ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಲೈನ್‍ಮನ್ ಮೇಲೆ ಹಲ್ಲೆ
ಚಾಮರಾಜನಗರ

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಲೈನ್‍ಮನ್ ಮೇಲೆ ಹಲ್ಲೆ

July 11, 2018

ಚಾಮರಾಜನಗರ: ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರಿಂದ ಅದನ್ನು ಕಡಿತಗೊಳಿಸಿದ ಲೈನ್‍ಮನ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲೈನ್‍ಮನ್ ಆನಂದ ರಾಜು ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಅವರು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಲ್ಲೂರು ಗ್ರಾಮದ ಪರಶಿವ ಮೂರ್ತಿ ಮತ್ತು ಶಿವಣ್ಣ ಎಂಬು ವರು ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು ಎನ್ನಲಾಗಿದೆ. ಇದನ್ನು ತಿಳಿದ ಗ್ರಾಮದ ಲೈನ್‍ಮನ್ ಆಗಿರುವ ಆನಂದರಾಜು ಅವರ ಮನೆಗಳಿಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಇದರಿಂದ ಕೋಪಗೊಂಡ ಪರಶಿವಮೂರ್ತಿ ಮತ್ತು ಶಿವಣ್ಣ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ನನಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ಸೇರಿದ್ದೇನೆ. ಅವರಿಬ್ಬರು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆನಂದರಾಜು ರಾಮಸಮುದ್ರ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ದೂರನ್ನು ದಾಖಲಿಸಿಕೊಂಡಿರುವ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಆನಂದೇಗೌಡ, ನಾಪತ್ತೆ ಆಗಿರುವ ಪರಶಿವಮೂರ್ತಿ ಮತ್ತು ಶಿವಣ್ಣ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

 

Translate »