ಬೇಲ್ ಮೇಲೆ ಬಂದನಂತರವೂ ಅದೇ ಚಾಳಿ ಮುಂದುವರಿಸಿದ್ದರು
ಮೈಸೂರು

ಬೇಲ್ ಮೇಲೆ ಬಂದನಂತರವೂ ಅದೇ ಚಾಳಿ ಮುಂದುವರಿಸಿದ್ದರು

December 2, 2019

ಮೈಸೂರು, ಡಿ.1(ಆರ್‍ಕೆ)- ಅಪಘಾತ ಮಾಡಿ ಪರಾರಿ ಯಾಗುತ್ತಿದ್ದೀರೆಂದು ಧಮಕಿ ಹಾಕಿ ಬೆದರಿಸಿ ಸಂದಾನದ ನೆಪದಲ್ಲಿ ವಾಹನ ಸವಾರರಿಂದ ಹಣ ದೋಚುತ್ತಿದ್ದ ಜಮೀರ್ ಮತ್ತು ಜಮೀಲ್ ಅಹಮದ್ ಜೈಲಿನಿಂದ ಚಾಮೀನಿನ ಮೇಲೆ ಹೊರಬಂದ ನಂತರವೂ ಅದೇ ಚಾಳಿ ಮುಂದುವರಿಸಿದ್ದರು.

ಈ ಹಿಂದೆ 2017ರ ನವೆಂಬರ್ 8ರಂದು ಮೈಸೂರಿನ ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಕೆಫೆ ಬಿರಿಯಾನಿ ಹೋಟೆಲ್ ಮಾಲೀಕ ಶ್ರೀನಿವಾಸ್ ಅವರ ಕಾರನ್ನು ಅಡ್ಡಗಟ್ಟಿ ಅಪಘಾತ ಮಾಡಿ ನಿಲ್ಲಿಸದೇ ಬಂದಿದ್ದೀರೆಂದು ಬಾಯಿಗೆ ಬಂದಂತೆ ಮಾತನಾಡಿ ಚಿಕಿತ್ಸೆಗೆ ಹಣಕೊಡುವಂತೆ ಒತ್ತಾಯಿಸಿದ್ದ ಜಮೀರ್ ಮತ್ತು ಜಮೀಲ್ ನನ್ನು ಹಿಡಿದು ಕುವೆಂಪುನಗರ ಪೊಲೀಸ್‍ರಿಗೆ ಒಪ್ಪಿಸಲಾಗಿತ್ತು.

ದರೋಡೆ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದ ಪೊಲೀಸರು ಜೈಲಿಗೆ ದಬ್ಬಿದ್ದರಾದರೂ, 90 ದಿನಗಳ ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಆಸಾಮಿಗಳು, ತಮ್ಮ ಚಾಳಿ ಮುಂದುವರೆಸಿ 6 ತಿಂಗಳ ಹಿಂದೆ ಇಲವಾಲ ಬೈಪಾಸ್ ರಸ್ತೆಯಲ್ಲಿ ಕೊಡಗಿನ ಮೆಣಸು ವರ್ತಕರೊಬ್ಬರಿಂದಲೂ ಅದೇ ಮಾದರಿಯಲ್ಲಿ ಹೆದರಿಸಿ ಹಣ ಕಿತ್ತಿದ್ದರು. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 12 ದಿನಗಳ ಕಾಲ ಜೈಲಿನಲ್ಲಿದ್ದ ಆರೋಪಿಗಳಿಬ್ಬರು ಜಾಮೀನಿನ ಮೇಲೆ ಹೊರಬಂದಿದ್ದರು. ತದ ನಂತರ ಮೂರುವರೆ ತಿಂಗಳ ಹಿಂದೆ ಬೆಂಗಳೂರಿನಲ್ಲೂ ಕಾರು ಚಾಲಕರೊಬ್ಬರನ್ನು ಹೊರವಲಯ ದಲ್ಲಿ ಅಡ್ಡಗಟ್ಟಿ ಅಪಘಾತದಲ್ಲಿ ಗಾಯಗೊಂಡಿರುವವರಂತೆ ನಟಿಸಿ 60 ಸಾವಿರ ಸುಲಿಗೆ ಮಾಡಿದ್ದ ಹಿನ್ನೆಲೆಯಲ್ಲಿ ಜಮೀಲ್ ಮತ್ತು ಜಮೀರ್ ಅಹಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಆಡಗೋಡಿ ಠಾಣೆ ಪೊಲೀಸರು ಬಂಧಿಸಿದ್ದರು. ಆ ಪ್ರಕರಣದಲ್ಲೂ 15 ದಿನ ಜೈಲಿ ನಲ್ಲಿದ್ದ ಅವರು ಬೇಲ್ ಮೇಲೆ ಹೊರಬಂದು ಇದೀಗ ಶ್ರೀರಂಗಪಟ್ಟಣ ಸಮೀಪ ನಿವಿನ್ ಬಿದ್ದಪ್ಪ ಎಂಬುವರಿಂದ 30 ಸಾವಿರ ಹಣ ವಸೂಲಿ ಮಾಡಿ ತಲೆಮರೆಸಿಕೊಂಡಿದ್ದ ಈ ಆರೋಪಿಗಳನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ಧರೂ ಜಮೀರ್ ಮತ್ತು ಜಮೀಲ್ ಮಾತ್ರ ತಮ್ಮ ದರೋಡೆ ವೃತ್ತಿಯನ್ನು ಮುಂದುವರೆಸಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಮಾದರಿಯ ಕೃತ್ಯ ಎಲ್ಲೆಲ್ಲಿ ನಡೆದಿದೆ ಎಂಬುದರ ಬಗ್ಗೆ ರಾಜ್ಯದ ಎಲ್ಲಾ ಠಾಣೆಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

Translate »