ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವುದರ  ವಿರುದ್ಧ ರೈತ ಸಂಘ ಹೋರಾಟ
ಮೈಸೂರು

ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವುದರ ವಿರುದ್ಧ ರೈತ ಸಂಘ ಹೋರಾಟ

February 24, 2019

ಮೈಸೂರು: ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕೈಗೊಂಡ ಕ್ರಮ ಹಾಗೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ಸೂಚಿಸಲು ಮಂಡನೆಯಾದ ಅಸಮರ್ಪಕ ವಾದವು ರೈತರು ಹಾಗೂ ಅರಣ್ಯ ವಾಸಿಗಳಿಗೆ ಮಾರಕವಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವಿಷಾದಿಸಿ ದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಮುಕ್ತ ಮಾರುಕಟ್ಟೆಯ ಬೆಲೆಗಿಂತ 2ರಷ್ಟು ದರ ನಿಗದಿ ಮಾಡಬೇಕು. ಸ್ವಾಧೀನಕ್ಕಾಗಿ ರೈತರಿಂದ ಸಮ್ಮತಿ ಪಡೆಯಬೇಕು. ಆದರೆ ಈ ಎಲ್ಲಾ ನಿಯಮಾವಳಿಗಳನ್ನು ಕಾಯ್ದೆಗೆ ತಿದ್ದುಪಡಿ ಮಾಡಿ ದುರ್ಬಲಗೊಳಿಸುವ ಹುನ್ನಾರ ನಡೆಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂಬ ಸುಪ್ರೀಂಕೋರ್ಟ್ ಸೂಚನೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಸಮರ್ಪಕ ವಾದ ಮಂಡನೆಯೇ ಕಾರಣವಾಗಿದೆ. ಮೂರು ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲಿ ಇರುವವರು ಅರಣ್ಯವಾಸಿಗಳಾಗಿದ್ದು, ಅವರು ಅಲ್ಲಿ ವಾಸಿಸಲು ಅರ್ಹರು ಎಂಬ ನಿಯಮವಿದೆ. ಈಗಾಗಲೇ ಆದಿವಾಸಿಗಳು ನೀಡಿದ ಎಷ್ಟೋ ಅರ್ಜಿಗಳು ತಿರಸ್ಕೃತವಾಗಿವೆ. ಇದಕ್ಕೆ ಅಧಿಕಾರಿಗಳು ನಡೆಸಿದ ಬೇಜವಾಬ್ದಾರಿ ಸಮೀಕ್ಷೆಗಳೇ ಕಾರಣ. ಸುಪ್ರೀಂಕೋರ್ಟ್ ನಲ್ಲಿಯೂ ಸಮರ್ಪಕ ವಾದ ಮಾಡಿಲ್ಲ ಎಂದು ದೂರಿದರು.

ಅರಣ್ಯದಿಂದ ಒಕ್ಕಲೆಬ್ಬಿಸುವ ಹುನ್ನಾರ ಖಂಡಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಬೇಕು. ಅರಣ್ಯ ವಾಸಿಗಳೂ ರೈತರೇ ಆಗಿರುವ ಕಾರಣ ಆ ಹೋರಾಟಕ್ಕೆ ರೈತ ಸಂಘ ಬೆಂಬಲ ನೀಡಿ, ತಾನೂ ಅದರಲ್ಲಿ ಪಾಲ್ಗೊಳ್ಳಲಿದೆ ಎಂದರು. ಹೊಸಕೋಟೆ ಬಸವರಾಜು ಮಾತನಾಡಿ, ನಂಜನಗೂಡು ಬಳಿಯ ಹುಣಸವಾಳಿನಲ್ಲಿ ಮದ್ಯ ಮಾರಾಟ, ಜೂಜಿಗೆ ನಿಷೇಧವಿದ್ದರೂ ಇದೀಗ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಇದರ ವಿರುದ್ಧ ಕೆಲ ದಿನಗಳ ಹಿಂದೆ ರೈತ ಸಂಘ ಹೋರಾಟ ನಡೆಸಿದಾಗ, ಜಿಲ್ಲಾಧಿಕಾರಿ 1 ವಾರ ಕಾಲಾವಕಾಶ ಕೇಳಿದ್ದರು. ಆದರೆ, ಈಗಲೂ ಮದ್ಯದಂಗಡಿ ಪರವಾನಗಿ ರದ್ದಾಗಿಲ್ಲ. ಹೀಗಾಗಿ 1 ವಾರದೊಳಗೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದರು. ಗೋಷ್ಠಿಯಲ್ಲಿ ರೈತ ಮುಖಂಡರಾದ ಹೊಸಕೋಟೆ ಕುಮಾರಸ್ವಾಮಿ, ಮರಂಕಯ್ಯ ಇದ್ದರು.

Translate »