ಕಬಿನಿ, ಕಾವೇರಿ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಮೈಸೂರು

ಕಬಿನಿ, ಕಾವೇರಿ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ

February 21, 2019

ಮೈಸೂರು: ಕೃಷಿ ಚಟುವಟಿಕೆ ನಡೆಸಲು ಕಬಿನಿ, ಕಾವೇರಿ ಅಚ್ಚುಕಟ್ಟು ನಾಲೆಗಳಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ರೈತ ಸಮುದಾಯ ಹಲವು ಸಮಸ್ಯೆ ಗಳಿಗೆ ತುತ್ತಾಗಿದೆ. ಬೆಳೆ ನಷ್ಟ, ಬೆಂಬಲ ಬೆಲೆ ಸಿಗದೇ ಇರುವುದು ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ನಾಲೆ ಗಳಿಗೆ ಕೂಡಲೇ ನೀರು ಬಿಡಬೇಕು. ಆ ಮೂಲಕ ರೈತರು ಹಾಗೂ ಜಾನುವಾರು ಗಳಿಗೆ ನೆರವಾಗಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬಿನಿ ಬಲದಂಡೆ, ಎಡ ದಂಡೆ ಮತ್ತು ಹುಲ್ಲಹಳ್ಳಿ, ರಾಂಪುರ, ದೇವರಾಜ ಅರಸು ನಾಲೆ, ಸಿಡಿಎಸ್ ನಾಲೆ, ರಾಮಸ್ವಾಮಿ ನಾಲೆಗಳಿಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು. ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಲ್ಲದೆ ಬೆಳೆದು ನಿಂತಿರುವ ಕಬ್ಬು, ಬಾಳೆ ಇನ್ನಿತರ ಬೆಳೆಗಳನ್ನು ರಕ್ಷಿಸಲು ಅನುಕೂಲ ವಾಗುತ್ತದೆ ಎಂದರು.

ಕಬಿನಿ ಜಲಾಶಯದಲ್ಲಿ 74 ಅಡಿ ನೀರಿನ ಸಂಗ್ರಹವಿದೆ. 10 ದಿನ ಬಿಟ್ಟು 15 ದಿನ ನೀರು ಹರಿಸಿದರೆ ಸುಮಾರು ನಾಲ್ಕು ಕಟ್ಟು ನೀರು ಪದ್ಧತಿಯಲ್ಲಿ ನೀರು ಬಿಟ್ಟರೆ ರೈತರಿಗೆ ಅನುಕೂಲವಾಗುತ್ತದೆ. ಬೇಸಿಗೆಯಲ್ಲಿ ಕೆರೆಕಟ್ಟೆಗಳು ಭರ್ತಿಯಾಗಿ ಜನಜಾನುವಾರುಗಳ ಕುಡಿಯುವ ನೀರಿನ ಬವಣೆ ತಪ್ಪುತ್ತದೆ ಎಂದರು.

ಪ್ರತಿಭಟನೆಯಲ್ಲಿ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್, ಅತ್ತಹಳ್ಳಿ ದೇವರಾಜ್, ಪಿ. ಸೋಮಶೇಖರ್, ಕಿರಗಸೂರು ಶಂಕರ್, ಬರಡನಪುರ ನಾಗರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »