ನಿವೇಶನಕ್ಕೆ ಅತಿಕ್ರಮ ಪ್ರವೇಶ: ಪ್ರಶ್ನಿಸಿದ ಮಾಲೀಕರಿಗೆ ಕೊಲೆ ಬೆದರಿಕೆ
ಮೈಸೂರು

ನಿವೇಶನಕ್ಕೆ ಅತಿಕ್ರಮ ಪ್ರವೇಶ: ಪ್ರಶ್ನಿಸಿದ ಮಾಲೀಕರಿಗೆ ಕೊಲೆ ಬೆದರಿಕೆ

January 23, 2019

ಮೈಸೂರು: ಮೈಸೂರಲ್ಲಿ ಯಾರದೋ ನಿವೇಶನವನ್ನು ತಮ್ಮದೆಂದು ಹೇಳಿಕೊಂಡು ಅತಿಕ್ರಮಿಸಿಕೊಳ್ಳುವ ಭೂಗಳ್ಳರ ಹಾವಳಿ ನಡುವೆ ಈಗ ಆಸ್ತಿ ಮಾಲೀಕರಿಗೆ ಮತ್ತೊಂದು ಆತಂಕ ಎದುರಾಗಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದವರನ್ನು ಪ್ರಶ್ನಿಸಿದ ನಿವೇಶನ ಮಾಲೀಕರಿಗೆ ತಳ್ಳಾಡಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಸ್ಥಳಕ್ಕೆ ಬಂದ ಪೊಲೀಸ ರೊಂದಿಗೂ ಅನುಚಿತವಾಗಿ ವರ್ತಿಸಿರುವ ಘಟನೆ ಮಂಗಳವಾರ ನಡೆದಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ, ಜಾಮೀ ನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಮೈಸೂರಿನ ವಿಜಯನಗರ 2ನೇ ಹಂತದ ಮಹದೇಶ್ವರ ಬಡಾವಣೆಯಲ್ಲಿರುವ ದಯಾನಂದ್ ಎಂಬುವರಿಗೆ ಸೇರಿದ ನಿವೇ ಶನಕ್ಕೆ, ಕೆಲವರು ಅತಿಕ್ರಮ ಪ್ರವೇಶಿಸಿದ್ದ ಲ್ಲದೆ, ಅಲ್ಲೊಂದು ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ವಿಷಯ ತಿಳಿದ ನಿವೇಶನ ಮಾಲೀಕರಾದ ದಯಾನಂದ್ ತಮ್ಮ ಪತ್ನಿ ಯೊಂದಿಗೆ ಸ್ಥಳಕ್ಕೆ ಹೋಗಿ ಪ್ರಶ್ನಿಸಿದ್ದಾರೆ. ಶ್ರೀ ಮಹದೇಶ್ವರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ನಮಗೆ ಮಂಜೂರಾಗಿ ರುವ ಹಾಗೂ ನಾವು 20 ವರ್ಷದಿಂದ ಸ್ವಾಧೀನದಲ್ಲಿರುವ ನಿವೇಶನದಲ್ಲಿ ನೀವೇಕೆ ಕಟ್ಟಡ ನಿರ್ಮಿಸುತ್ತಿದ್ದೀರಿ? ಎಂದು ಕೇಳಿದ್ದಾರೆ. ಇದರಿಂದ ಸ್ಥಳದಲ್ಲಿದ್ದ ಕೆಲವರು ಸಿಟ್ಟಿಗೆದ್ದು ದಯಾನಂದ್ ದಂಪತಿ ಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ದಾರೆ. ಅಲ್ಲದೆ ಇದು ನಮಗೆ ಸೇರಿದ ನಿವೇ ಶನವಾಗಿದ್ದು, ಮತ್ತೆ ಇಲ್ಲಿಗೆ ಬರಕೂಡದು ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.

ಗಲಾಟೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಾರಾಮಾರಿ ನಡೆಯುತ್ತಿರುವುದನ್ನು ಕಂಡು ಎಲ್ಲರನ್ನೂ ಸಮಾಧಾನಪಡಿಸಲು ಮುಂದಾಗಿ ದ್ದಾರೆ. ಆಗ ಅತಿಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಗುಂಪು, ಪೊಲೀಸರ ವಿರು ದ್ಧವೇ ತಿರುಗಿಬಿದ್ದಿದೆ. ಇದು ನಮ್ಮ ನಿವೇಶನ. ನೀವು ಅವರ ಪರವಾಗಿ ಬಂದಿದ್ದೀರಿ ಎಂದು ಗಲಾಟೆ ಮಾಡಿದ್ದಾರೆ. ನಿವೇಶನ ಸಂಬಂಧ ವ್ಯಾಜ್ಯವಿದ್ದರೆ ಅದನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕು. ಹೀಗೆ ಸಾರ್ವಜನಿಕ ವಾಗಿ ಗದ್ದಲ ಮಾಡಿ, ಆತಂಕದ ವಾತಾ ವರಣ ಸೃಷ್ಟಿಸುವುದು ಸರಿಯಲ್ಲ ಎಂದು ಪೊಲೀಸರು ತಿಳಿಹೇಳಿದ್ದಾರೆ. ಆದರೂ ಕಿವಿಗೊಡದೆ ಜಗಳ ಮುಂದುವರಿಸಿದ್ದಾರೆ. ಕಡೆಗೆ ದಯಾನಂದ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೂವರನ್ನು ಬಂಧಿಸಿ, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಖಾಲಿ ನಿವೇಶನಗಳನ್ನು ತಮ್ಮದೆಂದು ಹೇಳಿಕೊಂಡು, ಅತಿಕ್ರಮಿಸಿಕೊಳ್ಳಲು ಯತ್ನಿಸಿದ್ದ ಆರೋಪದಡಿ ಈ ಗುಂಪಿನ ವಿರುದ್ಧ ಈ ಹಿಂದೆಯೇ 2 ಪ್ರಕರಣ ದಾಖ ಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ತಿಳಿದುಬಂದಿದೆ.

“1992ರಲ್ಲಿ ಜಿಲ್ಲಾಧಿಕಾರಿಗಳು ಭೂಸ್ವಾಧೀನಪಡಿಸಿಕೊಂಡು, ಶ್ರೀ ಮಹದೇಶ್ವರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಹಸ್ತಾಂತರಿಸಿದ್ದಾರೆ. ಸಂಘವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಕ್ಷೆ ಅನುಮೋದನೆ ಪಡೆದು, ಕಾನೂನು ಪ್ರಕಾರವೇ ತನ್ನ ಸದಸ್ಯರಿಗೆ ನಿವೇಶನ ವಿತರಿಸಿದೆ. ಹೀಗೆ ನಿವೇಶನ ಪಡೆದ ಬಹುತೇಕ ಮಂದಿ ಮನೆ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಿ, 25 ವರ್ಷದಿಂದ ಸ್ವಾಧೀನದಲ್ಲಿದ್ದಾರೆ.

ಎರಡೂವರೆ ದಶಕದ ನಂತರ ಈಗ ನಮ್ಮ ಜಮೀನು ಇದು. ನಾವು ಪರಿಹಾರ ಪಡೆದಿಲ್ಲ. ಇದರ ಬಗ್ಗೆ ಕೋರ್ಟ್‍ಗೆ ಹೋಗಿದ್ದೇವೆ ಎಂದು ಹೇಳಿ ಕೆಲವರು ಇಲ್ಲಿರುವ ಖಾಲಿ ನಿವೇಶನಗಳಿಗೆ ಅತಿಕ್ರಮ ಪ್ರವೇಶ ಮಾಡಿ, ಅವುಗಳ ಮಾಲೀಕರು ಪ್ರಶ್ನಿಸಿದರೆ ಬೆದರಿಕೆ ಹಾಕುವುದರೊಂದಿಗೆ ಭಯಭೀತ ವಾತಾವರಣ ಉಂಟು ಮಾಡುತ್ತಿದ್ದಾರೆ. ಖಾಲಿ ನಿವೇಶನಗಳನ್ನು ಕಂಡರೆ ಅಲ್ಲೊಂದು ಶೆಡ್ ನಿರ್ಮಿಸುತ್ತಾರೆ. ನಿವೇಶನದ ನಿಜವಾದ ಮಾಲೀಕರು ಮನೆ ನಿರ್ಮಾಣಕ್ಕೆ ಮುಂದಾದರೆ, ಅಡ್ಡಿಪಡಿಸಿ ಹೆದರಿಸುತ್ತಾರೆ. ಮಧ್ಯವರ್ತಿ ಯನ್ನು ಮುಂದಿಟ್ಟುಕೊಂಡು ಹಣಕ್ಕೆ ಬೇಡಿಕೆಯಿಡುತ್ತಾರೆ. ರಾಜೀ ಪಂಚಾಯ್ತಿ ನೆಪದಲ್ಲಿ, ಹಣ ವಸೂಲಿ ಮಾಡುತ್ತಾರೆ. ಮಹಿಳೆಯರನ್ನು ಮುಂದೆ ಬಿಟ್ಟು ಈ ರೀತಿ ಗದ್ದಲ ಮಾಡಿಸುತ್ತಾರೆ. ಆಸ್ತಿ ಮೌಲ್ಯ ಹೆಚ್ಚಾದ ನಂತರದಿಂದ ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆ. ಕಾನೂನಾ ತ್ಮಕವಾಗಿ ನಿವೇಶನ ಪಡೆದವರು ನೆಮ್ಮದಿಯಿಂದ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆಲ್ಲಾ ಕಡಿವಾಣ ಹಾಕದಿದ್ದಲ್ಲಿ, ಮುಂದೊಂದು ದಿನ ಭಾರೀ ಅನಾಹುತವೇ ಸಂಭವಿಸಬಹುದು.

-ಶಿವರಾಮು, ಮಹದೇಶ್ವರ ಬಡಾವಣೆ ನಿವಾಸಿ

Translate »