ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಖಂಡಿಸಿ ರೈತರ ಪ್ರತಿಭಟನೆ
ಮೈಸೂರು

ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಖಂಡಿಸಿ ರೈತರ ಪ್ರತಿಭಟನೆ

March 10, 2019

ಮೈಸೂರು: ರಾಜ್ಯ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ರೈತ ಸಮುದಾಯಕ್ಕೆ ಮಾರಕವಾದ ಈ ತಿದ್ದುಪಡಿಯಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಸ್ವರಾಜ್ ಇಂಡಿಯಾ, ದಲಿತ ಸಂಘರ್ಷ ಸಮಿತಿ (ದಸಂಸ) ಮತ್ತು ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆಯ ಮೈಸೂರು ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, 2013ರಲ್ಲಿ ಅಂದಿನ ಯುಪಿಎ ಸರ್ಕಾರ ಅನುಷ್ಠಾನಗೊಳಿಸಿದ ಭೂ ಸ್ವಾಧೀನ ಕಾಯ್ದೆಗೆ ವ್ಯತಿರಿಕ್ತವಾದ ರೀತಿಯಲ್ಲಿ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಮಾರಕವಾದ ಅಂಶಗಳು ತಿದ್ದುಪಡಿಯಲ್ಲಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಅಧಿ ವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ ಯಾವುದೇ ಚರ್ಚೆಯೇ ಇಲ್ಲದೆ, ಅಂಗೀಕಾರ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿದ್ದುಪಡಿಯ ಮೂಲಕ ರೈತರ ಹಿತಾಸಕ್ತಿ ಬಲಿ ಕೊಟ್ಟು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ದೇಶಾದ್ಯಂತ ರೈತರು ಮತ್ತು ಜನಪರ ಸಂಘಟನೆಗಳು ಹೋರಾಟ ನಡೆಸಿದ್ದರ ಫಲವಾಗಿ ಬ್ರಿಟಿಷ್ ಸರ್ಕಾರ ರೂಪಿಸಿದ್ದ 1894ರ ಭೂ ಸ್ವಾಧೀನ ಕಾಯ್ದೆಯನ್ನು ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ರದ್ದುಪಡಿಸಿ 2013ರ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿತು. ಈ ಕಾಯ್ದೆಯು ಭೂಮಿ ಕಳೆದುಕೊಳ್ಳುವ ರೈತ ಕುಟುಂಬಗಳಿಗೆ ಬದುಕನ್ನು ಪುನರ್ ರೂಪಿಸಲು ಪೂರ್ಣ ಸಮಾನಾಂತರ ಪರಿ ಹಾರ ಒದಗಿಸಿಕೊಟ್ಟಿಲ್ಲವಾದರೂ ಕನಿಷ್ಠ ಸಮಾಧಾನಕರ ಅಂಶ ಗಳನ್ನು ಒಳಗೊಂಡಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

2013ರ ಕಾಯ್ದೆಗೆ ತದ್ವಿರುದ್ಧ ಅಂಶಗಳ ಒಳಗೊಂಡ ತಿದ್ದುಪಡಿ ತರಲು ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮುಂದಾಗಿತ್ತು. ಇದಕ್ಕೆ ರೈತಪರ ಹಾಗೂ ಪ್ರಗತಿಪರ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ, ಸಂಸತ್ತಿನ ಮೇಲ್ಮನೆಯಲ್ಲಿ ಎರಡು ಬಾರಿ ಮಂಡನೆಯಾದ ತಿದ್ದುಪಡಿ ಮಸೂದೆ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿ ನೆನೆಗುದಿಗೆ ಬಿದ್ದಿತು. ಆದರೆ ಆಯಾಯ ರಾಜ್ಯ ಸರ್ಕಾರಗಳು ತಿದ್ದುಪಡಿ ಮಾಡಿ ಕೊಳ್ಳಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ರೈತರ ಹಿತಾಸಕ್ತಿ ಬಲಿಕೊಡುವ ಅಂಶಗಳನ್ನು ಒಳಗೊಂಡಂತೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ಕಿಡಿಕಾರಿದರು.

2013ರ ಕಾಯ್ದೆ ಪ್ರಕಾರ ಭೂ ಸ್ವಾಧೀನಕ್ಕೆ ಪುನರ್ವಸತಿಗೆ ಒಳಗಾಗುವ ಶೇ.80ರಷ್ಟು ರೈತರ ಅನುಮತಿ ಕಡ್ಡಾಯ. ಇದ ರೊಂದಿಗೆ ಕಾಯ್ದೆಯಲ್ಲಿ ರೈತಪರವಾದ ಅಂಶಗಳಿದ್ದು, ಇದೀಗ ರಾಜ್ಯ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ತಿದ್ದುಪಡಿ ಮೂಲಕ ಬಂಡವಾಳ ಶಾಹಿಗಳ ಹಿತ ಕಾಯಲು ಹೊರಟಿದೆ. ಇದು ಬ್ರಿಟಿಷರ ಕಾಯ್ದೆ ಮುಂದುವರೆಸುವ ಭಾಗವಾಗಿದೆ ಎಂದು ಆರೋಪಿಸಿದರು.

ಸಾಹಿತಿ ದೇವನೂರ ಮಹಾದೇವ, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ, ರೈತ ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಸ್ವರಾಜ್ ಇಂಡಿಯಾ ಪಕ್ಷದ ಅಭಿರುಚಿ ಗಣೇಶ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »