ರಸ್ತೆ ಬದಿ ವ್ಯಾಪಾರಿಗಳಿಗೆ ಕೊಡೆ ವಿತರಿಸಿದ ಶಾಸಕ ರಾಮದಾಸ್
ಮೈಸೂರು

ರಸ್ತೆ ಬದಿ ವ್ಯಾಪಾರಿಗಳಿಗೆ ಕೊಡೆ ವಿತರಿಸಿದ ಶಾಸಕ ರಾಮದಾಸ್

March 10, 2019

ಮೈಸೂರು: ಮೈಸೂರಿನ ಕೆಆರ್ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಮಲ ಜ್ಯೋತಿ ಕಾರ್ಯಕ್ರಮಕ್ಕೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಭಾರತಾಂಬೆ ಚಿತ್ರಪಟಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದ ಎದುರು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್.ಎ.ರಾಮದಾಸ್, ನೆರೆದಿದ್ದ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು.

ಇದೇ ಸಂದರ್ಭದಲ್ಲಿ ನಂಜುಮಳಿಗೆ ಬಳಿ ಬೀದಿಬದಿ ವ್ಯಾಪಾರ ಮಾಡುವ 50ಕ್ಕೂ ಹೆಚ್ಚು ಮಹಿಳೆಯರಿಗೆ ಬೇಸಿಗೆ ನಿಮಿತ್ತ ಕೊಡೆಗಳನ್ನು ಶಾಸಕ ರಾಮದಾಸ್ ನೇತೃತ್ವದಲ್ಲಿ ವಿತರಿಸಲಾಯಿತು. ಈ ವೇಳೆ ವ್ಯಾಪಾರಿ ಗಳನ್ನು ಉದ್ದೇಶಿಸಿ ಮಾತನಾಡಿದ ರಾಮದಾಸ್, ಅಸಂಘಟಿತ ಕಾರ್ಮಿಕರಿಗೆ ನೆರವಾಗಲೆಂದು ಪ್ರಧಾನಿ ನರೇಂದ್ರ ಮೋದಿಯವರು `ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್’ ಯೋಜನೆ ಜಾರಿಗೊಳಿಸಿದ್ದಾರೆ. ಯೋಜನೆ ಸದುಪಯೋಗ ಪಡಿಸಿಕೊಳ್ಳುವ ಸಂಬಂಧ ಅಗತ್ಯ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.

ಕಮಲ ಜ್ಯೋತಿ: ಬಳಿಕ ಬಿಜೆಪಿ ದೇಶದಾದ್ಯಂತ ನಡೆಸುತ್ತಿರುವ ಕಮಲ ಜ್ಯೋತಿ ಕಾರ್ಯಕ್ರಮದ ಅಂಗ ವಾಗಿ ಬಿಜೆಪಿ ಪಕ್ಷದ ಚಿಹ್ನೆಯಾದ `ಕಮಲ’ದ ಗುರುತಿನ ಸುತ್ತಲು ಜ್ಯೋತಿ ಬೆಳಗಿಸಲಾಯಿತು. ಅಲ್ಲದೆ, ಮತ್ತೊಂದು ಬಾರಿಗೆ ಈ ದೇಶದ ಪ್ರಧಾನಮಂತ್ರಿಗಳಾಗಿ ನರೇಂದ್ರ ಮೋದಿಯವರು ಆಯ್ಕೆಯಾಗಲೆಂದು ತಾಯಿ ಭಾರತಾಂಬೆಯಲ್ಲಿ ಪ್ರಾರ್ಥಿಸಲಾಯಿತು.

ನಗರಪಾಲಿಕೆ ವಿಪಕ್ಷ ನಾಯಕ ಬಿ.ವಿ.ಮಂಜುನಾಥ್, ಪಕ್ಷದ ಮುಖಂಡ ಮೈ.ವಿ.ರವಿಶಂಕರ್, ಬಿಜೆಪಿ ಕೆಆರ್ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವಿದ್ಯಾ ಅರಸ್, ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ನೂರ್‍ಫಾತಿಮಾ, ನಗರ ಪಾಲಿಕೆ ಸದಸ್ಯರಾದ ಸೌಮ್ಯಉಮೇಶ್, ಛಾಯಾದೇವಿ, ರೂಪ, ಸುನಂದ ಪಾಲನೇತ್ರ, ಶಾಂತಮ್ಮ ವಡಿವೇಲ್, ಶಾರದಮ್ಮ ಈಶ್ವರ್, ಚಂಪಕಾ, ಗೀತಾಶ್ರೀ ಯೋಗಾನಂದ, ಮಾಜಿ ಉಪ ಮೇಯರ್ ವನಿತಾ ಪ್ರಸನ್ನ, ನಗರಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಸೀಮಾ ಪ್ರಸಾದ್, ಪಕ್ಷದ ಮುಖಂಡರಾದ ಗಿರೀಶ್, ಅನ್ನಪೂರ್ಣ, ವಿಜಯಾ, ರೇಖಾ ಮತ್ತಿತರರು ಹಾಜರಿದ್ದರು.

Translate »