ಮುಡಾ ನಿವೇಶನ ಕಬಳಿಸಿದ `ನಕಲಿ ವ್ಯಕ್ತಿ’: ಪೊಲೀಸರಿಗೆ ದೂರು ನೀಡಿ ವರ್ಷವಾದರೂ ಎಫ್‍ಐಆರ್ ಮಾತ್ರ ಆಗಿಲ್ಲ!
ಮೈಸೂರು

ಮುಡಾ ನಿವೇಶನ ಕಬಳಿಸಿದ `ನಕಲಿ ವ್ಯಕ್ತಿ’: ಪೊಲೀಸರಿಗೆ ದೂರು ನೀಡಿ ವರ್ಷವಾದರೂ ಎಫ್‍ಐಆರ್ ಮಾತ್ರ ಆಗಿಲ್ಲ!

March 12, 2020

ಮುಡಾ ನಿವೇಶನ ಪಡೆದವರು ಎಚ್ಚರದ ಮೇಲೆ ಎಚ್ಚರ ವಹಿಸಬೇಕಿದೆ

ಮೈಸೂರು, ಮಾ.11-ವ್ಯಕ್ತಿಯೋರ್ವರಿಗೆ ಮಂಜೂರಾಗಿದ್ದ ಲಕ್ಷಾಂತರ ರೂ. ಮೌಲ್ಯದ ಮುಡಾ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವ ಬಗ್ಗೆ ಮುಡಾ ಅಧಿ ಕಾರಿಗಳೇ ಪೊಲೀಸರಿಗೆ ದೂರು ಸಲ್ಲಿಸಿ ವರ್ಷವಾದರೂ ಆ ದೂರನ್ನು ಇನ್ನೂ ದಾಖ ಲಿಸಿಕೊಳ್ಳದೇ ಇರುವ ಬಗ್ಗೆ ವರದಿಯಾಗಿದೆ.

ನಿವೇಶನದ ಮೂಲ ಮಂಜೂರಾತಿದಾ ರನ ಹೆಸರಿನಲ್ಲೇ ನಕಲಿ ವ್ಯಕ್ತಿ ಕ್ಲಿಯರ್ ಟೈಟಲ್ ಡೀಡ್ ಪಡೆದು ನಿವೇಶನವನ್ನು ಮಾರಾಟ ಮಾಡಿದ್ದು, ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು 2019ರ ಏಪ್ರಿಲ್ 5ರಂದು ಅಂದಿನ ಮುಡಾ ವಿಶೇಷ ತಹಸೀಲ್ದಾರ್ ವಿಶ್ವನಾಥ್ ಅವರು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಚಿತ್ರವೆಂದರೆ ಲಕ್ಷಾಂತರ ರೂ. ಮೌಲ್ಯದ ನಿವೇಶನ ಕಬಳಿಕೆ ಆಗಿರುವ ಈ ಗಂಭೀರ ಪ್ರಕರಣವನ್ನು ಪೊಲೀಸರು ಈವರೆಗೂ ದಾಖಲಿಸಿಕೊಂಡಿಲ್ಲ.

ಮುಡಾಗೆ ಹಣ ಪಾವತಿಸಿ ಕಾನೂನು ಬದ್ಧವಾಗಿ ನಿವೇಶನ ಪಡೆದಿರುವ ವ್ಯಕ್ತಿ ತನ್ನ ನಿವೇಶನ ಬೇರೊಬ್ಬನ ಪಾಲಾಗಿ ಸಂಕಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಮುಡಾದಲ್ಲಿ ನಿವೇಶನ ಕಬಳಿ ಸುವ ಇಂತಹ ಪ್ರಕರಣಗಳು ಹಲವಾರು ನಡೆದಿದ್ದರೂ, ಅದನ್ನು ಅಧಿಕಾರಿಗಳು ಗಂಭೀರ ವಾಗಿ ಪರಿಗಣಿಸಿದಂತಿಲ್ಲ. ಪ್ರಕರಣ ದಾಖ ಲಿಸಿಕೊಳ್ಳಲು ಪೊಲೀಸರು ಕೆಲವು ವಿವರಣೆ ಗಳನ್ನು ಕೇಳಿದ್ದು, ಅದನ್ನು ಮುಡಾ ಅಧಿಕಾರಿ ಗಳು ಒದಗಿಸದೇ ಇದ್ದ ಕಾರಣದಿಂದಲೇ ದೂರು ನೀಡಿ ವರ್ಷವಾದರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.

ವಿವರ: ಮೈಸೂರಿನ ವಿಜಯನಗರ 4ನೇ ಹಂತ ಎರಡನೇ ಫೇಸ್‍ನ 5368 ಸಂಖ್ಯೆಯ 30ಘಿ40 ಅಳತೆಯ ನಿವೇಶನ ಎಲ್.ರಾಜೇ ಅರಸ್ ಎಂಬುವರಿಗೆ 1994ರ ಸೆಪ್ಟೆಂಬರ್ 8ರಂದು ಮಂಜೂರಾಗಿತ್ತು. ಅವರು ನಿವೇ ಶನದ ಅಂದಿನ ಮೌಲ್ಯ 25 ಸಾವಿರ ರೂ. ಪಾವತಿಸಿದ ನಂತರ 2001ರ ಫೆಬ್ರವರಿ 5ರಂದು ಅವರಿಗೆ ಗುತ್ತಿಗೆ ಸಹಿತ ಕ್ರಯದ ಒಪ್ಪಂದ ಪತ್ರ ಹಾಗೂ 2001ರ ಮಾರ್ಚ್ 29ರಂದು ಸ್ವಾಧೀನ ಪತ್ರ ಹಾಗೂ ಅದೇ ವರ್ಷ ಮೇ 10ರಂದು ಖಾತಾ ಕಂದಾಯ ಪತ್ರವನ್ನು ಮುಡಾದಿಂದ ನೀಡಲಾಗಿತ್ತು. ಆದರೆ ಎಲ್.ರಾಜೇ ಅರಸ್ ಅವರು ಕ್ಲಿಯರ್ ಟೈಟಲ್ ಡೀಡ್ ಅನ್ನು ಪಡೆದಿರಲಿಲ್ಲ.

ಅವರು ಕ್ಲಿಯರ್ ಟೈಟಲ್ ಡೀಡ್ ಪಡೆ ಯದೇ ಇರುವುದನ್ನು ಗಮನಿಸಿದ್ದ ನಿವೇ ಶನ ಕಬಳಿಕೆದಾರರು ಎಲ್.ರಾಜೇ ಅರಸ್ ಎಂಬ ಹೆಸರಿನಲ್ಲಿ ನಕಲಿ ವ್ಯಕ್ತಿಯನ್ನು ಕರೆ ತಂದು ಆತನಿಗೆ 2003ರ ನವೆಂಬರ 3ರಂದು ಕ್ಲಿಯರ್ ಟೈಟಲ್ ಡೀಡ್ ನೀಡಿದ್ದಲ್ಲದೇ, 2004ರ ಫೆಬ್ರವರಿ 5ರಂದು ನಿವೇಶನ ವನ್ನು ಆ ವ್ಯಕ್ತಿಗೆ ಮುಡಾ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮುಡಾ ವಿಶೇಷ ತಹಸೀಲ್ದಾ ರರು ನೋಂದಾಯಿಸಿಕೊಟ್ಟಿದ್ದಾರೆ. ಹೀಗೆ ಕ್ಲಿಯರ್ ಟೈಟಲ್ ಡೀಡ್ ನೀಡಬೇಕಾದರೆ ಮೂಲ ಮಂಜೂರಾತಿ ಪತ್ರ ಹಾಜರು ಪಡಿಸಬೇಕಾಗುತ್ತದೆ. ಕ್ಲಿಯರ್ ಟೈಟಲ್ ಡೀಡ್ ನೀಡಿದ ಬಗ್ಗೆ ಮೂಲ ಮಂಜೂ ರಾತಿ ಪತ್ರದಲ್ಲಿ ನಮೂದಿಸಬೇಕು ಎಂಬುದು ನಿಯಮ. ಈ ಪ್ರಕರಣದಲ್ಲಿ ಮೂಲ ಮಂಜೂ ರಾತಿ ಪತ್ರವೇ ಇಲ್ಲದೇ ನಕಲಿ ವ್ಯಕ್ತಿಗೆ ನಿವೇಶ ನದ ಟೈಟಲ್ ಡೀಡ್ ನೀಡಿ ನೋಂದಾ ಯಿಸಿಕೊಟ್ಟಿರುವುದರ ಹಿಂದೆ ಮುಡಾ ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ಕೈವಾಡವಿರಬಹುದು ಎಂಬ ಅನುಮಾನ ಬಲವಾಗಿ ಕಾಡುತ್ತಿದೆ.

ಕ್ಲಿಯರ್ ಟೈಟಲ್ ಡೀಡ್ ಪಡೆಯಬೇಕೆಂಬ ವಿವೇಚನೆ ಇಲ್ಲದಿದ್ದ ಮೂಲ ಮಂಜೂರಾತಿ ದಾರರಾದ ಎಲ್.ರಾಜೇ ಅರಸ್ ಅವರು, ತಮ್ಮ ನಿವೇಶನವನ್ನು ಪುತ್ರಿಯ ಹೆಸರಿಗೆ ವಿಲ್ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದಾಗ ಮುಡಾದಿಂದ ಕ್ಲಿಯರ್ ಟೈಟಲ್ ಡೀಡ್ ಪಡೆಯಬೇಕು ಎಂಬುದು ಅವರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರು ಅರ್ಜಿ ಸಲ್ಲಿಸಿದಾಗ ಅವರ ನಿವೇಶನಕ್ಕೆ ನಕಲಿ ವ್ಯಕ್ತಿಗೆ 2003ರ ನವೆಂಬರ್‍ನಲ್ಲಿ ಟೈಟಲ್ ಡೀಡ್ ನೀಡಲಾಗಿದೆ. ಆ ವ್ಯಕ್ತಿ ನಿವೇಶನ ವನ್ನು ನಟರಾಜು ಎಂಬುವರಿಗೆ ಮಾರಾಟ ಮಾಡಿದ್ದು, ಅವರು ಮೃತರಾದ ನಂತರ ಅವರ ಪುತ್ರ ಸಿ.ಎನ್.ನಾಗೇಂದ್ರ ಹೆಸರಿಗೆ ಮುಡಾ ಅಧಿಕಾರಿಗಳೇ 2015ರ ಜುಲೈ 9ರಂದು ಪೌತಿ ಖಾತೆ ಮಾಡಿಕೊಟ್ಟಿದ್ದಾರೆ. ನಾಗೇಂದ್ರ ಅವರು ಎಂ.ಶೋಭಾ ಎಂಬುವ ರಿಗೆ ನಿವೇಶನ ಮಾರಾಟ ಮಾಡಿದ್ದು, ಅವರು ಅದನ್ನು 2018ರ ಜೂನ್ 21ರಂದು ಕೆ.ಪಿ. ಮುದ್ದಯ್ಯ ಮತ್ತು ಶ್ರೀಮತಿ ಕನ್ನು ಮುದ್ದಯ್ಯ ಎಂಬುವರಿಗೆ ಮಾರಾಟ ಮಾಡಿರುವ ಕಾರಣ ಈಗ ಅವರಿಬ್ಬರ ಹೆಸರಿನಲ್ಲಿ ಜಂಟಿ ಖಾತೆ ಯಾಗಿದೆ ಎಂಬುದು ಗೊತ್ತಾಗಿದೆ.

ತನ್ನ ನಿವೇಶನ ಬೇರೆಯವರ ಪಾಲಾಗಿ ರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಎಲ್. ರಾಜೇ ಅರಸ್ ಅವರು ಕಾನೂನು ಹೋರಾ ಟಕ್ಕೆ ಮುಂದಾಗಬೇಕಾದ ಅನಿವಾರ್ಯ ತೆಗೆ ಒಳಗಾಗಿದ್ದಾರೆ. ಇತ್ತ ಎಲ್.ರಾಜೇ ಅರಸ್ ಅವರು 2019ರ ಫೆಬ್ರವರಿಯಲ್ಲಿ ಕ್ಲಿಯರ್ ಟೈಟಲ್ ಡೀಡ್‍ಗೆ ಅರ್ಜಿ ಸಲ್ಲಿಸಿ ದಾಗ ಅವರ ನಿವೇಶನಕ್ಕೆ ನಕಲಿ ವ್ಯಕ್ತಿಗೆ ಮುಡಾ ಅಧಿಕಾರಿಗಳೇ ಟೈಟಲ್ ಡೀಡ್ ನೀಡಿದ್ದು, ಆ ನಿವೇಶನ ನಾಲ್ಕು ಕೈ ಬದಲಾ ಗಿದೆ. ಮುಡಾ ಕಚೇರಿಯಲ್ಲೇ ಅಂತಿಮ ವಾಗಿ ಕೆ.ಪಿ.ಮುದ್ದಯ್ಯ ಮತ್ತು ಶ್ರೀಮತಿ ಕನ್ನು ಮುದ್ದಯ್ಯ ಹೆಸರಿಗೆ ಜಂಟಿ ಖಾತೆ ಮಾಡಲಾಗಿದೆ ಎಂಬುದರ ಅರಿವಾಗಿ ಅಂದಿನ ಮುಡಾ ವಿಶೇಷ ತಹಸೀಲ್ದಾರ್ ವಿಶ್ವನಾಥ್ ಅವರು 2019ರ ಮಾರ್ಚ್ 29ರ ದಿನಾಂಕ ನಮೂದಿಸಿರುವ ದೂರನ್ನು ಏಪ್ರಿಲ್ 5ರಂದು ಲಕ್ಷ್ಮೀಪುರಂ ಠಾಣೆಗೆ ಸಲ್ಲಿಸಿದ್ದಾರೆ. ವಿಚಿತ್ರ ವೆಂದರೆ ಈ ದೂರು ಆಧರಿಸಿ ಇನ್ನೂ ಎಫ್‍ಐಆರ್ ಆಗಿಲ್ಲ. ನಿವೇಶನ ಕಬಳಿಸಿ ಮಾರಾಟ ಮಾಡಿರುವ ವ್ಯಕ್ತಿ ಪತ್ತೆ ಕಾರ್ಯವೂ ಇನ್ನೂ ಆರಂಭವಾಗಿಲ್ಲ.

2019ರ ಫೆಬ್ರವರಿಯಲ್ಲಿ ಅಂದಿನ ವಿಶೇಷ ತಹಸೀಲ್ದಾರ್ ವಿಶ್ವನಾಥ್ ಅವರು ಲಕ್ಷ್ಮೀಪುರಂ ಠಾಣೆಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ. ಆದರೆ ಇನ್ನೂ ಅದು ಎಫ್‍ಐಆರ್ ಆಗಿಲ್ಲ. ಪೊಲೀಸರು ಕೆಲವು ವಿವರಣೆಗಳನ್ನು ಕೇಳಿದ್ದಾರೆ. ಅದನ್ನು ಒದಗಿಸಲಿದ್ದೇವೆ. ನಿವೇಶನದ ಮೂಲ ಮಂಜೂರಾತಿದಾರರು ಬಂದಿದ್ದರು. ಒಂದೆರಡು ದಿನದಲ್ಲಿ ನಾನು ಮತ್ತು ಮೂಲ ಮಂಜೂರಾತಿದಾರರು ಪೊಲೀಸ್ ಠಾಣೆಗೆ ಖುದ್ದಾಗಿ ಹೋಗಲಿದ್ದೇವೆ. ನಾನು ಪೊಲೀಸರು ಕೇಳಿರುವ ವಿವರಣೆಗಳನ್ನು ನೀಡಲಿದ್ದೇನೆ. ಈ ಪ್ರಕರಣದಲ್ಲಿ ಮೂಲ ಮಂಜೂರಾತಿದಾರರೂ ಕೂಡ ಒಂದು ದೂರನ್ನು ಪೊಲೀಸರಿಗೆ ನೀಡುವ ಸಾಧ್ಯತೆ ಇದೆ. ಈ ಕುರಿತು ಅವರ ವಕೀಲರ ಜೊತೆಯಲ್ಲೂ ಮಾತನಾಡಿದ್ದೇನೆ.
-ನಿಶ್ಚಯ್, ಮುಡಾ ವಿಶೇಷ ತಹಸೀಲ್ದಾರ್

ಎಸ್.ಟಿ.ರವಿಕುಮಾರ್

Translate »