ಶ್ರೀರಂಗಪಟ್ಟಣ,ಮಾ.4(ವಿನಯ್ ಕಾರೇಕುರ)- ರೈತರ ಅನುಮತಿ ಇಲ್ಲದೆ ಕೇಂದ್ರ ತಂಡ ಲಿಥಿಯಂ ನಿಕ್ಷೇಪ ಪತ್ತೆ ಯಾಗಿ ನಡೆಸುತ್ತಿರುವ ಗಣಿಗಾರಿಕೆಯಿಂದ ಹಲವು ವರ್ಷಗಳಿಂದ ಈ ಭಾಗದ ರೈತರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಿ ಎಂದು ಬುಧವಾರ ರೈತ ಸಂಘ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ತಾಲೂಕಿನ ಮರಳೆಗಾಲ ಹಾಗೂ ಅಲ್ಲಾಪಟ್ಟಣದ ಆಸುಪಾಸಿನಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿ ಭಾರಿ ಸುದ್ದಿ ಮಾಡಿತ್ತು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ ಲಿಥಿಯಂ ನಿಕ್ಷೇಪ ಇರುವ ಮರಳೆ ಗಾಲ, ಬಸವನಪುರ ಹಾಗೂ ಅಲ್ಲಾಪಟ್ಟಣ ದಲಿ 80 ಜನ ರೈತರ ಸುಮಾರು 150 ಎಕರೆ ಜಮೀನನ್ನು ಸರ್ಕಾರ 1990 ರಲ್ಲೇ ರೈತರಿಗೆ ಸಾಗುವಳಿ ಪತ್ರ ನೀಡಿತ್ತು. ಆದರೆ ಕಳೆದ 7 ವರ್ಷಗಳಿಂದ ಎ ಎಂ ಡಿ ಎಂಬ ಕಂಪನಿ ಸರ್ಕಾರ ದಿಂದ ಯಾವುದೇ ಪರವಾನಗಿ ಇಲ್ಲದೆ, ರೈತರಿಗೆ ಯಾವುದೇ ಪರಿಹಾರ ನೀಡದೆ ಇಲ್ಲಿ ನಿಕ್ಷೇಪ ಹುಡುಕುತ್ತಿದೆ. ಇದರಿಂದ ಈ ಭಾಗದ ರೈತರಿಗೆ ತುಂಬಾ ನಷ್ಟವಾಗಿದೆ. ಆದ್ದರಿಂದ ಮೋದಲು ಈ ರೈತರಿಗೆ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ನಂತರ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ ಎಂದು ತಹಸೀಲ್ದರ್ ಅವರಿಗೆ ಮನವಿ ಮಾಡಿದರು. ಈ ಪ್ರತಿಭಟನೆಯಲ್ಲಿ ನೂರಾರು ಜನ ರೈತರು ದಲಿತ ಸಂಘಟನೆಯ ಸದಸ್ಯರು ಭಾಗಿಯಾಗಿದ್ದರು.