ಸುಲಿಗೆಕೋರ ನಕಲಿ ಸಬ್‍ಇನ್ಸ್‍ಪೆಕ್ಟರ್ ಸೆರೆ
ಮೈಸೂರು

ಸುಲಿಗೆಕೋರ ನಕಲಿ ಸಬ್‍ಇನ್ಸ್‍ಪೆಕ್ಟರ್ ಸೆರೆ

January 23, 2019

ಮೈಸೂರು: ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ನನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಿವಾಸಿ, ಮೂಲತಃ ಹಾವೇರಿ ಜಿಲ್ಲೆ, ಶಿಗ್ಗಾಂವ್ ತಾಲೂಕಿನ ವನಹಳ್ಳಿ ಗ್ರಾಮದ ಸಿದ್ದಪ್ಪ ಚನ್ನಬಸಪ್ಪ ನ್ಯಾಮಕ್ಕ ನವರ್(27) ಬಂಧಿತ ನಕಲಿ ಸಬ್ ಇನ್ಸ್‍ಪೆಕ್ಟರ್.

ಮೈಸೂರಿನ ಶಕ್ತಿನಗರ ಬಡಾವಣೆಯ ಮನೆಯೊಂದರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ ಆತನನ್ನು ವಿಷಯ ತಿಳಿದ ಉದಯಗಿರಿ ಠಾಣೆ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸು ವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ಇಟಿಯೋಸ್(ಕೆಎ 04-ಡಿ 8496) ಬಾಡಿಗೆ ಕಾರಿನಲ್ಲಿ ಮೈಸೂರಿನ ಶಕ್ತಿನಗರದ ಓಂಶಕ್ತಿ ರಸ್ತೆ ನಿವಾಸಿ ನಾರಾಯಣಗೌಡ ಅವರ ಮನೆ ಬಳಿ ಸಬ್ ಇನ್ಸ್‍ಪೆಕ್ಟರ್ ಸಮವಸ್ತ್ರಧಾರಿಯಾಗಿ ಬಂದಿಳಿದ ಸಿದ್ದಪ್ಪ, ನೇರವಾಗಿ ಮನೆಯೊಳಗೆ ತೆರಳಿ, ತಾನು ಗುಪ್ತ ವಾರ್ತಾ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.

ಟೈಲರಿಂಗ್ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ನಾರಾಯಣ ಗೌಡ ಅವರ ಮಗ ರೇಣುಕಾಗೌಡ ಬೆಂಗ ಳೂರಿನ ಬಾರ್‍ವೊಂದರಲ್ಲಿ ಕ್ಯಾಶಿಯರ್ ಆಗಿರುವುದನ್ನು ತಿಳಿದಿದ್ದ ಖದೀಮ, ನಿಮ್ಮ ಮಗ ಪ್ರೀತಿಸುವ ನಾಟಕವಾಡಿ ಹುಡುಗಿ ಯರನ್ನು ವಂಚಿಸಿ, ತಪ್ಪಿಸಿಕೊಂಡಿದ್ದಾನೆ. ನನ್ನ ಹತ್ತಿರ ಅವನ ಕೇಸ್ ಇದೆ. ಅವನನ್ನು ಒದ್ದು ಒಳಗೆ ಹಾಕುತ್ತೇವೆ. ಸರಂಡರ್ ಮಾಡಿಸಿ ಎಂದು ಕೂಗಾಡಿದ್ದಾನೆ. ದಿಕ್ಕು ತೋಚದಂತಾದ ನಾರಾಯಣಗೌಡ ದಂಪತಿ, ನಮ್ಮ ಮಗ ಬೆಂಗಳೂರಲ್ಲಿ ರುವುದು ನಿಜ. ಆದರೆ ಅವನು ಅಂತಹ ಕೆಟ್ಟ ಕೆಲಸ ಮಾಡುವವನಲ್ಲ. ಒಂದು ವೇಳೆ ಹಾಗಾಗಿದ್ದರೆ, ನಿಮ್ಮ ಹಂತದಲ್ಲಿ ನೀವೇ ಬಗೆಹರಿಸಿ, ಆತನ ಭವಿಷ್ಯಕ್ಕೆ ತೊಂದರೆ ಮಾಡಬೇಡಿ ಎಂದು ಕೋರಿಕೊಂಡರಲ್ಲದೆ, ನೀವು ಎಲ್ಲಿಯ ಅಧಿಕಾರಿ ಎಂದು ಕೇಳಿದ್ದಾರೆ.

ಆದರೆ ಅವರ ಮಾತಿಗೆ ಕಿವಿಗೊಡದ ನಕಲಿ ಸಬ್ ಇನ್ಸ್‍ಪೆಕ್ಟರ್ ಸಿದ್ದಪ್ಪ, ಸರಿ 50,000 ರೂ. ನೀಡಿದರೆ ಕೇಸ್ ಕ್ಲೋಸ್ ಮಾಡುತ್ತೇನೆ. ಇಲ್ಲದಿದ್ದರೆ ಮನೆ ಯವರನ್ನೆಲ್ಲಾ ಎಳೆದುಕೊಂಡು ಹೋಗು ತ್ತೇವೆ ಎಂದು ಗದರಿಸಿದ್ದಾನೆ. ಆತನ ಆರ್ಭಟಕ್ಕೆ ಬೆದರಿದ ನಾರಾಯಣಗೌಡ, ಮನೆಯಲ್ಲಿದ್ದ 5,000 ರೂ. ನೀಡಿ, ಉಳಿದ ಹಣವನ್ನು ಬ್ಯಾಂಕಿನಲ್ಲಿ ಡ್ರಾ ಮಾಡಿ ತರುತ್ತೇನೆಂದು ಹೇಳಿ ಹೊರ ಬಂದಿದ್ದಾರೆ. ಆದರೆ ಆತನ ನಡವಳಿಕೆ ಅನುಮಾನಾ ಸ್ಪದವಾಗಿದ್ದರಿಂದ ಅವರು ನೇರವಾಗಿ ಉದಯ ಗಿರಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ತಕ್ಷಣ ಮಫ್ತಿಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ನಾರಾಯಣಗೌಡರ ಮನೆಗೆ ತೆರಳಿ ಎಸ್‍ಐ ಡ್ರೆಸ್‍ನಲ್ಲಿದ್ದ ಸಿದ್ದಪ್ಪನನ್ನ ವಿಚಾರಿ ಸಿದ್ದಾರೆ. ಆಗ ನಾನು ಇಂಟೆಲಿಜೆನ್ಸ್ ಸಬ್ ಇನ್ಸ್‍ಪೆಕ್ಟರ್. ನಾರಾ ಯಣಗೌಡರ ಮಗ ರೇಣುಕಾಗೌಡನಿಗೆ ಸಂಬಂಧಿಸಿದ ದೂರಿನ ವಿಚಾರಣೆಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ. ಆತನ ನಡವಳಿಕೆ ಹಾಗೂ ಹೇಳಿಕೆಯಿಂದ ಅನುಮಾನ ಗೊಂಡ ಉದಯಗಿರಿ ಪೊಲೀಸರು, ಕೂಲಂ ಕುಶವಾಗಿ ವಿಚಾರಣೆ ನಡೆಸಿದಾಗ ಸಿದ್ದಪ್ಪ ನಕಲಿ ಪೊಲೀಸ್ ಎಂಬುದು ದೃಢಪಟ್ಟಿದೆ. ಕೂಡಲೇ ಆತನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಬಿಎ ಪದವಿ ಪೂರ್ಣಗೊಳಿಸಲಾಗದ ಸಿದ್ದಪ್ಪ, ಜೀವನಕ್ಕಾಗಿ ಶಿಗ್ಗಾಂವ್ ತೊರೆದು, ಬೆಂಗಳೂರಿಗೆ ಬಂದು ಹೀಗೆ ವಂಚನೆ ಮಾಡಿಕೊಂಡೇ ಜೀವನ ನಡೆಸುತ್ತಿದ್ದನೆಂಬುದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ಸೋಮವಾರ ರಾತ್ರಿಯೂ ಉದಯ ಗಿರಿ ಠಾಣೆಗೆ ಬಂದು ಅಲ್ಲಿನ ಸಿಬ್ಬಂದಿ ಯನ್ನು ಸಂಪರ್ಕಿಸಿ, ತಾನು ಇಂಟೆಲಿಜನ್ಸ್ ಸಬ್ ಇನ್ಸ್‍ಪೆಕ್ಟರ್ ಎಂದು ಪರಿಚಯ ಮಾಡಿಕೊಂಡು ಕರ್ತವ್ಯದ ನಿಮಿತ್ತ ಬೆಂಗ ಳೂರಿನಿಂದ ಬಂದಿರುವುದಾಗಿ ಹೇಳಿ ದ್ದಾನೆ. ಠಾಣೆಯಲ್ಲಿದ್ದವರು ಆತನ ನಂಬಿ ದ್ದರೆಂದು ತಿಳಿದುಬಂದಿದೆ.

ಬೆಂಗಳೂರಿನ ಮೂರು ಠಾಣೆಗಳಲ್ಲಿ ಸಿದ್ದಪ್ಪ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಮೈಸೂರಿನ ವಿಜಯನಗರ ಹಾಗೂ ಉದಯಗಿರಿ ಠಾಣಾ ವ್ಯಾಪ್ತಿಯಲ್ಲೂ ಆತ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಹಣ ವಸೂಲಿ ಮಾಡಿದ್ದಾನೆಂಬ ಮಾಹಿತಿ ಅರಿತ ಉದಯ ಗಿರಿ ಪೊಲೀಸರು, ಪ್ರಕರಣ ದಾಖಲಿಸಿ ಕೊಂಡು ಇಂದು ರಾತ್ರಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿ ಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀ ಸರು ತಿಳಿಸಿದರು. ಬೆಂಗಳೂರಿನಲ್ಲಿ ಹುಡುಗಿ ಹೆಸರಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಓಪನ್ ಮಾಡಿದ್ದ ಸಿದ್ದಪ್ಪ, ಫ್ರೆಂಡ್ ಆದ ಹಲವು ಮಂದಿಯಿಂದ ಹಣ ಸುಲಿಗೆ ಮಾಡಿದ್ದ ಎಂಬುದೂ ವಿಚಾರಣೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

Translate »