ಬೆಳೆ ಭೂಮಿ ಮೇಲೆ ವಿದ್ಯುತ್ ಲೈನ್ ಖಂಡಿಸಿ ರೈತರ ಪ್ರತಿಭಟನೆ
ಮೈಸೂರು

ಬೆಳೆ ಭೂಮಿ ಮೇಲೆ ವಿದ್ಯುತ್ ಲೈನ್ ಖಂಡಿಸಿ ರೈತರ ಪ್ರತಿಭಟನೆ

June 12, 2019

ಮೈಸೂರು: ಹಿರಿ ಯೂರಿನಿಂದ-ಮೈಸೂರಿನವರೆಗೆ 400 ಕೆವಿ ವಿದ್ಯುತ್ ಪವರ್‍ಗ್ರೀಡ್ ಲೈನ್ ಅನ್ನು ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ತೋಟಗಳ ಮೇಲೆ ತೆಗೆದುಕೊಂಡು ಹೋಗಲು ಉದ್ದೇಶಿಸಿದ್ದು, ಇದನ್ನು ಕೈಬಿಟ್ಟು ಪರ್ಯಾಯ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ತಾಲೂಕಿನ ಇಲವಾಲ ಬಳಿಯ ಮೈದುನಹಳ್ಳಿಯಲ್ಲಿರುವ ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾ ಕಚೇರಿ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಫಲವತ್ತಾದ ಭೂಮಿಯ ಮೇಲೆ ಪವರ್ ಗ್ರೀಡ್ ವಿದ್ಯುತ್ ಲೈನ್ ತೆಗೆದುಕೊಂಡು ಹೋಗುತ್ತಿರುವುದು ಖಂಡನೀಯ. ಇದರಿಂದ ಬೆಳೆ ನಾಶವಾ ಗುವ ಜೊತೆಗೆ ಅಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಹೆಚ್ಚು ತೊಂದರೆಯಾಗದ ಮಾರ್ಗ ಗುರುತಿಸಲಾಗಿತ್ತು. ಆದರೆ ಪ್ರಭಾವಿಗಳು, ರಿಯಲ್ ಎಸ್ಟೇಟ್ ಮತ್ತು ಡೆವಲಪರ್‍ಗಳ ಪ್ರಭಾವದಿಂದ ಮಾರ್ಗ ಬದಲಿಸಿ ರೈತರ ತೋಟಗಳ ಮಧ್ಯೆ ಹಾದು ಹೋಗುವಂತೆ ಮಾರ್ಗ ರೂಪಿಸ ಲಾಗಿದೆ. ಆ ಮೂಲಕ ರೈತರ ಬದುಕನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಸದರಿ ವಿದ್ಯುತ್ ಲೈನ್ ಅನ್ನು ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಕಲ್ಲೂರು, ನಾಗನಹಳ್ಳಿ, ಆನಂದೂರು, ಚಿಕ್ಕನಹಳ್ಳಿ, ಮಲ್ಲೇಗೌಡನಕೊಪ್ಪಲು, ಹೊಸಕೋಟೆ ಸೇರಿದಂತೆ ಇತರೆ ಗ್ರಾಮಗಳ ರೈತರ ಜಮೀನಿನ ಮೇಲೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದರಿಂದ ರೈತರ ತೋಟಗಾರಿಕೆ ಬೆಳೆ ನಾಶವಾಗ ಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಈ ಯೋಜನೆ ಅನುಷ್ಠಾನಗೊಳಿಸಿದ್ದಲ್ಲಿ ಪರಿಸರಕ್ಕೆ ಹೆಚ್ಚು ಹಾನಿ ಆಗಲಿದೆ. ಜೊತೆಗೆ ತೋಟಗಾರಿಕೆ ಫಸಲು ದೊಡ್ಡ ಮಟ್ಟದಲ್ಲಿ ನಾಶವಾಗಿ ಭಾರೀ ಪ್ರಮಾಣದ ನಷ್ಟ ಉಂಟಾಗಲಿದೆ. ಪರ್ಯಾಯ ಮಾರ್ಗಗಳು ಇದ್ದರೂ ಸಮಸ್ಯೆಯಾಗುವ ಮಾರ್ಗದಲ್ಲೇ ಮುಂದುವರೆಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಸಹ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಯುವ ಘಟಕ ಅಧ್ಯಕ್ಷ ಆನಂದೂರು ದಿನೇಶ್, ಚಂದ್ರಶೇಖರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »