ಮೈಸೂರು, ಆ.23-ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಮತ್ತು ಕನ್ನಡ ಸಾಹಿತ್ಯ ಕಲಾಕೂಟದ ವತಿಯಿಂದ ವಿಜ್ಞಾನ ಲೇಖಕ, ಸಾಹಿತಿ ಎಸ್.ರಾಮಪ್ರಸಾದ್ ಅವರ 78ನೇ ಹುಟ್ಟುಹಬ್ಬ ಮತ್ತು `ಸ್ನೇಹ ಸಂಜೀವಿನಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಕಾಲೇಜು ಸಮೀಪದ ಶ್ರೀರಾಘವೇಂದ್ರ ಆರಾಧನಾ ಮಂದಿರ ದಲ್ಲಿ ಆ.25ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯ ಕ್ರಮವನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಆಯುಕ್ತ ಡಾ. ಎಂ.ಆರ್.ರವಿ ಉದ್ಘಾಟಿಸಲಿದ್ದಾರೆ. ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅಧ್ಯಕ್ಷತೆ ವಹಿಸಲಿದ್ದು, ಚಲನಚಿತ್ರ ನಟರಾದ ಸುಚೀಂದ್ರ ಪ್ರಸಾದ್ `ಸ್ನೇಹ ಸಂಜೀವಿನಿ’ ಪುಸ್ತಕ ಬಿಡುಗಡೆ ಮಾಡುವರು. ಸಾಹಿತಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಕೃತಿ ಪರಿಚಯ ಮಾಡಲಿದ್ದು, ಮಾನಸಗಂಗೋತ್ರಿಯ ಕುವೆಂಪು ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ನೀಲಗಿರಿ ಎಂ.ತಳವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಶ್ರೀಮತಿ ಪ್ರತಿಭಾ ಮುರಳಿ, ಮೈಸೂರಿನ ವಿ.ಎಸ್.ಛಾಯಾಪತಿ, ಎಂ.ಚಂದ್ರಶೇಖರ್ ಉಪಸ್ಥಿತರಿರುವರು. ಸಾಹಿತಿ ಎಸ್.ರಾಮಪ್ರಸಾದ್ ಅವರು ಮೈಸೂರು ವಿವಿಯಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದಾರೆ. ಅಲ್ಲದೇ, ಸ್ನಾತಕೋತ್ತರ ಭಾಷಾಂತರ ಡಿಪ್ಲೋಮಾ ಪಡೆದಿದ್ದಾರೆ. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಹಲವಾರು ವಿಜ್ಞಾನ ಕೃತಿಗಳನ್ನು ರಚಿಸಿರುವ ಇವರು, ವಿಜ್ಞಾನ ವಿಷಯಗಳ ಕುರಿತು ಅನೇಕ ರೇಡಿಯೋ ಪ್ರಚಾರ ಭಾಷಣ ಹಾಗೂ ಚಿಂತನಗಳನ್ನು ನಡೆಸಿದ್ದಾರೆ. ರೋಟರಿ ಸೇವಾ ಸಂಸ್ಥೆ, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್, ಗಾನಭಾರತೀ, ನಾದಬ್ರಹ್ಮ ಸಂಗೀತ ಸಭಾ ಮತ್ತಿತರ ಅನೇಕ ಸೇವಾ, ಸಾಂಸ್ಕøತಿಕ ಸಂಸ್ಥೆಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ವನ್ಯಜೀವಿ ಛಾಯಾ ಚಿತ್ರೀಕರಣ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ.