ಇಂದು ರಾಜ್ಯ ಬಜೆಟ್ ; ಬಹು ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ
ಕೊಡಗು

ಇಂದು ರಾಜ್ಯ ಬಜೆಟ್ ; ಬಹು ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ

March 5, 2020

ಮಡಿಕೇರಿ,ಮಾ.4-ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಮಾರ್ಚ್ 5ರಂದು ಬಜೆಟ್ ಮಂಡನೆ ಮಾಡಲಿದ್ದು, ಜಿಲ್ಲೆಯ ಜನರ ನಿರೀಕ್ಷೆಗಳು ಕೂಡ ಬೆಟ್ಟದಷ್ಟಿವೆ. ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಬೇಕೆಂಬ ಕೂಗು ಕೂಡ ಇದ್ದು, ಇದೀಗ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಗಳು ದೊರೆಯಬಹುದೇ ಎಂಬ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳ ಲಾಗಿದೆ. ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿದ್ದು, ಇಂದಿಗೂ 2018ರ ವಿಕೋಪದ ಕಾಮಗಾರಿಗಳು ಪೂರ್ಣಗೊಂಡಿಲ್ಲ. 2019ರ ಜಲ ಪ್ರಳಯಕ್ಕೆ ತುತ್ತಾದ ಕುಟುಂಬಗಳಿಗೆ ಸರಕಾರ ಪರಿಹಾರ ನೀಡಿದೆಯಾದರೂ, ಶಾಶ್ವತ ಎನ್ನುವ ಯೋಜನೆ ಗಳು ಜಾರಿಯಾಗಿಲ್ಲ ಎಂಬ ಮಾತುಗಳು ಕೂಡ ಇದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಕೊಡಗಿನ ಶಾಸಕರಿಗೆ ಮಂತ್ರಿ ಸ್ಥಾನ ದೊರಕಲೇ ಇಲ್ಲ. ಆದ್ರೆ ಸಚಿವ ಸ್ಥಾನ ವಂಚಿತವಾದ ಕೊಡಗಿಗೆ ಏನೆಲ್ಲಾ ಮೂಲ ಸೌಕರ್ಯ ಗಳು ಬೇಕಾಗಿದೆಯೋ ಅದೆಲ್ಲವನ್ನೂ ಕೊಡಲಾಗುತ್ತದೆ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಂತಿದೆ. ಹೀಗಾಗಿ ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ಕೊಡಗಿಗೆ ಭರ್ಜರಿ ಕೊಡುಗೆ ಗಳನ್ನು ಮುಖ್ಯಮಂತ್ರಿಗಳಿಂದ ನಿರೀಕ್ಷಿಸಲಾಗಿದೆ.

ಕಳೆದ ಸಾಲಿನ ಬಜೆಟ್ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿತ್ತು. ಪ್ರತಿ ಚುನಾವಣೆ ಯಲ್ಲೂ ಬಿಜೆಪಿಗೆ ಬಲ ತುಂಬುವ ಜಿಲ್ಲೆಯ ಜನತೆ ಕಳೆದ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೂ ಕುಮಾರಸ್ವಾಮಿ ಕೊಡಗು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹೆಚ್ಚುವರಿ ಆಸ್ಪತ್ರೆ ನಿರ್ಮಿಸಲು 100 ಕೋಟಿ ಸೇರಿದಂತೆ ಹಲವು ಕೊಡುಗೆಗಳನ್ನು ತಮ್ಮ ಬಜೆಟ್‍ನಲ್ಲಿ ಪ್ರಕಟಿಸಿದ್ದರು. ಈ ಬಾರಿ ರಾಜ್ಯದಲ್ಲಿ ಬಿಜೆಪಿಯದ್ದೇ ಆಡಳಿತವಿದೆ. ಹಾಗಾಗಿ ಜಿಲ್ಲೆಯ ಜನತೆಯಲ್ಲೂ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ಕೊಡಗು ಸತತವಾಗಿ ಕಳೆದ 2 ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ಒಳಗಾಗುತ್ತಾ ಬರುತ್ತಿದೆ. ಇದರಿಂದಾಗಿ ಪ್ರತಿ ವರ್ಷವೂ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಇದನ್ನು ತಡೆಗಟ್ಟಲು ಶಾಶ್ವತವಾದ ಯೋಜನೆ ರೂಪಿಸುವ ಅಗತ್ಯ ಇದೆ. 2018ರ ನಿರಾಶ್ರಿತರ ಪೈಕಿ ಕೇವಲ 35 ಮಂದಿಗೆ ಮಾತ್ರ ಈ ತನಕ ಮನೆ ಸಿಕ್ಕಿದೆ. 2019ರ ನಿರಾಶ್ರಿತರಿಗೆ ಪುನರ್ವಸತಿ ಕೊಡಿಸುವುದಕ್ಕೆ ಸಂಬಂಧಿಸಿದಂತೆ ಈಗಷ್ಟೇ ಪ್ರಕ್ರಿಯೆಗಳು ಪ್ರಾರಂಭ ವಾಗಿದೆ. ಇದಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಬಜೆಟ್‍ನಲ್ಲಿ ಯೋಜನೆಗಳನ್ನು ಪ್ರಕಟಿಸಬೇಕು ಎನ್ನುವುದು ಹಲವರ ಒತ್ತಾಯ.

ಸಂತ್ರಸ್ತರಿಗೆ ಸೂಕ್ತ ಅನುಕೂಲ, ಕಾಡಾನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರದ ಯೋಜನೆ, ಪ್ರವಾಸೋದ್ಯಮ ಚೇತರಿಕೆಗೆ ಬಂಪರ್ ಕೊಡುಗೆ, ಹಾಳಾಗಿರುವ ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಕ್ರೀಡಾ ಚಟುವಟಿಕೆ ಹೆಚ್ಚಳಕ್ಕೆ ಪ್ರೋತ್ಸಾಹ, ಕಾಫಿ ಬೆಳೆಗಾರರ ನೆರವಿಗೆ ಪ್ಯಾಕೇಜ್ ಘೋಷಣೆ, ಕಾಫಿ ಬೆಳೆಗಾರರ ಸಾಲ ಮನ್ನಾ ಮತ್ತು ವಿಶೇಷ ಪ್ಯಾಕೇಜ್ ಘೋಷಿಸುವುದು, ವನ್ಯಪ್ರಾಣಿಗಳ ಹಾವಳಿಗೆ ಸಿಲುಕಿ ಮೃತಪಡುವ ಮಾನವ ಮತ್ತು ಜಾನುವಾರುಗಳ ಪರಿಹಾರ ಭತ್ಯೆಯನ್ನು ಏರಿಕೆ ಮಾಡುವುದು, ಪ್ರವಾಹದಿಂದ ಆಗುವ ಹಾನಿ ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸು ವುದು ಸೇರಿದಂತೆ ಎಂಬ ಬೇಡಿಕೆಗಳ ಪಟ್ಟಿಯೇ ಇದೆ.

ಈಗಾಗಲೇ ಜಿಲ್ಲೆಯ ಶಾಸಕ, ಮಾಜಿ ಸ್ಪೀಕರ್ ಕೆ,ಜಿ. ಬೋಪಯ್ಯ, ಮತ್ತು ಮಾಜಿ ಕ್ರೀಡಾ ಮಂತ್ರಿ, ಹಾಲಿ ಶಾಸಕ ಅಪ್ಪಚ್ಚು ರಂಜನ್ ಅವರುಗಳು ಜನರ ಬಹುತೇಕ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರಿಗೆ ಸಲ್ಲಿಸಿದ್ದು, ಬಜೆಟ್‍ನಲ್ಲಿ ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

ಬಿಜೆಪಿಯ ಭದ್ರ ಕೋಟೆಯಾಗಿ ಗುರುತಿಸಿಕೊಂಡಿರುವ, ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದಿಂದ ವಂಚಿತವಾಗಿರುವ ಅದರಲ್ಲೂ ಕಳೆದ 2 ವರ್ಷಗಳಿಂದ ಹಿಂದೆಂದೂ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪವನ್ನು ಎದುರಿಸುತ್ತಿರುವ ಕಾವೇರಿ ತವರು ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಬಜೆಟ್‍ನಲ್ಲಿ ಯಾವ ರೀತಿ ಗಿಫ್ಟ್ ಅನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಸಾದ್ ಸಂಪಿಗೆಕಟ್ಟೆ

Translate »