ಸೊಸೆ ಕಿರುಕುಳಕ್ಕೆ ಬೇಸತ್ತ ಮಾವ ಆತ್ಮಹತ್ಯೆ
ಮಂಡ್ಯ

ಸೊಸೆ ಕಿರುಕುಳಕ್ಕೆ ಬೇಸತ್ತ ಮಾವ ಆತ್ಮಹತ್ಯೆ

June 1, 2018

ಮಂಡ್ಯ: ಸೊಸೆಯ ಕಿರುಕುಳದಿಂದ ಮಾನಸಿಕವಾಗಿ ನೊಂದ ಮಾವ ರಸ್ತೆ ಮೇಲೆ ಬರೆದಿಟ್ಟು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಿರಗಸೂರು ಗ್ರಾಮದಲ್ಲಿ ನಡೆದಿದೆ.

ಮಳವಳ್ಳಿ ತಾಲೂಕಿನ ಕಿರಗಸೂರು ಗ್ರಾಮದ ಮರಿಸ್ವಾಮಿ (60) ಮೃತಪಟ್ಟ ದುರ್ದೈವಿ. ಮರಿಸ್ವಾಮಿ ಅವರು 4 ವರ್ಷಗಳ ಹಿಂದೆ ತನ್ನ ಮಗ ಶಿವರಾಜು ಅವರಿಗೆ ಬೆಂಗಳೂರು ಮೂಲದ ಹೇಮಾ ಜೊತೆ ವಿವಾಹ ಮಾಡಿಸಿದ್ದರು. ಆದರೆ ಸೊಸೆ ಮಗನೊಂದಿಗೆ ಒಂದು ತಿಂಗಳು ಕೂಡ ಸಂಸಾರ ಮಾಡದೇ ಜಗಳ ವಾಡಿಕೊಂಡು ತವರು ಮನೆ ಸೇರಿದ್ದಳು. 4 ವರ್ಷ ಕಳೆದರೂ ಸೊಸೆ ಮನೆಗೆ ಬಾರದ ಕಾರಣಕ್ಕೆ ಮರಿಸ್ವಾಮಿ ಮಗನಿಗೆ ಇನ್ನೊಂದು ಮದುವೆ ಮಾಡಿಸಿದ್ದರು. ಇದನ್ನು ತಿಳಿದ ಮೊದಲ ಸೊಸೆ ಹೇಮಾ ಬೆಂಗಳೂರಿನಿಂದ ಕಿರಗಸೂರಿಗೆ ಆಗಮಿಸಿ ವಿಚ್ಛೇದನ ನೀಡದೆ ಹೇಗೆ ಮದುವೆ ಮಾಡಿಸಿದ್ದೀರಿ. ಇದರ ಪರಿಹಾರವಾಗಿ 15 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿದ್ದಳು. ವೃತ್ತಿಯಲ್ಲಿ ವಕೀಲೆಯಾಗಿರುವ ಹೇಮಾ ಮಾವನನ್ನು ಜೈಲಿಗೆ ಹಾಕುವುದಾಗಿ ಹೆದರಿಸುತ್ತಿದ್ದಳು. ಬುಧವಾರ ಸಂಬಂಧಿಕರ ಜೊತೆ ಬಂದ ಹೇಮಾ ಹಣಕ್ಕಾಗಿ ಮಾವ ಹಾಗೂ ಗಂಡನ ಬಳಿ ಗಲಾಟೆ ಮಾಡಿಕೊಂಡು ಹೋಗಿದ್ದಳು. ಇದರಿಂದ ಬೇಸತ್ತ ಮರಿಸ್ವಾಮಿ ಬೆಳಕವಾಡಿ ಠಾಣೆಯಲ್ಲಿ ಸೊಸೆ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಆದರೆ ದೂರು ತೆಗೆದುಕೊಳ್ಳದೇ ಪೊಲೀಸರು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

ಸಾವಿಗೂ ಮುನ್ನ ದೂರಿನ ಪತ್ರಕ್ಕೆ ಪೂಜೆ: ಸೊಸೆಯ ಕಿರುಕುಳ ಮತ್ತು ಪೊಲೀಸರ ವರ್ತನೆ, ಕುಟುಂಬದೊಳಗಿನ ಕಲಹ ಎಲ್ಲ ಘಟನೆಗಳಿಂದ ಬೇಸತ್ತ ಮರಿಸ್ವಾಮಿ, ಗ್ರಾಮಕ್ಕೆ ತೆರಳುವ ಡಾಂಬರು ರಸ್ತೆಯಲ್ಲಿ, ನನ್ನ ಸಾವಿಗೆ ಸೊಸೆ ಹೇಮಾ ಮತ್ತು ಆಕೆಯ ಸಂಬಂಧಿಕರೇ ಕಾರಣ. ನಾನು ಸತ್ತ ನಂತರ ಶಾಸಕ ಅನ್ನದಾನಿಯನ್ನು ಕರೆಸಿ ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಬರೆದು, ರಸ್ತೆ ಬದಿಯಲ್ಲಿ ಟವಲ್ ಮೇಲೆ ಪೊಲೀಸರಿಗೆ ದೂರು ನೀಡಲು ಬರೆದಿದ್ದ ಪತ್ರವನ್ನು, ಸ್ವಲ್ಪ ಹಣ ಇಟ್ಟು, ಅರಿಶಿಣ, ಕುಂಕುಮ ಹಾಕಿ ಪೂಜೆ ಮಾಡಿ ಪಕ್ಕದಲ್ಲೇ ಇದ್ದ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾರಿಹೋಕರು ಇದನ್ನು ಕಂಡು ಗ್ರಾಮಕ್ಕೆ ಸುದ್ದಿಮುಟ್ಟಿಸಿದ್ದಾರೆ. ಗ್ರಾಮಸ್ಥರು ಮತ್ತು ಕುಟುಂಬದವರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »