ಮಳೆಯಿಂದ ಮನೆ ಕಳೆದುಕೊಂಡವರಿಗೆ ಜಿ.ಡಿ.ಹರೀಶ್‍ಗೌಡ ವೈಯಕ್ತಿಕ ನೆರವು
ಮೈಸೂರು

ಮಳೆಯಿಂದ ಮನೆ ಕಳೆದುಕೊಂಡವರಿಗೆ ಜಿ.ಡಿ.ಹರೀಶ್‍ಗೌಡ ವೈಯಕ್ತಿಕ ನೆರವು

August 12, 2019

ಮೈಸೂರು,ಆ.11(ಎಸ್‍ಬಿಡಿ)-ನಿರಂತರ ಮಳೆ ಸುರಿದ ಪರಿಣಾಮ ಮನೆಗಳಿಗೆ ಹಾನಿಯಾಗಿರುವ ಮಾರ್ಬಳ್ಳಿ ಹುಂಡಿ ಗ್ರಾಮಕ್ಕೆ ಮಾಜಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ. ಹರೀಶ್‍ಗೌಡ ಭೇಟಿ ನೀಡಿ, ಸಂತ್ರಸ್ತರಿಗೆ ನೆರವು ನೀಡಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಯಪುರ ಹೋಬಳಿ ಮಾರ್ಬಳ್ಳಿ ಹುಂಡಿ ಗ್ರಾಮದ 19 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಇದರಲ್ಲಿ ನಾಲ್ಕೈದು ಮನೆಗಳು ಸಂಪೂರ್ಣ ಕುಸಿದಿದ್ದು, ಉಳಿದ ಮನೆಗಳ ಗೋಡೆಗಳು ನೆಲಕ್ಕುರುಳಿವೆ. ಕೆಲ ಮನೆಗಳ ಗೋಡೆಗಳು ವಾಲಿದ್ದು, ಬೀಳುವ ಹಂತದಲ್ಲಿವೆ. ತೊಲೆಗಳನ್ನು ಗೋಡೆಗಳಿಗೆ ಒತ್ತು ನೀಡಿ, ಜೀವಭಯದಲ್ಲಿ ಅಲ್ಲಿಯೇ ವಾಸವಾಗಿದ್ದಾರೆ.

ವಿಷಯ ತಿಳಿದು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಜಿ.ಡಿ.ಹರೀಶ್‍ಗೌಡ, ಹಾನಿಯಾಗಿರುವ ಮನೆಗಳ ಮಾಲೀಕರಿಗೆ ತಲಾ 5 ಸಾವಿರ ರೂ. ವೈಯಕ್ತಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಸ್ವ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ, ಇಂಜಿನಿಯರ್‍ಗಳು, ಗ್ರಾಪಂ ಅಧಿಕಾರಿಗಳು ಹಾನಿಗೊಳಗಾಗಿರುವ ಮನೆಗಳ ಪರಿಶೀಲನೆ ನಡೆಸಿದ್ದಾರೆ. ಸರ್ಕಾರದಿಂದ ಶೀಘ್ರ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ. ಶಾಸಕರಾದ ಜಿ.ಟಿ.ದೇವೇಗೌಡರೂ ಪರಿಶೀಲನೆ ನಡೆಸಿ, ಎಲ್ಲಾ ರೀತಿಯ ನೆರವು ಕಲ್ಪಿಸುವುದಾಗಿ ತಿಳಿಸಿದ್ದಾರೆ ಎಂದು ನೊಂದವರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾರ್ಬಳ್ಳಿ ಗ್ರಾಪಂ ಅಧ್ಯಕ್ಷ ಕುಮಾರ್, ಜಿಪಂ ಸದಸ್ಯ ಮಹದೇವಸ್ವಾಮಿ, ಜಯಪುರ ಗ್ರಾಪಂ ಅಧ್ಯಕ್ಷ ಬಸವಣ್ಣ, ಗ್ರಾಮಲೆಕ್ಕಿಗ ಪುರುಷೋತ್ತಮ್, ತಾಪಂ ಮಾಜಿ ಉಪಾಧ್ಯಕ್ಷ ಜವರನಾಯಕ ಮತ್ತಿತರರಿದ್ದರು.

Translate »