ಮೈಸೂರು,ಸೆ.23(ಆರ್‍ಕೆ)-ರೈತರ ಜಮೀನುಗಳ ಖಾತೆ-ಕಂದಾಯ ಮಾಡಿಕೊಡಲು ನಂಜನಗೂಡು ತಾಲೂಕು ತಹಶೀಲ್ದಾರರು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಆರೋಪಿಸಿ ರೈತರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸಿದರು.
ಕಂದಾಯ ಇಲಾಖೆ ಸಂಬಂಧ ಭೂ ದಾಖಲೆ, ಇನ್ನಿತರ ಸೌಲಭ್ಯ, ಸೇವೆಗಳನ್ನು ಪಡೆಯಲು ಕಚೇರಿಗೆ ಹೋಗುವ ರೈತರನ್ನು ಹಿಯ್ಯಾಳಿಸಿ ಮನಸ್ಸಿಗೆ ಬಂದಂತೆ ಮಾತ ನಾಡುವ ಮೂಲಕ ನಂಜನಗೂಡು ತಹಶೀಲ್ದಾರ್ ಕೆ.ಎಂ.ಮಹೇಶ್ ಉದ್ಧಟತನ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ದಾಖಲೆಗಳು ಸರಿ ಇದ್ದರೂ ಭೂಮಿಗೆ ಸಂಬಂಧಪಟ್ಟ ಖಾತೆ ಮಾಡಲು ನಿರಾಕರಿಸುತ್ತಿರುವ ಅವರನ್ನು ರೈತ ಮುಖಂಡರು ಭೇಟಿ ಮಾಡಿದಾಗಲೂ ಮಹೇಶ್ ಅವರು ಉದ್ಧಟತನದಿಂದ ವರ್ತಿಸು ತ್ತಾರೆ ಎಂದ ಅವರು, ಈ ಅಧಿಕಾರಿಯನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು.
ತಹಶೀಲ್ದಾರ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಜಿಲ್ಲಾ ಧಿಕಾರಿಗಳು ಮಧ್ಯಪ್ರವೇಶಿಸಿ ರೈತರಿಗೆ ತಹಶೀಲ್ದಾರ್ ಕಚೇರಿ ಸೌಲಭ್ಯ ಕೊಡಿಸುವ ಜೊತೆಗೆ ಮಹೇಶ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ರಾಜ್ಯ ರೈತರ ಸಂಘ ಹಳೆಮಿರ್ಲೆ ಸುನೇಗೌಡ, ರಾಜೇಂದ್ರ, ಎಂ.ಎಸ್.ತ್ರಿನೇಶ, ಜಗದೀಶ, ರಾಜು, ಸಿದ್ದರಾಜು, ಪರಮೇಶ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.