಕ್ರೀಡೆಗೆ ಉತ್ತಮ ಪ್ರತಿಕ್ರಿಯೆ ಬರು ತ್ತಿದ್ದರಿಂದ ಇದೀಗ ವರುಣಾ ಕೆರೆಯಲ್ಲಿ ನಿರಂತರ ವಾಗಿ ವರ್ಷ ಪೂರ್ತಿ ಈ ಕಾರ್ಯಕ್ರಮ ನಡೆಸಿ, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಮನ ರಂಜನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ವರುಣಾ ಕೆರೆಯಲ್ಲಿ ಸದಾ ನೀರು ತುಂಬಿರುತ್ತದೆ. ಇಲ್ಲಿ ಪಕ್ಷಿ ಸಂಕುಲವೂ ಯಥೇಚ್ಛ ವಾಗಿರುವುದರಿಂದ ನೈಸರ್ಗಿಕ ಸೌಂದರ್ಯದಲ್ಲಿ ಜಲ ಸಾಹಸ ಕ್ರೀಡೆಯನ್ನು ನಿರಂತರವಾಗಿ ನಡೆಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಯೋಜಿಸಲಾಗಿದೆ ಎಂದರು.

ಪ್ರವಾಸೋದ್ಯಮ ಇಲಾಖೆ ಮೂಲಕ ಮೈಸೂರು ಮೂಲದ ಔಟ್ ಬ್ಯಾಕ್ ಅಡ್ವೆಂಚರ್ಸ್ ಸಂಸ್ಥೆಗೆ 10 ವರ್ಷಗಳ ಅವಧಿಗೆ (5 ವರ್ಷ + 5 ವರ್ಷ) ಜಲ ಸಾಹಸ ಕ್ರೀಡೆ ನಡೆಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜನರಿಗೆ ಕೈಗೆಟಕುವ ದರದಲ್ಲಿ ಕ್ರೀಡೆಗೆ ಅವಕಾಶ ಕಲ್ಪಿಸ ಲಾಗಿದೆ ಎಂದು ತಿಳಿಸಿದರು.

ಔಟ್ ಬ್ಯಾಕ್ ಅಡ್ವೆಂಚರ್ಸ್ ಸಂಸ್ಥೆ ಪಾಲುದಾರರಾದ ಅಬ್ದುಲ್ ಅಲೀಂ ಹಾಗೂ ಭರತ್ ಎಂಬುವರು ಕೆರೆಯ ಪೂರ್ವ ಭಾಗದಲ್ಲಿ ಸೆಕ್ಯುರಿಟಿ ರೂಂ, ಹೋಗಲು ಮರದ ಅಟ್ಟಣಿಗೆ ದಾರಿ, ಟಿಕೆಟ್ ಕೌಂಟರ್, ನಿರೀಕ್ಷಣಾ ಕೊಠಡಿ, ಜಾಕೆಟ್, ಸುರಕ್ಷತಾ ಸಲಕರಣೆಗಳನ್ನು ತೊಡಿಸುವ ಸ್ಥಳಗಳನ್ನು ಪರಿಸರ ಸ್ನೇಹಿಯಾಗಿ ಸಕಲ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದಾರೆ.

ಪ್ರತೀ ವರ್ಷ ಶೇ.10ರಷ್ಟು ಹೆಚ್ಚಳದ ಷರತ್ತಿನೊಂದಿಗೆ ಪ್ರವಾಸೋದ್ಯಮ ಇಲಾಖೆಯು ಔಟ್ ಬ್ಯಾಕ್ ಅಡ್ವೆಂಚರ್ಸ್ ಸಂಸ್ಥೆಗೆ ವರ್ಷಕ್ಕೆ 1,66,000 ರೂ.ಗಳಿಗೆ ಟೆಂಡರ್ ಮೂಲಕ ಜಲ ಸಾಹಸ ಕ್ರೀಡೆ ನಡೆಸಲು ಅವಕಾಶ ಕಲ್ಪಿಸಿದೆ.

ಜೆಟೆಸ್ಕಿ ಪ್ರತೀ ರೈಡ್‍ಗೆ ಒಬ್ಬರಿಗೆ 450 ರೂ., ವಾಟರ್ ಟ್ರಾಂಪೊಲೈನ್‍ಗೆ ಅರ್ಧ ಗಂಟೆಗೆ 150 ರೂ., ಸ್ಪೀಡ್ ಬೋಟ್ ಪ್ರತೀ ರೈಡ್‍ಗೆ 200 ರೂ., ಬನಾನ ರೈಡ್ ಪ್ರತೀ ರೈಡ್‍ಗೆ 300 ರೂ., ಕಯಾಕಿಂಗ್ ಕ್ರೀಡೆಗೆ ಅರ್ಧ ಗಂಟೆಗೆ 100 ರೂ., ಕನೊಯಿಂಗ್ (ಬರ್ಡ್ ವಾಚಿಂಗ್) ಅರ್ಧ ಗಂಟೆಗೆ 100 ರೂ. ಹಾಗೂ ಪೆಡಲ್ ಬೋಟ್‍ಗೆ ಅರ್ಧ ಗಂಟೆಗೆ 100 ರೂ.ಗಳ ದರ ನಿಗದಿ ಪಡಿಸಲಾಗಿದೆ. ಪ್ರತೀ ದಿನ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಜಲ ಸಾಹಸ ಕ್ರೀಡೆ ನಡೆಯಲಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಇನ್ನೂ ಹೆಚ್ಚು ಕ್ರೀಡೆಗಳನ್ನು ಪರಿಚಯಿಸಲಾಗುವುದು ಎಂದು ಸಂಸ್ಥೆಯ ಅಬ್ದುಲ್ ಅಲೀಂ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ತಹಸೀ ಲ್ದಾರ್ ಟಿ.ರಮೇಶ್ ಬಾಬು, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹೆಚ್.ಪಿ.ಜನಾರ್ಧನ ಸೇರಿದಂತೆ ಹಲವರು ಜಲ ಸಾಹಸ ಕ್ರೀಡೆ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.

Translate »