ಮೈಸೂರಲ್ಲೂ ಉಚಿತ ಪ್ರಸಾದಾಲಯ ಸ್ಥಾಪನೆಗೆ ಪ್ರೇರಣೆಯಾಗಿದ್ದ ಶ್ರೀಗಳು
ಮೈಸೂರು

ಮೈಸೂರಲ್ಲೂ ಉಚಿತ ಪ್ರಸಾದಾಲಯ ಸ್ಥಾಪನೆಗೆ ಪ್ರೇರಣೆಯಾಗಿದ್ದ ಶ್ರೀಗಳು

January 23, 2019

ಮೈಸೂರು: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಪ್ರೇರಣೆಯಿಂದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಭಾಗದಲ್ಲಿ ತಗಡೂರು ಸುಬ್ಬಣ್ಣ ಉಚಿತ ಪ್ರಸಾದ ನಿಲಯ ಹಾಗೂ ಸುತ್ತೂರು ಶ್ರೀ ಉಚಿತ ಪ್ರಸಾದ ನಿಲಯಗಳು ಸ್ಥಾಪನೆಯಾದವು.

70ರ ದಶಕದಲ್ಲಿ ತಾತಯ್ಯ ಅನಾಥಾ ಲಯದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಶ್ರೀಗಳು ಸಿದ್ಧಗಂಗಾ ಮಠದಲ್ಲಿ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಉಚಿತ ಅನಾಥಾಲಯಗಳಿಗೆ ಕಳುಹಿಸು ತ್ತಿದ್ದರು. ಪ್ರತಿವರ್ಷ 2 ರಿಂದ 3 ಮೂರು ವಿದ್ಯಾರ್ಥಿಗಳು ಸಿದ್ಧಗಂಗಾ ಮಠದಿಂದಲೇ ಬರುತ್ತಿದ್ದರು ಎಂದು ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ತಿಳಿಸಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಜ್ಞಾನ ನೀಡುತ್ತಿದ್ದ ಅವರು, ಮೈಸೂರಿನಲ್ಲಿ ಉಚಿತ ಅನಾಥಾಲಯಗಳು ಸ್ಥಾಪನೆ ಯಾಗಲು ಕಾರಣರಾಗಿದ್ದಾರೆ. ತಾತಯ್ಯ ಅನಾಥಾಲಯದಲ್ಲಿ ವ್ಯವಸ್ಥಾಪಕನಾಗಿ ಸೇವೆಸಲ್ಲಿಸುತ್ತಿದ್ದಾಗ ಸಿದ್ಧಗಂಗಾ ಮಠದಿಂದ ಹಲವಾರು ವಿದ್ಯಾರ್ಥಿಗಳನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಇಲ್ಲಿಗೆ ಕಳುಹಿಸುತ್ತಿದ್ದರು.

ಅಂದಿನ ತಾತಯ್ಯ ಅನಾಥಾಲಯದ ಕಾರ್ಯದರ್ಶಿಯಾಗಿದ್ದ ತಾತಯ್ಯರ ಮೊಮ್ಮಗ ಎಂ.ಎಸ್.ಶ್ರೀನಿವಾಸರಾವ್, ಶಿವಕುಮಾರ ಸ್ವಾಮೀಜಿಯವರು ಕಳುಹಿಸಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡುತ್ತಿದ್ದರು. ಹಾಗೆಯೇ ಅನಾಥಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳನ್ನು ಮತ್ತೆ ಕರೆಸಿ ಕೊಂಡು ಸಿದ್ಧಗಂಗಾಮಠದಲ್ಲಿಯೇ ಉದ್ಯೋಗ ನೀಡುತ್ತಿದ್ದರು ಎಂದು ಹೇಳಿದರು.

ಸಿದ್ಧಗಂಗಾ ಮಠದಿಂದ ಬಂದ ವಿದ್ಯಾ ರ್ಥಿಗಳು ಶಿಸ್ತಿನಿಂದ ತಮ್ಮ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅನಾಥಾಲಯ ವಿದ್ಯಾರ್ಥಿಗಳು ಪ್ರತಿವರ್ಷ ವಾರ್ಷಿಕ ವಂತಿಕೆಯನ್ನು ಸಂಗ್ರಹಿಸಲು ತುಮಕೂರಿಗೆ ಭೇಟಿ ನೀಡಿದರೆ, ಅಲ್ಲಿಯೇ ಊಟ ಮತ್ತು ವಸತಿ ಸೌಲಭ್ಯದ ವ್ಯವಸ್ಥೆ ಮಾಡುತ್ತಿ ದ್ದರು. ಹಾಗೆಯೇ ಅನಾಥಾಲಯಗಳ ಬೆಳವ ಣಿಗೆ ಹಾಗೂ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸುತ್ತಿದ್ದರು ಎಂದು ತಿಳಿಸಿದರು.

Translate »