ಮೇದರ್ ಬ್ಲಾಕ್ ಸ್ಲಂ ನಿವಾಸಿಗಳ ಸ್ಥಳಾಂತರಕ್ಕೆ ಚಾಲನೆ
ಮೈಸೂರು

ಮೇದರ್ ಬ್ಲಾಕ್ ಸ್ಲಂ ನಿವಾಸಿಗಳ ಸ್ಥಳಾಂತರಕ್ಕೆ ಚಾಲನೆ

August 12, 2019

ಮೈಸೂರು,ಆ.11(ಎಂಟಿವೈ)-ಮೈಸೂರಿನ ಮೇದರ್ ಬ್ಲಾಕ್‍ನಲ್ಲಿ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ವಾಸಿಸುತ್ತಿರುವ ಸ್ಲಂ ನಿವಾಸಿಗಳ ಸ್ಥಳಾಂತರಕ್ಕೆ ಚಾಲನೆ ನೀಡ ಲಾಗಿದ್ದು, ಏಕಲವ್ಯ ನಗರದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ಮನೆ ಗಳನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಲಾಟರಿ ಎತ್ತುವ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.

ಮೈಸೂರು-ಬೆಂಗಳೂರು, ಮೈಸೂರು -ಹಾಸನ ನಡುವಿನ ರೈಲ್ವೆ ಹಳಿ ಪಕ್ಕ ಮೇದರ್‍ಬ್ಲಾಕ್‍ನಲ್ಲಿ ಕಳೆದ ಕೆಲವು ವರ್ಷ ಗಳಿಂದ 192 ಕುಟುಂಬಗಳು ಚಿಕ್ಕ ಚಿಕ್ಕ ಗುಡಿಸಲು ಹಾಗೂ ಮನೆ ನಿರ್ಮಿಸಿ ಕೊಂಡು ವಾಸಿಸುತ್ತಿದ್ದು, ಹೆಚ್ಚುವರಿ ಹಳಿ ಜೋಡಣೆ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಹಳಿಗಳ ಬಳಿ ವಾಸಿಸುತ್ತಿರುವ ಕುಟುಂಬ ಗಳನ್ನು ಸ್ಥಳಾಂತರಗೊಳಿಸುವಂತೆ ಮನವಿ ಮಾಡಿತ್ತು. ಆದರೆ ನಾಲ್ಕು ದಶಕಗಳಿಂದ ವಾಸಿಸುತ್ತಿರುವ ಸ್ಥಳೀಯರು ಮನೆ ತೆರವು ಗೊಳಿಸಲು ನಿರಾಕರಿಸಿದ್ದರು. ಶನಿವಾರ ಶಾಸಕ ಎಲ್.ನಾಗೇಂದ್ರ ಮೇದರ್ ಬ್ಲಾಕ್‍ಗೆ ಭೇಟಿ ನೀಡಿ, ರೈಲ್ವೆ ಹಳಿ ಸಮೀಪ ಅನಧಿಕೃತವಾಗಿ ವಾಸಿಸುತ್ತಿದ್ದ ಜನರನ್ನು ಭೇಟಿ ಮಾಡಿ ಏಕಲವ್ಯ ನಗರಕ್ಕೆ ಸ್ಥಳಾಂ ತರಗೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಸಂಸದ ಪ್ರತಾಪ ಸಿಂಹ, ಶಾಸಕ ಎಲ್. ನಾಗೇಂದ್ರ ಅವರೊಂದಿಗೆ ಮೇದರ್ ಬ್ಲಾಕ್‍ಗೆ ಆಗಮಿಸಿ ಸ್ಥಳೀಯರೊಂದಿಗೆ ಸಮಾಲೋಚಿಸಿದರು. ಅಲ್ಲದೇ ಏಕಲವ್ಯ ನಗರದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಿರುವ ವಸತಿ ಸಮುಚ್ಛಯದಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದರಲ್ಲದೇ, ಲಾಟರಿ ಮೂಲಕ ಮನೆ ಗಳನ್ನು ಆಯ್ಕೆ ಮಾಡಿ ಹಕ್ಕುಪತ್ರವನ್ನು ವಿತರಿಸಿದರು. ಹಲವು ಕುಟುಂಬಗಳು ಸಂಸದರಿಂದ ಲಾಟರಿ ಮೂಲಕ ಮಂಜೂರಾದ ಮನೆಗಳ ಹಕ್ಕುಪತ್ರವನ್ನು ಸ್ವೀಕರಿಸಿದರೆ, ಮತ್ತೆ ಕೆಲವು ಕುಟುಂಬ ದವರು ಸ್ಥಳಾಂತರಕ್ಕೆ ನಿರಾಕರಿಸಿದರು. ಕಳೆದ 40 ವರ್ಷಗಳಿಂದ ಮೇದರ್‍ಬ್ಲಾಕ್ ನಲ್ಲಿಯೇ ವಾಸವಾಗಿದ್ದೇವೆ. ಮಕ್ಕಳನ್ನು ಸಮೀಪದ ಶಾಲೆಗಳಿಗೆ ಸೇರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಇಲ್ಲಿಯೇ ವಾಸಿಸಲು ಅವಕಾಶ ಕಲ್ಪಿಸಬೇಕು. ಏಕಲವ್ಯ ನಗರ ದಿಂದ ಪ್ರತಿ ದಿನ ಕೆಲಸ-ಕಾರ್ಯಗಳಿಗೆ ಬರಲು ತೊಂದರೆಯಾಗುತ್ತದೆ. ಮಾನ ವೀಯ ನೆಲೆಗಟ್ಟಿನಲ್ಲಿ ಮೇದರ್‍ಬ್ಲಾಕ್‍ನಲ್ಲಿ ಅವಕಾಶ ಮಾಡಿಕೊಡಬೇಕೆಂದು ಹಲವರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ ಸಿಂಹ, ರೈಲ್ವೆ ಇಲಾಖೆಗೆ ಸೇರಿದ ಜಾಗ ದಲ್ಲಿ ಯಾರಿಗೂ ವಾಸಿಸಲು ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ. ನಿಮಗಾಗಿಯೇ ಏಕಲವ್ಯ ನಗರದಲ್ಲಿ ಮನೆ ನಿರ್ಮಿಸಲಾಗಿದೆ. ನರ್ಮ್ ಯೋಜನೆಯಡಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಮನೆಗಳಲ್ಲಿ ವಾಸ ಮಾಡುವುದಕ್ಕೆ ಮುಂದಾಗಬೇಕು. ಈಗಾಗಲೇ ಹೆಚ್ಚುವರಿ ರೈಲ್ವೆ ಹಳಿ ನಿರ್ಮಿ ಸುವ ಅಗತ್ಯವಿದೆ. ಇದಕ್ಕಾಗಿ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸಹಕರಿಸಬೇಕು ಎಂದು ಕೋರಿದರು.

Translate »