ರಿಲ್ಯಾಕ್ಸ್ ಮೂಡ್‍ನಲ್ಲಿ ದಸರಾ ಗಜಪಡೆ: ಆನೆಗಳ ನೋಡಲು, ಸೆಲ್ಫಿಗೆ ಮುಗಿಬಿದ್ದಿರುವ ಜನ
ಮೈಸೂರು

ರಿಲ್ಯಾಕ್ಸ್ ಮೂಡ್‍ನಲ್ಲಿ ದಸರಾ ಗಜಪಡೆ: ಆನೆಗಳ ನೋಡಲು, ಸೆಲ್ಫಿಗೆ ಮುಗಿಬಿದ್ದಿರುವ ಜನ

August 24, 2019

ಮೈಸೂರು,ಆ.23(ಎಂಟಿವೈ)- ವಿವಿಧ ಶಿಬಿರಗಳಿಂದ ಮೈಸೂರಿಗೆ ಬಂದು ಅಶೋಕ ಪುರಂ ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯ ಮೊದಲ ತಂಡದ ಆರು ಆನೆಗಳು ಲವಲವಿಕೆಯಿಂದ ಇದ್ದು, ಇವುಗಳನ್ನು ನೋಡಲು ವಿವಿಧ ಬಡಾವಣೆಗಳ ನಿವಾಸಿಗಳು ಶುಕ್ರವಾರ ದಿನವಿಡೀ ಮುಗಿ ಬಿದ್ದರು.

ಭದ್ರತೆ ಹಿನ್ನೆಲೆಯಲ್ಲಿ ಜನ ವಸತಿ ಪ್ರದೇಶದಿಂದ ಎಲ್ಲಾ ಆನೆಗಳನ್ನು ದೂರವಿರಿಸ ಲಾಗಿದ್ದು, ಅಂಬಾರಿ ಆನೆ ಅರ್ಜುನನ ಮೇಲೆ ವಿಶೇಷ ಕಣ್ಗಾವಲಿಡಲಾಗಿದೆ. ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಆನೆ ನೋಡಲು ತಂಡೋಪ ತಂಡವಾಗಿ ಅರಣ್ಯ ಭವನಕ್ಕೆ ಜನರು ಆಗಮಿಸುತ್ತಿದ್ದಾರೆ. ಹಾಗಾಗಿ ಆನೆಗಳ ಬಳಿಯೇ ಮಾವುತರು ಹಾಗೂ ಕಾವಾಡಿಗಳು ಕಡ್ಡಾಯವಾಗಿ ಇರುವಂತೆ ಸೂಚನೆ ನೀಡಲಾಗಿದೆ. ಆನೆಗಳಿಗೆ ಕುಸುರೆ, ಹಸಿ ಹುಲ್ಲು, ಒಣಹುಲ್ಲು, ಆಲದ ಸೊಪ್ಪು ನೀಡಲಾಗುತ್ತಿದೆ. ಆನೆಗಳ ಬಳಿ ಯಾರೂ ನುಸುಳದಂತೆ ನೋಡಿಕೊಳ್ಳಲು ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಗಾರ್ಡ್ ಹಾಗೂ ವಾಚರ್‍ಗಳನ್ನು ಸ್ಥಳದಲ್ಲಿ ಕರ್ತವ್ಯಕ್ಕೆ ಹಾಕÀಲಾಗಿದೆ.

ಆರೋಗ್ಯ ತಪಾಸಣೆ: ಅರಣ್ಯ ಭವನದ ಆವರಣದಲ್ಲಿ ಬೀಡುಬಿಟ್ಟಿರುವ ಎಲ್ಲಾ ಆನೆಗಳನ್ನು ಪಶುವೈದ್ಯ ಡಾ.ಡಿ.ಎನ್.ನಾಗರಾಜು ಶುಕ್ರವಾರ ತಪಾಸಣೆ ಮಾಡಿದರು. ಗುರುವಾರ ಲಾರಿಗಳ ಮೂಲಕ ಮೈಸೂರಿಗೆ ಆಗಮಿಸಿದ್ದ ಆನೆಗಳು ಇಂದು ದಿನವಿಡೀ ವಿಶ್ರಾಂತಿ ಪಡೆದವು. ಮುಂಜಾನೆಯೇ ಲದ್ದಿ ಪರೀಕ್ಷೆಯೊಂದಿಗೆ ಎಲ್ಲಾ ಆನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಈ ವೇಳೆ ಡಾ.ಡಿ.ಎನ್.ನಾಗರಾಜು ಮಾತನಾಡಿ, ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿವೆ. ಅರಮನೆಗೆ ಕರೆದೊಯ್ದ ಬಳಿಕ ತಾಲೀಮು ಆರಂಭಿಸುತ್ತೇವೆ. ಅವುಗಳ ಆರೋಗ್ಯ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

Translate »