ದೇವಸ್ಥಾನಗಳ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ
ಮಂಡ್ಯ

ದೇವಸ್ಥಾನಗಳ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ

June 5, 2018

ಮಂಡ್ಯ: ದೇವಾಲಯಗಳ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ತಾಲೂಕಿನ ಬಸರಾಳು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ಶ್ರೀ ಪಟ್ಟಲದಮ್ಮ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿರುವ ದುಷ್ಕರ್ಮಿಗಳು ಏನೂ ಸಿಗದಿದ್ದಾಗ ವಾಪಸ್ ತೆರಳಿದ್ದಾರೆ.

ತಡರಾತ್ರಿ ಪಟ್ಟಲದಮ್ಮ ದೇವಾಲಯದ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ್ದ ಕಳ್ಳರು, ದೇವಾಲಯದ ಆವರಣದಲ್ಲಿದ್ದ ಹುಂಡಿ ಒಡೆದಿದ್ದಾರೆ. ಅದರಲ್ಲಿ ಏನೂ ಸಿಗದೇ ಇದ್ದಾಗ ಪಕ್ಕದಲ್ಲಿದ್ದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಾಗಿಲನ್ನೂ ಮುರಿದು ಒಳ ತೆರಳಿ ಬೆಲೆಬಾಳುವ ಸಾಮಗ್ರಿಗಾಗಿ ಹುಡುಕಾಟ ನಡೆಸಿ, ಏನೂ ಇಲ್ಲದೇ ಬರಿಗೈಯಲ್ಲಿ ವಾಪಸ್ ತೆರಳಿದ್ದಾರೆ. ದೇವಾಲಯದ ಹುಂಡಿಯನ್ನೂ ಸಹ ಒಡೆದಿರುವ ದುಷ್ಕರ್ಮಿಗಳು ಅದರಲ್ಲಿದ್ದ ಅಲ್ಪಸ್ವಲ್ಪ ನಗ ನಾಣ್ಯ ಕದ್ದು ಖಾಲಿ ಹುಂಡಿ ಬಿಸಾಡಿ ಹೋಗಿದ್ದಾರೆ.

ಕಳೆದ ಒಂದು ವಾರದ ಹಿಂದೆಯಷ್ಟೇ ಗ್ರಾಮದ ಶ್ರೀ ಕಾಲಭೆರ ವೇಶ್ವರ ದೇವಾಲಯದಲ್ಲಿ ಕಳ್ಳತನ ನಡೆಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದರು. ಇದರಿಂದ ಎಚ್ಚೆತ್ತ ದೇವಾಲಯದ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಬೆಲೆ ಬಾಳುವ ವಸ್ತುಗಳು, ನಗದು ಹಣವನ್ನು ಇಡುತ್ತಿರಲಿಲ್ಲ ಎಂದು ಹೇಳಲಾಗಿದೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »