ಕಾರ್ಮಿಕರ ಸಹಕಾರ ಸಂಘದ ಮೂಲಕ ಫಾಲ್ಕನ್ ಟೈರ್ಸ್ ನಿರ್ವಹಣೆ
ಮೈಸೂರು

ಕಾರ್ಮಿಕರ ಸಹಕಾರ ಸಂಘದ ಮೂಲಕ ಫಾಲ್ಕನ್ ಟೈರ್ಸ್ ನಿರ್ವಹಣೆ

February 16, 2019

ಬೆಂಗಳೂರು: ಕಂಪನಿಯ ನೌಕರರ ಮೂಲಕವೇ ಮೈಸೂರಿನ ಫಾಲ್ಕನ್ ಟೈರ್ಸ್ ಕಂಪನಿ ಪುನರ್ ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಕಂಪನಿಯಲ್ಲಿ ದುಡಿಯುತ್ತಿದ್ದ ನೌಕರರ ಸಹಕಾರಿ ಸಂಘ ರಚಿಸಿ, ಟೈರ್ ಕಂಪನಿಗೆ ಪುನರ್ಜೀವ ನೀಡುವುದೇ ಇದರ ಉದ್ದೇಶವಾಗಿದೆ. ಕಂಪನಿ ಪುನರ್ ಆರಂಭಿಸಲು 180 ಕೋಟಿ ರೂ.ಗಳ ಮೂಲ ಬಂಡವಾಳ ಅಗತ್ಯವಿದ್ದು, ಅದನ್ನು ನೌಕರರು ಮತ್ತು ಸಾರ್ವಜನಿಕರ ಷೇರುಗಳ ಮೂಲಕ ಸಂಗ್ರಹಿಸಲು ನಿರ್ಧರಿಸಲಾಗಿದೆ. ಸಭೆಯ ನಿರ್ಧಾರವನ್ನು ಮಾರ್ಚ್ 5 ರಂದು ನ್ಯಾಯಾಲಯದ ಗಮನಕ್ಕೆ ತಂದು ಮತ್ತೊಂದು ಅವಕಾಶ ಪಡೆಯುವ ತೀರ್ಮಾನಕ್ಕೆ ಬರಲಾಗಿದೆ. ಟಾಟಾ ಕನ್ಸಲ್ಟೆನ್ಸ್ ಸಂಸ್ಥೆಯ ಅಧಿಕಾರಿಗಳು ಇಂದಿನ ಸಭೆಯಲ್ಲಿ ನೀಡಿದ ಸಲಹೆಗೆ ಸರ್ಕಾರ ಮತ್ತು ನೌಕರರು ತಲೆದೂಗಿದ್ದಾರೆ. ರಾಷ್ಟ್ರದಲ್ಲಿ ಇಂತಹ ಹತ್ತು ಹಲವು ಸಂಸ್ಥೆಗಳು ಕಾರ್ಮಿಕರ ಸಂಘಟನೆಯಿಂದಲೇ ನಡೆಯುತ್ತಿವೆ. ಈ ಸಂಸ್ಥೆಯನ್ನು ಪುನರುಜ್ಜೀವನ ಗೊಳಿಸಲು ಅಲ್ಲಿನ ನೌಕರರು ಸಹಕಾರ ಸಂಘ ಸ್ಥಾಪಿಸಲಿ.

ಸರ್ಕಾರ ಇದರ ಮೇಲುಸ್ತುವಾರಿ ನೋಡಿಕೊಂಡರೆ ಅಗತ್ಯ ಬಂಡವಾಳ ಸಂಗ್ರಹಿಸಿ, ಟೈರ್ ಕಂಪನಿಯನ್ನು ಪುನಃ ಪ್ರಾರಂಭಿಸಿ, 2500 ನೌಕರರಿಗೂ ಮತ್ತೆ ಉದ್ಯೋಗ ಕಲ್ಪಿಸಬಹುದು.
ನೌಕರರು ಸಮ್ಮತಿಸಿದಲ್ಲಿ ನಾವು ಈ ಸಂಬಂಧ ಪೂರ್ಣ ವರದಿ ಕೊಡುವುದಾಗಿ ಟಾಟಾ ಕನ್ಸಲ್ಟೆನ್ಸಿಯವರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಈ ಸಲಹೆಗೆ ಸಭೆಯಲ್ಲಿದ್ದ ಸಚಿವರು, ಅಧಿಕಾರಿಗಳ ಜೊತೆ ನೌಕರರು ಸಮ್ಮತಿ ನೀಡಿದ್ದು, ಬೃಹತ್ ಬಂಡವಾಳ ಸಂಗ್ರಹ ಮತ್ತು ಪುನರ್ ಆರಂಭಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ.
ನಷ್ಟದ ಕಾರಣವೊಡ್ಡಿ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಆಡಳಿತ ಮಂಡಳಿ ಟೈರ್ ಕಂಪನಿಗೆ ಬೀಗ ಜಡಿದಿತ್ತು. ಆನಂತರ ಆಡಳಿತ ಮಂಡಳಿ ಮತ್ತು ನೌಕರರ ನಡುವೆ ಹತ್ತು ಹಲವು ಸಭೆಗಳು ನಡೆದರೂ, ಪ್ರಯೋಜನವಾಗಲಿಲ್ಲ.

ಸರ್ಕಾರ ಮಧ್ಯೆ ಪ್ರವೇಶ ಮಾಡಿ ಟೈರ್ ಕಂಪನಿಯನ್ನು ಪುನರ್ ಪ್ರಾರಂಭಿಸಲು ನಡೆಸಿದ ಯತ್ನ ವಿಫಲಗೊಂಡಿತ್ತು. ಇದೀಗ ಹೊಸ ಭರವಸೆ ಮೂಡಿದೆ. ಇಂದಿನ ಸಭೆಯಲ್ಲಿ ಜಿ.ಟಿ.ದೇವೇಗೌಡರಲ್ಲದೆ, ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Translate »