ತಲೆ ಮೇಲೆ ತೆಂಗಿನಕಾಯಿ ಬಿದ್ದು ರೈತ ಸಾವು
ಮಂಡ್ಯ

ತಲೆ ಮೇಲೆ ತೆಂಗಿನಕಾಯಿ ಬಿದ್ದು ರೈತ ಸಾವು

March 5, 2020

ಕೆ.ಆರ್.ಪೇಟೆ,ಫೆ.04-ಜಮೀನಿನ ತೋಟದಲ್ಲಿ ಕಾಯಿ ಕೀಳುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ತೆಂಗಿನಕಾಯಿಯು ತಲೆಯ ಮೇಲೆ ಬಿದ್ದ ಪರಿ ಣಾಮ ಗಂಭೀರವಾಗಿ ಗಾಯಗೊಂಡ ರೈತನೊಬ್ಬ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವ ಘಟನೆ ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ರಾಯಸಮುದ್ರ ಗ್ರಾಮದ ಸಿದ್ದೇಗೌಡರ ಮಗ ಚಂದ್ರೇಗೌಡ (59) ಮೃತ ರೈತ.

ಘಟನೆ ವಿವರ: ಚಂದ್ರೇಗೌಡ ಅವರ ರಾಯಸಮುದ್ರ ಗ್ರಾಮದ ಎಲ್ಲೆಯಲ್ಲಿರುವ ತಮ್ಮ ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ಸಮಯದಲ್ಲಿ ತೆಂಗಿನಕಾಯಿಯೊಂದು ಆಕಸ್ಮಿಕವಾಗಿ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಗಂಭೀರವಾದ ಗಾಯಗಳಾಗಿ ಅಪಾರ ರಕ್ತಸ್ರಾವ ಉಂಟಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅಕ್ಕಪಕ್ಕದ ರೈತರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರುತ್ತಿರುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ದೇವಮ್ಮ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಮಂಜೇಗೌಡ ಮತ್ತು ಸಹೋದರ ಉಪ ತಹಸೀಲ್ದಾರ್ ಆರ್.ಎಸ್.ಮಹದೇವೇಗೌಡ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತ ರೈತ ಚಂದ್ರೇಗೌಡ ಅವರ ನಿಧನಕ್ಕೆ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅದ್ಯಕ್ಷ ಹೆಚ್.ಟಿ.ಮಂಜು, ಜಿ.ಪಂ. ಸದಸ್ಯ ಬಿ.ಎಲ್.ದೇವರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಎಪಿಎಂಸಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಜೆಡಿಎಸ್ ಹಿರಿಯ ಮುಖಂಡ ಬಸ್ ಕೃಷ್ಣೇಗೌಡ, ತಾ.ಪಂ. ಸದಸ್ಯ ಖಲೀಲ್‍ಬಾಬು, ಎಂ.ಎನ್.ವಿಜಯಕುಮಾರ್, ಗ್ರಾ.ಪಂ. ಅಧ್ಯಕ್ಷ ಉಮೇಶ್, ಮಾಜಿ ಅಧ್ಯಕ್ಷ ಭೈರಾಪುರ ಹರೀಶ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Translate »