ಶ್ರೀಮಂಗಲದಲ್ಲಿ ಒಣ ಕಸ ನಿರ್ವಹಣಾ ಘಟಕಕ್ಕೆ ಚಾಲನೆ
ಕೊಡಗು

ಶ್ರೀಮಂಗಲದಲ್ಲಿ ಒಣ ಕಸ ನಿರ್ವಹಣಾ ಘಟಕಕ್ಕೆ ಚಾಲನೆ

January 2, 2020

ಗೋಣಿಕೊಪ್ಪಲು, ಜ.1- ಶ್ರೀಮಂಗಲ ಗ್ರಾಪಂ ಪರಿಸರವನ್ನು ಸಂಪೂರ್ಣ ಕಸ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸುಮಾರು ರೂ.12.72 ಲಕ್ಷ ಯೋಜನೆಗೆ ಚಾಲನೆ ನೀಡಿದರು. 14ನೇ ಹಣಕಾಸು ಯೋಜನೆಯ ಅನುದಾನ ದಲ್ಲಿ ರೂ.2 ಲಕ್ಷ ವೆಚ್ಚದಲ್ಲಿ ಅಲ್ಲಿನ ಗ್ರಾಪಂ ಸಮೀಪವೇ ಒಣ ಕಸ ಘಟಕವನ್ನು ಶಾಸಕ ಬೋಪಯ್ಯ ಉದ್ಘಾಟಿಸಿದರು. ಇದೇ ಸಂದರ್ಭ ಸುಮಾರು ರೂ.3.70 ಲಕ್ಷ ವೆಚ್ಚದ ‘ಜೀತೋ ಗೂಡ್ಸ್ ಆಟೋ’ ಕಸ ಸಂಗ್ರಹದ ವಾಹನದ ಕೀಲಿಯನ್ನು ಗ್ರಾಪಂ ಅಧ್ಯಕ್ಷೆ ಚೋಕಿರ ಕಲ್ಪನಾಗೆ ಹಸ್ತಾಂತರಿಸಿದರು.

ರಸ್ತೆಯಲ್ಲಿ ಕಸ ಹಾಕದಿರಿ: ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿ ಅಭಿವೃದ್ಧಿ ಹೊಂದುತ್ತಿದ್ದು, ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೂ ಪ್ರವಾಸಿಗರು ಹಾಗೂ ಸ್ಥಳೀಯ ನಿವಾಸಿಗಳು ಎಲ್ಲೆಂದರಲ್ಲಿ ಕಸ ಬಿಸಾಡುವುದು ಕಂಡು ಬಂದಿದೆ. ಸ್ವಚ್ಛ ಭಾರತ್ ಮಿಷನ್ ಮೂಲಕ ಗ್ರಾಪಂಗಳಿಗೆ 20 ಲಕ್ಷದವರೆಗೂ ಕಸ ವಿಲೇವಾರಿಗೆ, ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆ ಗೊಳ್ಳಲಿದೆ. ವೀರಾಜಪೇಟೆ ತಾಲ್ಲೂಕು ಮತ್ತು ಮಡಿಕೇರಿ ತಾಲೂಕಿನಲ್ಲಿ ಒಣಕಸ ಘಟಕ ಇತ್ಯಾದಿ ಶೇ.40ರಷ್ಟು ಪ್ರಗತಿ ಸಾಧಿಸಿದೆ. 2020ರ ಡಿಸೆಂಬರ್ ವೇಳೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ಕಸ ಮುಕ್ತ ಗ್ರಾಮಗಳಾಗಿ ಪರಿವರ್ತನೆ ಯಾಗಬೇಕಿದ್ದು, ಈ ನಿಟ್ಟಿನಲ್ಲಿ ಶೇ.100 ರಷ್ಟು ಸ್ವಚ್ಛ ಭಾರತ ಮಿಷನ್ ಕಾರ್ಯ ಕ್ರಮ ಅನುಷ್ಠಾನಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಸಾರ್ವಜನಿಕರೇ ಒಣ ಮತ್ತು ಹಸಿಕಸ ವನ್ನು ವಿಂಗಡಿಸಿ ನೀಡುವಂತಾಗಬೇಕು. ಪ್ರದಾನಿ ನರೇಂದ್ರ ಮೋದಿ ಅವರ ಇಡೀ ಭಾರತವನ್ನೇ ಕಸ ಮುಕ್ತ ರಾಷ್ಟ್ರ ಮಾಡುವ ಯೋಜನೆಗೆ ಜನಪ್ರತಿನಿಧಿಗಳೂ ಒಳ ಗೊಂಡಂತೆ ಎಲ್ಲರೂ ಸಹಕಾರ ನೀಡ ಬೇಕಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೋಕಿರ ಕಲ್ಪನಾ ಮಾತನಾಡಿ, ಒಟ್ಟು 12,72,00 ರೂ. ಮೊತ್ತದ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಸ್ವಚ್ಛ ಭಾರತ್ ಮಿಷನ್‍ನ ಮೊದಲ ಕಂತು 6.36 ಲಕ್ಷ ರೂ. ಬಿಡುಗಡೆಯಾಗಿದೆ. ಇದೀಗ ರೂ.2 ಲಕ್ಷ ವೆಚ್ಚದಲ್ಲಿ ಒಣಕಸ ಘಟಕ, 3.70 ಲಕ್ಷ ರೂ. ವೆಚ್ಚದಲ್ಲಿ ಜೀತೋ ಕಸ ಸಂಗ್ರಹ ವಾಹನ ಖರೀದಿ ಹಾಗೂ ರೂ.5 ಲಕ್ಷ ವೆಚ್ಚದಲ್ಲಿ ಹಸಿ ಕಸ ವಿಂಗ ಡಣಾ ಘಟಕವನ್ನೂ ಸ್ಥಾಪಿಸಲಾಗವುದು. ಈ ನಿಟ್ಟಿನಲ್ಲಿ ಶ್ರೀಮಂಗಲ ಗ್ರಾಮದ ಎಲ್ಲರ ಸಹಕಾರವೂ ಅಗತ್ಯ ಎಂದು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವೀರಾಜ ಪೇಟೆ ತಾಪಂ ಉಪಾಧ್ಯಕ್ಷ ನೆಲ್ಲೀರ ಚಲನ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಅರುಣ್ ಭೀಮಯ್ಯ, ಟಿ.ಶೆಟ್ಟಿಗೇರಿ ಗ್ರಾಪಂ ಅಧ್ಯಕ್ಷ ಸುಮಂತ್, ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುರುಳಿ, ಕೊಡಗು ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿ ಮಂದಯ್ಯ, ಮಾಜಿ ಎಪಿಎಂಸಿ ಉಪಾಧ್ಯಕ್ಷ ಕಳ್ಳಂಗಡ ಬಾಲಕೃಷ್ಣ, ಗ್ರಾಪಂ ಉಪಾಧ್ಯಕ್ಷ ಕಳ್ಳಂಗಡ ರಜಿತ್ ಪೂವಣ್ಣ, ಪಿಡಿಓ ವಿ.ಎಸ್.ಸತೀಶ್, ಸದಸ್ಯರಾದ ಅಜ್ಜಮಾಡ ಜಯ, ಚೋನೀರ ಕಾಳಯ್ಯ, ಬೋಪಯ್ಯ ಆಪ್ತರಾದ ಮಲ್ಲಂಡ ಮಧು ದೇವಯ್ಯ ಮುಂತಾದವರಿದ್ದರು.

Translate »