ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂ ಯಡಿಯೂರಪ್ಪ ಪರಿಹಾರ ಕಾರ್ಯ ನಡೆಸಲಿ
ಮೈಸೂರು

ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂ ಯಡಿಯೂರಪ್ಪ ಪರಿಹಾರ ಕಾರ್ಯ ನಡೆಸಲಿ

August 12, 2019

ಮೈಸೂರು,ಆ.11(ಪಿಎಂ)-ಬಯಸಿ ಬಯಸಿ ಭಾರೀ ಶ್ರಮಪಟ್ಟು ಮುಖ್ಯ ಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಚಿಲ್ಲರೆ ರಾಜಕಾರಣ ಬಿಟ್ಟು ನೆರೆ ಹಾವ ಳಿಯ ಪರಿಹಾರ ಕ್ರಮ ಕೈಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕುಟುಕಿದರು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣೆಯ ಕಟ್ಟಡದ ಮುಂಭಾಗ ಕುಸಿದಿರುವುದನ್ನು ಭಾನು ವಾರ ಪರಿಶೀಲಿಸಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಯಸಿ ಬಯಸಿ ಶ್ರಮ ವಹಿಸಿ ಬಿ.ಎಸ್.ಯಡಿ ಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಅತ್ತ ಸಚಿವ ಸಂಪುಟವೂ ರಚನೆಯಾಗದ ಸಂದರ್ಭದಲ್ಲಿ ಕಂಡು ಕೇಳರಿಯದ ನೆರೆ ಹಾವಳಿ ರಾಜ್ಯವನ್ನು ಆವರಿಸಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಯಡಿಯೂ ರಪ್ಪ ಮುಂದಾಗಲಿ ಎಂದು ಹೇಳಿದರು.

ಸಚಿವ ಸಂಪುಟವೇ ಇಲ್ಲದೆ ಯಡಿ ಯೂರಪ್ಪ ಏಕಾಂಗಿಯಾಗಿದ್ದಾರೆ. ನೆರೆ ಸಂತ್ರಸ್ತರ ನೆರವಾಗಲು ಪೂರ್ಣ ಪ್ರಮಾ ಣದ ಸರ್ಕಾರವೇ ರಾಜ್ಯದಲ್ಲಿಲ್ಲ. ಈಗ ನಾವು ಅವರ ವಿರುದ್ಧ ಟೀಕಾಸ್ತ್ರವನ್ನೇ ಪ್ರಯೋಗಿಸಬಹುದು. ಆದರೆ ಅಂತಹ ರಾಜಕಾರಣ ಮಾಡುವುದಿಲ್ಲ ಎಂದರು.

ಪರಿಹಾರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲವೆಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾ ರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ವಾರದಲ್ಲೇ ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿದೆ ಎಂದಿದ್ದ ಯಡಿಯೂರಪ್ಪನವರಿಗೆ ಈಗೇನಾ ಯಿತು? ಎಂದು ಪ್ರಶ್ನಿಸಿದರು.

ನಾನು ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲೇ ಸರ್ಕಾರದ ಖಜಾನೆಯಲ್ಲಿ ಸುಮಾರು 8 ಸಾವಿರ ಕೋಟಿ ರೂ. ಹಣವಿತ್ತು. ನೆರೆ ಹಿನ್ನೆಲೆಯಲ್ಲಿ ಇಂದಷ್ಟೇ ಎಲ್ಲಾ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಈ ವೇಳೆ ನೀವು ಸಿಎಂ ಆಗಿದ್ದಾಗ ಜಿಲ್ಲಾ ಡಳಿತಕ್ಕೆ ನೀಡಿದ ಹಣ ಇನ್ನೂ ಇದೆ. ಪರಿಹಾರ ಕ್ರಮಕ್ಕೆ ಯಾವುದೇ ತೊಡಕಿಲ್ಲ ಎಂದಿದ್ದಾರೆ.

ಹೀಗಾಗಿ ಯಾವುದೇ ಹಣದ ಕೊರತೆ ಇಲ್ಲ. ಯಡಿಯೂರಪ್ಪ ರಿಗೆ ಇದೊಂದು ದೊಡ್ಡ ಸವಾಲು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದರು.

ಮುಂದಿನ ವಾರ ಮೈಸೂರು ಜಿಲ್ಲೆ ಪ್ರವಾಸ: ಇಂದು ಕೊಡಗು ಜಿಲ್ಲೆಯ ವೀರಾಜ ಪೇಟೆ, ಕುಶಾಲ ನಗರ ಹಾಗೂ ಹಾಸನ ಜಿಲ್ಲೆಯಲ್ಲಿ ಹಾನಿ ಗೊಳಗಾದ ಪ್ರದೇಶಗಳಿಗೆ ಭೇಟಿ ಮಾಡಲಿದ್ದೇನೆ. ಮುಂದಿನ ವಾರ ಮೈಸೂರು ಜಿಲ್ಲೆಯ ಹೆಚ್‍ಡಿ ಕೋಟೆ, ಹುಣಸೂರು ಹಾಗೂ ನಂಜನಗೂಡು ತಾಲೂಕಿನ ನೆರೆ ಹಾವಳಿ ಪ್ರದೇಶದಲ್ಲಿ ಪ್ರವಾಸ ಮಾಡು ತ್ತೇನೆ ಎಂದರು.

ಪಕ್ಷದಿಂದಲೂ ನೆರವು: ಮೈಸೂರು ಜಿಲ್ಲೆಯಲ್ಲಿ ಹಿಂದೆಂದೂ ಆಗದಷ್ಟು ಪ್ರಮಾಣದಲ್ಲಿ ನೆರೆ ಹಾವಳಿ ಸಂಭವಿಸಿದೆ. ಜೊತೆಗೆ ರಾಜ್ಯದಲ್ಲಿ ಈ ಮಟ್ಟಕ್ಕೆ ನೆರೆ ಹಾವಳಿ ತಲೆದೋರಿರಲಿಲ್ಲ. ಅಧಿಕಾರಿಗಳ ಮಾಹಿತಿ ಯಂತೆ ರಾಜ್ಯದಲ್ಲಿ ಮೂರೂವರೆ ಲಕ್ಷ ಮಂದಿ ನೆರೆ ಸಂತ್ರಸ್ತರಾಗಿದ್ದಾರೆ. ಇದು ಇನ್ನೂ ಹೆಚ್ಚಾಗಬಹುದು. ಪ್ರವಾಸದ ಬಳಿಕ ನಮ್ಮ ಪಕ್ಷದ ವತಿಯಿಂದಲೂ ನೆರೆ ಸಂತ್ರಸ್ತರಿಗೆ ನೆರವು ನೀಡಲಾಗುವುದು ಎಂದು ಹೇಳಿದರು.

ನೆನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಹೋಗಿದ್ದಾರೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ.

ಹೀಗಾಗಿ ಕೇಂದ್ರದಿಂದ ತಕ್ಷಣಕ್ಕೆ ಎಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಕಾದು ನೋಡಬೇಕು. ಇದು ಟೀಕೆ ಮಾಡುತ್ತಾ ರಾಜಕಾರಣ ಮಾಡುವ ವಿಷಯವಲ್ಲ. ಎಲ್ಲರೂ ಕೈಜೋಡಿಬೇಕು ಎಂದರು.

ಈ ವೇಳೆ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ್, ಸಾ.ರಾ.ಮಹೇಶ್, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು ಸೇರಿ ದಂತೆ ಪಕ್ಷದ ಮುಖಂಡರು, ಕಾರ್ಯ ಕರ್ತರು ಹಾಗೂ ಡಿಸಿಪಿ ಮುತ್ತುರಾಜ್, ಸಂಚಾರ ಎಸಿಪಿ ಜಿ.ಎನ್.ಮೋಹನ್, ಪ್ರಾದೇ ಶಿಕ ಅಗ್ನಿಶಾಮಕ ಅಧಿಕಾರಿ ಜಿ.ಈಶ್ವರ್‍ನಾಯಕ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ರಾಜು, ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ್ ಅರಸ್ ಮತ್ತಿತರರು ಹಾಜರಿದ್ದರು.

ಜಿಟಿಡಿಗೆ ಅನಾರೋಗ್ಯ
ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಕೆಲ ದಿನಗಳಿಂದ ಅನಾರೋಗ್ಯ ಕ್ಕೊಳಗಾಗಿದ್ದಾರೆ. ಈ ಕಾರಣದಿಂದಾಗಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪುತ್ರ ಜಿ.ಡಿ. ಹರೀಶ್‍ಗೌಡ ಮಾರ್ಬಳ್ಳಿಹುಂಡಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ವೈಯಕ್ತಿಕ ನೆರವು ನೀಡಿದರು. ಇಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮೈಸೂರು ಭೇಟಿ ವೇಳೆ ಜಿ.ಟಿ.ದೇವೇಗೌಡ ಗೈರು ಹಾಜರಾಗಿದ್ದರು.

Translate »