ನಕಲಿ ದಾಖಲೆ ಸೃಷ್ಟಿಸಿ 72 ಲಕ್ಷ ರೂ.ಗಳಿಗೆ ನಿವೇಶನ ಮಾರಾಟ ಮೂವರು ವಂಚಕರ ಸೆರೆ; 23,50,000 ರೂ. ನಗದು ವಶ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ 72 ಲಕ್ಷ ರೂ.ಗಳಿಗೆ ನಿವೇಶನ ಮಾರಾಟ ಮೂವರು ವಂಚಕರ ಸೆರೆ; 23,50,000 ರೂ. ನಗದು ವಶ

December 7, 2018

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವಿಜಯನಗರ 4ನೇ ಹಂತದ ನಿವೇಶನವನ್ನು 72 ಲಕ್ಷ ರೂ.ಗಳಿಗೆ ಮಾರಿ, ವಂಚಿಸಿದ್ದ ಮೂವರು ರಿಯಲ್ ಎಸ್ಟೇಟ್ ಬ್ರೋಕರ್‌ಗಳನ್ನು ಬಂಧಿಸಿರುವ ವಿಜಯನಗರ ಠಾಣೆ ಪೊಲೀಸರು, 23,50,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಅರವಿಂದನಗರ ನಿವಾಸಿ ನಾರಾಯಣಪ್ಪ ಅವರ ಮಗ ಸೋಮೇಶ (35), ಸಾತಗಳ್ಳಿಯ ಅಹಮದ್ ಜಾನ್ ಅವರ ಮಗ ಮಕ್ಬಲ್ ಅಲಿಯಾಸ್ ಮಕ್ಬಲ್ ಅಹಮದ್(47) ಹಾಗೂ ಸತ್ಯಪ್ಪ ಅವರ ಮಗ ಜಯರಾಮ್(48) ಬಂಧಿತರು.

ಮೈಸೂರಿನ ವಿಜಯನಗರ 4ನೇ ಹಂತ, 3ನೇ ಘಟ್ಟದಲ್ಲಿರುವ 788ನೇ ಸಂಖ್ಯೆಯ 40ಘಿ60 ಅಡಿ ಅಳತೆಯ ನಿವೇಶನವನ್ನು ಅದರ ಮಾಲೀಕರಾದ ಸುರೇಶ ಚಂದ್ರಬಾಬು ಹೆಸರಿನ ಮತ್ತೊಬ್ಬ ವ್ಯಕ್ತಿಯ ಹೆಸರಲ್ಲಿ ದಾಖಲೆ ಸೃಷ್ಟಿಸಿ ಮಹಿಳೆಯೊಬ್ಬರಿಗೆ 72 ಲಕ್ಷ ರೂ.ಗಳಿಗೆ ಮಾರಾಟ ಮಾಡಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿದ್ದರು. ನಿವೇಶನ ಖರೀದಿಸಿದ ಮಹಿಳೆ ಖಾತೆ ಮಾಡಿಸಿಕೊಳ್ಳಲು ಮುಡಾಗೆ ಹೋದಾಗ ತಾವು ಮೋಸ ಹೋಗಿರುವುದು ತಿಳಿಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಅವರು, ಮಾರಾಟ ಮಾಡಿಸಿದ್ದ ಮೂವರು ಆರೋಪಿಗಳನ್ನು ನವೆಂಬರ್ ಕಡೇ ವಾರದಲ್ಲಿ ಬಂಧಿಸಿದ್ದಾರೆ. ಮುಡಾದಿಂದ ಮಂಜೂರಾಗಿದ್ದ ನಿವೇಶನಗಳ ಮಾಲೀಕರು ಬೇರೆ ಊರುಗಳಲ್ಲಿರುವ ಮಾಹಿತಿ ಪತ್ತೆ ಮಾಡಿ, ಆ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಾಲೀಕರ ಹೆಸರಿನ ಮತ್ತೊಬ್ಬರನ್ನು ಕರೆತಂದು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ನಿವೇಶನ ಮಾರಾಟ ಮಾಡುವ ಜಾಲದಲ್ಲಿ ಈ ಮೂವರು ಭಾಗಿಯಾಗಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್, ಸಬ್ ಇನ್ಸ್‍ಪೆಕ್ಟರ್ ರಾಮಚಂದ್ರ, ಎಎಸ್‍ಐ ವೆಂಕಟೇಶಗೌಡ, ಸಿಬ್ಬಂದಿಗಳಾದ ಮಹದೇವ, ಸೋಮಾರಾಧ್ಯ, ಈಶ್ವರ್, ಶ್ರೀನಿವಾಸಮೂರ್ತಿ, ಕಾಂತರಾಜು, ಮಹೇಶ, ಮಹದೇವ ಅವರು ಪಾಲ್ಗೊಂಡಿದ್ದಾರೆ.

Translate »