ನಂಜನಗೂಡು, ಫೆ. 29(ರವಿ)- ತಾಲೂಕು ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ರಾಜಾಶೀಲ್ ಪೇಪರ್ ಮಿಲ್‍ಗೆ ಶನಿವಾರ ಬೆಳಿಗ್ಗೆ ಹುಸಿ ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಆತಂಕದಿಂದ ಕಾರ್ಖಾ ನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದ ಘಟನೆ ನಡೆದಿದ್ದು, ಸಂಜೆ ವೇಳೆಗೆ ಹುಸಿಬಾಂಬ್ ಕರೆ ಮಾಡಿದ್ದ ಇದೇ ಕಾರ್ಖಾ ನೆಯ ಮಾಜಿ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಖಾನೆಯ ಮಾಜಿ ನೌಕರ ತಮಿಳುನಾಡು ಮೂಲದವ ನಾಗಿದ್ದು, ಹಾಲಿ ಮೈಸೂರಿನ ಆಲನಹಳ್ಳಿ ಗಿರಿದರ್ಶಿನಿ ಬಡಾವಣೆ ನಿವಾಸಿ ಶಿಬು(38) ಬಂಧಿತ ಆರೋಪಿಯಾಗಿದ್ದಾನೆ.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಮೊಬೈಲ್‍ಗೆ ಶನಿವಾರ ಬೆಳಿಗ್ಗೆ 9.12ರ ವೇಳೆಗೆ ದೂರವಾಣಿ ಕರೆ ಮಾಡಿದ ಈತ ‘ನಿಮ್ಮ ಕಾರ್ಖಾನೆಗೆ ಬಾಂಬ್ ಇರಿಸಲಾಗಿದೆ. ನನಗೆ 35 ಲಕ್ಷ ರೂ. ಕೊಡದಿದ್ದರೆ 10 ಗಂಟೆಗೆ ಬಾಂಬ್ ಸಿಡಿಯುತ್ತದೆ’ ಎಂದು ತಮಿಳಲ್ಲಿ ಬೆದರಿಕೆ ಹಾಕಿದ್ದ. ಹಣ ಎಲ್ಲಿಗೆ ತರಬೇಕು ಎಂದು ಕೇಳುತ್ತಿದ್ದಂತೆಯೇ ಆತ ಕರೆ ಕಟ್ ಮಾಡಿದ್ದ. ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಇದರಿಂದ ಆತಂಕಗೊಂಡ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು, ಉತ್ಪಾದನೆ ಸ್ಥಗಿತಗೊಳಿಸಿ, ಕಾರ್ಮಿಕರನ್ನು ಹೊರಗೆ ಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ನಂಜನಗೂಡು ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ, ಗ್ರಾಮಾಂತರ ಠಾಣೆ ಸಬ್ ಇನ್ಸ್‍ಪೆಕ್ಟರ್ ಸತೀಶ ಹಾಗೂ ಸಿಬ್ಬಂದಿ, ಸುಮಾರು 3 ಗಂಟೆ ತಪಾಸಣೆ ನಡೆಸಿದರಾದರೂ ಬಾಂಬ್ ಕುರುಹು ಪತ್ತೆಯಾಗಲಿಲ್ಲ. ಇದೊಂದು ಹುಸಿ ಬಾಂಬ್ ಕರೆ ಇರಬಹುದೆಂದು ನಿರ್ಧರಿಸಿ ಪೊಲೀಸರು ಹಿಂದಿರುಗಿದರು.
ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಶೋಧ ಕಾರ್ಯ ಆರಂಭಿಸಿದ ಪೊಲೀಸರು ಸಂಜೆ ವೇಳೆಗೆ ಕಾರ್ಖಾನೆಯ ಮಾಜಿ ನೌಕರ ಶಿಬುನನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಸ್ನೇಹಾ ಭೇಟಿ ನೀಡಿ ಪರಿಶೀಲಿಸಿದ್ದರು. ಆರೋಪಿಯು ಸುಮಾರು 6 ವರ್ಷ ಕಾಲ ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದು, ಕುಡಿತದ ಚಟಕ್ಕೆ ಬಿದ್ದಿದ್ದ ಈತ, ಕೆಲಸ ತೊರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.