ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ವಿಳಂಬ: ಕೇಂದ್ರ ಸರ್ಕಾರದ ವಿರುದ್ಧ ನಾಳೆ ರೈಲು ತಡೆದು ರೈತರ ಪ್ರತಿಭಟನೆ
ಮೈಸೂರು

ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ವಿಳಂಬ: ಕೇಂದ್ರ ಸರ್ಕಾರದ ವಿರುದ್ಧ ನಾಳೆ ರೈಲು ತಡೆದು ರೈತರ ಪ್ರತಿಭಟನೆ

September 26, 2019

ಮೈಸೂರು: ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಸೆ.27ರಂದು ಮಧ್ಯಾಹ್ನ 3ಕ್ಕೆ ರೈಲು ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಗಳ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 22 ಜಿಲ್ಲೆಗಳಲ್ಲಿ ನೆರೆ ಹಾವಳಿ ಉಂಟಾಗಿ ಜನತೆ ನಿರಾಶ್ರಿತರಾಗಿದ್ದಾರೆ. ಹೀಗಿದ್ದರೂ ನೆರವು ನೀಡಲು ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಕೇಂದ್ರ ಗೃಹ ಸಚಿವರು ಹಾಗೂ ಹಣಕಾಸು ಸಚಿವರು ನೆರೆ ಪರಿಶೀಲನೆಗೆ ಬಂದು ಹೋಗಿದ್ದರೂ ಪ್ರಯೋಜನ ಮಾತ್ರ ಆಗಿಲ್ಲ ಎಂದು ಕಿಡಿಕಾರಿದರು. ಎನ್‍ಡಿಆರ್‍ಎಫ್ ಮಾನದಂಡದ ಪ್ರಕಾರ ಮಳೆಯಾಶ್ರಿತ ಪ್ರದೇಶದ ಬೆಳೆ ನಷ್ಟಕ್ಕೆ ಎಕರೆಗೆ 2,500 ರೂ. ಹಾಗೂ ನೀರಾವರಿ ಪ್ರದೇಶದ ಬೆಳೆ ನಷ್ಟಕ್ಕೆ ಎಕರೆಗೆ 5,500 ರೂ. ನಿಗದಿ ಮಾಡಲಾಗಿದೆ. ಆದರೆ ಇದು ಅವೈಜ್ಞಾನಿಕವಾಗಿದ್ದು, ಸದರಿ ಮಾನ ದಂಡವನ್ನು ತಿದ್ದುಪಡಿಗೊಳಿಸಿ ವೈಜ್ಞಾನಿಕವಾದ ಪರಿಹಾರ ನೀಡಬೇಕು. ಈ ಸಂಬಂಧ ರಾಜ್ಯ ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ನೆರೆ ಸಂತ್ರಸ್ತರ ಕೃಷಿ ಸಾಲ ಮನ್ನಾ ಮಾಡಿ, ಹೊಸದಾಗಿ ಕೃಷಿ ಚಟುವಟಿಕೆ ಆರಂಭಿ ಸಲು ಧೀರ್ಘಾವಧಿಯ ಬಡ್ಡಿರಹಿತ ಸಾಲ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ತಿದ್ದುಪಡಿಗೊಳಿಸಿ ಎಲ್ಲಾ ಪ್ರದೇಶ ಹಾಗೂ ಬೆಳೆಗಳಿಗೂ ಅನ್ವಯಗೊಳಿಸುವಂತೆ ಮಾಡಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭ 2018-19ನೇ ಸಾಲಿಗೆ ಹಂಚಿಕೆ ಮಾಡಿ ರೈತರಿಗೆ ಹೆಚ್ಚುವರಿ ಹಣ ನೀಡಲು ತಕ್ಷಣವೇ ಕಬ್ಬು ಖರೀದಿ ಮಂಡಳಿ ಸಭೆ ಕರೆಯಬೇಕು. ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಹುದ್ದೆ ಖಾಲಿ ಇದ್ದು, ಕೂಡಲೇ ಭರ್ತಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆ ಮುಖಂಡರಾದ ಅತ್ತಹಳ್ಳಿ ದೇವರಾಜು, ಕೃಷ್ಣೇಗೌಡ, ನಾಗರಾಜು ಗೋಷ್ಠಿಯಲ್ಲಿದ್ದರು.

Translate »