ಕೊಡಗು ಕರ್ನಾಟಕ ಭೂಪಟದಿಂದ ಮರೆಯಾಗುವ ಆತಂಕ!
ಅಂಕಣಗಳು, ಛೂಮಂತ್ರ

ಕೊಡಗು ಕರ್ನಾಟಕ ಭೂಪಟದಿಂದ ಮರೆಯಾಗುವ ಆತಂಕ!

June 11, 2018

ಕೊಡಗಿನ, ಕರ್ನಾಟಕದ ಹಾಗೂ ದೇಶದ ಅಭಿವೃದ್ಧಿ ಹೆಸರಿ ನಲ್ಲಿ 60 ಹಾಗೂ 30 ಮೈಲಿ ಉದ್ದಗಲದ ಅತೀ ಪ್ರಾಕೃತಿಕ ಸೌಂದರ್ಯ ಹಾಗೂ ಪಶ್ಚಿಮ ಘಟ್ಟದ ಮಳೆಕೊಡುವ ಕಾಡು ಮೇಡುಗಳಿಂದ ಕೂಡಿದ ಕೊಡಗು ಜಿಲ್ಲೆ ಬಲಿಪಶುವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

ಇದರ ವಿರುದ್ಧ ಪ್ರತಿಭಟನೆ ಮಾಡುವ ಕೊಡಗಿನ ಜನರ ಅಸಹಾಯಕತೆಯನ್ನು ನೋಡಿ ದರೆ ಅಯ್ಯೋ ಪಾಪ ಎನಿಸುತ್ತಿದೆ. ಅಷ್ಟೇ ಅಲ್ಲ, ಇನ್ನು 10-20 ವರ್ಷ ಗಳಲ್ಲಿ ಕೊಡಗಿನ ಭೌಗೋಳಿಕ ಅಸ್ತಿತ್ವವೇ ಇಲ್ಲದೇ ಹೋದರೂ ಆಶ್ಚರ್ಯಪಡಬೇಕಾಗಿಲ್ಲ. ನಾಲ್ಕು ಪಥದ ರಾಜ್ಯ ಹೆದ್ದಾರಿ, ಕೊಡಗಿನ ಉತ್ತರ-ಪಶ್ಚಿಮ ಹಾಗೂ ದಕ್ಷಿಣ ಭಾಗಗಳಲ್ಲಿ ಉದ್ದೇಶಿತ ರೈಲ್ವೆ ಮಾರ್ಗ ಯೋಜನೆ, ಈಗಾಗಲೇ ಸುಮಾರು 55 ಕಿ.ಮೀ. ಉದ್ದ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಮಾರ್ಗ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪ್ರವಾಸಿ ಗರ ತಂಗುದಾಣಗಳು (ಹಾಲಿಡೇ ರೆಸಾಟ್ರ್ಸ್) ಹೀಗೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕೆಲಸ ಗಳು ಕೊಡಗಿನ ಆಸ್ತಿ-ಪಾಸ್ತಿ, ದೈನಂದಿನ ಬದುಕು, ಕಲೆ, ಸಂಸ್ಕøತಿಗೆ ಧಕ್ಕೆಯಾಗುವುದು ಮಾತ್ರವಲ್ಲದೆ, ಇದರಿಂದ ಇಲ್ಲಿನ ಮೂಲನಿವಾಸಿ ಗಳು ಕೊಡಗಿನಿಂದ ವಲಸೆ ಹೋಗುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗಿಲ್ಲ.

ಅಂದ ಹಾಗೆ ನೆರೆ ರಾಜ್ಯ ಗಳಿಂದ ಪರಭಾಷಾ ಜನರು ಕೊಡಗಿಗೆ ವಲಸೆ ಬರುವುದನ್ನು ತಪ್ಪಿಸಲಾಗುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಮೇಲೆ ಹೇಳಿದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳು ವುದರಿಂದ ಭೌಗೋಳಿಕವಾಗಿ ಮಾತ್ರವಲ್ಲದೆ ಈಗಿರುವ ಕೊಡಗಿನ ಜನಾಂಗ ಕೂಡ ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಂಡು ಅವನತಿಯತ್ತ ಅನಿವಾರ್ಯವಾಗಿ ಸಾಗಬೇಕಾದ ಪರಿಸ್ಥಿತಿ ನಿರ್ಮಾ ಣವಾಗುತ್ತದೆ.

ಈ ರೀತಿ ಅಭಿವೃದ್ಧಿ ಹೆಸರಿನ ಯೋಜನೆಗಳಿಂದ ಕೊಡಗಿನ ದಟ್ಟ ಅರಣ್ಯಗಳಲ್ಲಿನ ಮರಗಳನ್ನು ಕಡಿಯಬೇಕಾದದ್ದು ಅನಿವಾರ್ಯ ವಾಗುತ್ತದೆ. ಇದರ ಪರಿಣಾಮ ಕೊಡಗಿನಲ್ಲಿ ಮಳೆ-ಬೆಳೆಗೆ ಅವಶ್ಯ ವಾಗಿರುವ ಮರಗಳು ನಾಶವಾಗಿ, ಪರಿಸರ ಅಸಮತೋಲನ ಉಂಟಾಗಲಿದೆ. ಇದರ ಫಲವಾಗಿ ಜೀವ ನದಿ ಕಾವೇರಿ ಬತ್ತಿಹೋಗುವ ಅಪಾಯವನ್ನು ನಾವು ಎದುರು ನೋಡಬಹುದು.

ಈಗಾಗಲೇ ಕೊಡಗಿನ ಜನರ ವಿರೋಧದ ನಡುವೆ ಕೊಡಗಿನ ಮೂಲಕ ಕೇರಳಕ್ಕೆ ಹಾದು ಹೋಗುವ 400 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆಯ ದುಷ್ಪರಿಣಾಮ ನೋಡುತ್ತಿದ್ದೇವೆ. ಮಳೆಗೆ ಅತೀ ಮುಖ್ಯವಾದ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಆವರಿಸಿ ರುವ ಕಾಡು-ಮೇಡಿನ ಅವನತಿ ಯನ್ನು ಅನುಭವಿಸುತ್ತಿದ್ದೇವೆ.

ಈ ಯೋಜನೆಯಿಂದಾಗಿ ಸುಮಾರು 50 ಸಾವಿರದಷ್ಟು ಕೊಡಗು ಮೀಸಲು ಅರಣ್ಯ, ಕಾಫಿ ತೋಟಗಳಲ್ಲಿ ಬೆಳೆದು ನಿಂತಿದ್ದ ಬೃಹತ್ ಮರಗಳನ್ನು ಧರೆಗುರುಳಿಸಲಾಗಿದೆ. ಇದರಿಂದಾಗಿ ಆನೆ, ಹುಲಿ ಮುಂತಾದ ಕಾಡು ಪ್ರಾಣಿಗಳು ಕಾಫಿ ತೋಟಗಳು ಹಾಗೂ ಗ್ರಾಮಗಳಿಗೆ ಬರಲಾರಂಭಿ ಸಿವೆ. ಪರಿಣಾಮ, ತೋಟದ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ.

ಇದು ಸಾಲದೆಂಬಂತೆ ಉದ್ದೇ ಶಿತ ಮೈಸೂರು-ತಲಚೇರಿ ರೈಲ್ವೆ ಯೋಜನೆ ಅನುಷ್ಠಾನವಾದರೆ ಲಕ್ಷ ಗಟ್ಟಲೆ ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ ಬರಬಹುದು.

ಇತ್ತೀಚಿನ, ಅಂದರೆ 9-6-2018ರ ವರದಿ ಪ್ರಕಾರ ಜನರ ತೀವ್ರ ವಿರೋಧ, ಪ್ರತಿಭಟನೆ ನಡುವೆಯೂ ಕೊಡಗಿಗೆ ಮಾರಕವಾದ ರೈಲ್ವೆ ಯೋಜನೆ ಅನುಷ್ಠಾನಕ್ಕೆ ರೈಲ್ವೆಯವರು ಈಗಾಗಲೇ ದಕ್ಷಿಣ ಕೊಡಗಿನಲ್ಲಿ ಸರ್ವೆ ಆರಂಭಿಸುವ ಮೂಲಕ ಸದ್ದು -ಗದ್ದಲವಿಲ್ಲದೆ ಕಾರ್ಯೋನ್ಮುಖರಾಗಿ ದ್ದಾರೆ. ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ಈ ಮೊದಲೇ ಜಿಲ್ಲೆಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೇ ವರ್ಷ ಫೆಬ್ರವರಿ 18ರಂದು ಮೈಸೂರಿ ನಲ್ಲಿ ಕೊಡಗು, ಬೆಂಗಳೂರು, ಮಂಡ್ಯ ಅಲ್ಲದೆ ತಮಿಳುನಾಡಿನ ಸುಮಾರು 20 ಸಾವಿರಕ್ಕೂ ಅಧಿಕ ಜನರು ಕೊಡಗಿನ ಈ ರೈಲ್ವೆ ಯೋಜನೆ ಮಾರಕವಾದದ್ದು ಎಂದು ಭಾರೀ ಪ್ರತಿಭಟನೆ ನಡೆಸಿದ್ದರು.

ಈ ಸಂದರ್ಭ ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಈ ರೈಲ್ವೆ ಯೋಜನೆಯ ಪ್ರಸ್ತಾವನೆಯೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲ, ಅದಾದ ಮೂರೇ ದಿನದಲ್ಲಿ `ಕೊಡಗು ಏಕೀಕರಣ ರಂಗ’ದ ತಮ್ಮು ಪೂವಯ್ಯ, `ವೈಲ್ಡ್ ಲೈಫ್ ಫಸ್ಟ್’ನ ಹೆಚ್‍ಎನ್‍ಎ ಪ್ರಸಾದ್, ಪ್ರವೀಣ್ ಭಾರ್ಗವ್ ಮತ್ತು ನಿವೃತ್ತ ಆರ್‍ಎಫ್‍ಓ ಕೆ.ಎಂ. ಚಿನ್ನಪ್ಪ ಒಳಗೊಂಡ ನಿಯೋಗ ನವದೆಹಲಿಗೆ ತೆರಳಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ರೈಲ್ವೆ ಸಚಿವರು ಮೈಸೂರು-ತಲಚೇರಿ ರೈಲ್ವೆ ಯೋಜನೆ ಅನುಷ್ಠಾನಗೊಳಿಸು ವುದಿಲ್ಲ ಎಂದು ಭರವಸೆ ನೀಡಿ ದ್ದರು. ಮಾತ್ರವಲ್ಲದೆ, ಇದೇ ವಿಷಯ ವನ್ನು ಸಂಸತ್‍ನಲ್ಲಿ ಕೂಡ ಪ್ರಸ್ತಾ ಪಿಸಿದ್ದರು.

ಇಷ್ಟಾದರೂ, ಈಗ ಕೊಡಗಿನಲ್ಲಿ ಸದರಿ ರೈಲ್ವೆ ಯೋಜನೆಗಾಗಿ ನಡೆಯುತ್ತಿರುವ ಸರ್ವೆ ಕಾರ್ಯ ಜನರಲ್ಲಿ ಆತಂಕ ಮೂಡಿಸಿದೆ. ಸಹಜವಾಗಿಯೇ ಸರ್ವೇ ನಡೆಸುತ್ತಿದ್ದ ಜಾಗದಲ್ಲಿದ್ದ ತೋಟದ ಮಾಲೀಕರು, ಗ್ರಾಮಸ್ಥರು, ದಕ್ಷಿಣ ಕೊಡಗಿನ ಕುಟ್ಟ, ಕೆ.ಬಾಡಗ, ಶ್ರೀಮಂಗಲ ವ್ಯಾಪ್ತಿಯ ಜನರು ಈ ಸರ್ವೆಯನ್ನು ತಡೆದಿದ್ದಾರೆ.

ದುರಂತದ ವಿಷಯವೆಂದರೆ ಕರ್ನಾ ಟಕ ಸರ್ಕಾರವೇ ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ಒಪ್ಪಿಗೆ ಕೊಟ್ಟಿದ್ದು. ಈಗಲೂ ಇದೇ ಕರ್ನಾಟಕ ಸರ್ಕಾರ ಉದ್ದೇಶಿತ ರೈಲ್ವೆ ಮಾರ್ಗ ಯೋಜನೆಗೂ ಒಪ್ಪಿಗೆ ಕೊಟ್ಟಿದೆ ಎಂದು ತಿಳಿದು ಬಂದಿದೆ.

ಅದೇನೇ ಇರಲಿ, ಈ ಎಲ್ಲಾ ಬೆಳ ವಣಿಗೆಗಳನ್ನು ನೋಡಿದರೆ ಕರ್ನಾ ಟಕ ಸರ್ಕಾರದ ಸಹಮತ, ಸಹಕಾರ ಈ ಮಾರಕ ಯೋಜನೆಗಳಿಗೆ ಇದೆ ಎನ್ನುವುದರಲ್ಲಿ ಯಾವುದೇ ಸಂಶಯ ವಿಲ್ಲ. ಯಾಕೆಂದರೆ ಕೊಡಗು ಕರ್ನಾ ಟಕದಲ್ಲಿರುವುದರಿಂದ ರಾಜ್ಯ ಸರ್ಕಾ ರದ ಒಪ್ಪಿಗೆ ಇಲ್ಲದೇ ಕೇಂದ್ರ ಸರ್ಕಾ ರವು ಯಾವ ಯೋಜನೆಯನ್ನೂ ಕೊಡಗಿನಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ.

ಕೊಡಗಿನ ಕೊಡವರ ಒಗ್ಗಟ್ಟಿನ ಧ್ವನಿಯಾಗಿರುವ ಕೊಡವ ಸಮಾಜ ಗಳ ಒಕ್ಕೂಟವು ಈ ಯೋಜನೆ ವಿರುದ್ಧ ಹೋರಾಟ ಮಾಡಲು ಕಂಕಣಬದ್ಧವಾಗಬೇಕಾಗಿದೆ. ಅಷ್ಟೇ ಅಲ್ಲದೆ ಕೊಡಗಿನ ಬೇರೆ ಸಮುದಾಯ ಗಳ ಸಂಘಟನೆಗಳ ಸಹಕಾರವನ್ನೂ ಪಡೆದು ಎಲ್ಲರೂ ಕೈಜೋಡಿಸಿ ತಕ್ಷಣ ದಿಂದಲೇ ಹೋರಾಟ ಆರಂಭಿಸ ಬೇಕಾಗಿರುವುದು ಅವಶ್ಯವಾಗಿದೆ.

ಅಂದ ಹಾಗೆ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ, ಮುಂದಿನ ವರ್ಷಗಳಲ್ಲಿ ಈಗ ನಾವು ನೋಡುತ್ತಿರುವ ಕೊಡಗು ಕೊಡಗಾಗಿಯೇ ಉಳಿಯುವ ಸಾಧ್ಯತೆ ಗಳಿವೆಯೇ? ಎಂಬುದು. ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಇದೇ ವಿಷಯದ ಬಗ್ಗೆ ನನ್ನಲ್ಲಿನ ಅತೀವ ಕಳಕಳಿಯನ್ನು ಪತ್ರದ ಮುಖೇನ ಕೊಡಗಿನ ಕೆಲವು ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ತೊಡಗಿಸಿ ಕೊಂಡಿರುವ ನಾಯಕರು ಗಳಲ್ಲಿ ವ್ಯಕ್ತಪಡಿಸಿದ್ದೆ. ನನ್ನ ಪತ್ರಗಳಿಗೆ ಪ್ರತಿಕ್ರಿಯಿಸಿದ್ದು ಕೇವಲ ಇಬ್ಬರು ಮಾತ್ರ . ಮೊದಲಿಗರು ರಾಜ್ಯದ ಕಾನೂನು ಮಂತ್ರಿಗಳಾಗಿದ್ದ ಎಂ.ಸಿ. ನಾಣಯ್ಯನವರು. ದೂರವಾಣಿ ಮೂಲಕ ನನಗೆ ಪ್ರತಿಕ್ರಿಯಿಸಿದ ಅವರು `ನೀವು ಪ್ರಸ್ತಾಪಿಸಿರುವ ವಿಷಯಗಳು ಸರಿಯಾಗಿವೆ. ಆದರೆ ಕೊಡಗಿನ ಜನರ ಒಗ್ಗಟ್ಟಿನ ಕೊರತೆ ಯಿಂದ ಏನೂ ಮಾಡಲಾಗುವು ದಿಲ್ಲ’ ಎಂದು ಅಸಹಾಯಕತೆ ವ್ಯಕ್ತ ಪಡಿಸಿದರು.

ಇನ್ನೊಬ್ಬರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಮಗ ಮಡಿ ಕೇರಿಯಲ್ಲೇ ನೆಲೆಸಿರುವ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ. ಅವರು ಪತ್ರ ಮುಖೇನ ಪ್ರತಿಕ್ರಿಯಿಸಿದ್ದರು. ಅದನ್ನು ಓದಿದಾಗ ನನಗನಿಸಿದ್ದು ಇವರು ಓರ್ವ ಜ್ಯೋತಿಷಿ ಅಲ್ಲ ದಿದ್ದರೂ ಭವಿಷ್ಯವಾಣಿಯನ್ನಂತೂ ನಿಖರವಾಗಿ ಹೇಳುವುದರಲ್ಲಿ ಫ್ರಾನ್ಸ್ ದೇಶದ ನಾಸ್ಟ್ರಡಾಮಸ್ (NOSTRA DAMUS) ಅವರಷ್ಟೇ ಜ್ಞಾನಿಗಳು ಎನಿಸಿತು.

ಅವರ ಮೂಲ ಪತ್ರವನ್ನು ಈ ಸಂದರ್ಭದಲ್ಲಿ ಪ್ರಕಟಿಸುವುದು ಸೂಕ್ತ ಎನಿಸಿರುವುದರಿಂದ ಅದನ್ನು ಕೆಳಗೆ ಪ್ರಕಟಿಸಿದ್ದೇನೆ. ಅದರ ಕನ್ನಡ ಅನುವಾದವನ್ನು ಪತ್ರದ ಜೊತೆ ಪ್ರಕಟಿಸಲಾಗಿದೆ.

E-mail: [email protected]

ದಿನಾಂಕ: 17-3-2018
ಮಾನ್ಯ ಶ್ರೀ ಗಣಪತಿಯವರೇ,

ನೀವು ಮಾರ್ಚ್ 8, 2018 ರಂದು ನನಗೆ ಬರೆದ ಪತ್ರಕ್ಕಾಗಿ ಧನ್ಯವಾದಗಳು. ನಿಮ್ಮ mailing list ನಲ್ಲಿ ನನ್ನ ಹೆಸರನ್ನು ಸಹ ಸೇರಿಸಿರುವುದು ನಿಮ್ಮ ಕಾಳಜಿಯನ್ನು ತೋರಿಸುತ್ತದೆ.

ನಿಮ್ಮ ಪತ್ರದ ಎರಡನೇ ಪ್ಯಾರವು ಎಲ್ಲವನ್ನೂ ಹೇಳುತ್ತದೆ. ನಮ್ಮ ಸಮಾಜ ದೊಳಗಿನ ಆಸೆಬುರುಕ ಕುತಂತ್ರ ಹಾಗೂ ಕೆಟ್ಟ ಜನರ ನಿರಂತರ ಹೊಡೆತಗಳಿಂದ ಪಾರಾಗಿ ನಮ್ಮ ಪುಣ್ಯಭೂಮಿಯು ಉಳಿಬೇಕಾದರೆ, ನಾವು ನಮ್ಮ `ಬರೀ ಕೊಡವರು ಮಾತ್ರ’ ಎಂಬ ಮನಸ್ಥಿತಿಯಿಂದ ಹೊರಬರಲೇಬೇಕು. ನೀವು ಪತ್ರದಲ್ಲಿ ಹೇಳಿರುವಂತೆ, ನಮ್ಮ ಸಮಾಜದ ಆಂತರ್ಯಕ್ಕೆ ನಾವು ಇನ್ನಿತರ ಎಲ್ಲಾ ಸಮುದಾಯದವರನ್ನೂ ಸೇರಿಸಿಕೊಳ್ಳಬೇಕು. ನಾವು ಹಾಗೆ ಮಾಡದಿದ್ದಲ್ಲಿ, ಇದು ನಮಗೇ ಕೇಡು ಉಂಟು ಮಾಡುತ್ತದೆ ಹಾಗೂ ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಕೊಡಗು ಭೂಪಟದಿಂದ ಅಳಿಸಿಹೋಗುತ್ತದೆ.

ಐ.ಎಂ. ಮುತ್ತಣ್ಣನವರುತಮ್ಮ “The Tiny Model District of Coorg” ಪುಸ್ತಕದಲ್ಲಿ ಹೇಳಿರುವಂತೆ ಇಂದಿನ ವಿದ್ಯಾಮಾನಗಳನ್ನು ಗಮನಿಸಿದಾಗ, ಕೊಡಗು ಚೂರು ಚೂರಾಗಿ ಒಡೆದು ಹೋಗುತ್ತಿದೆಯೇನೋ ಎಂದು ನನಗೆ ಭಾಸವಾಗುತ್ತಿದೆ. ನಮ್ಮಮಾತೃಭೂಮಿ ಕೊಡಗನ್ನೂ ಮೂರು ಭಾಗಗಳಾಗಿ ವಿಂಗಡಿಸಿ, ಅವುಗಳನ್ನು ಕೇರಳ, ಮಲ್ನಾಡು ಮತ್ತು ಮೈಸೂರಿನೊಂದಿಗೆ ವಿಲೀನಗೊಳಿಸಲಾಗುತ್ತದೆಯೇನೋ ಎಂಬ ಆತಂಕ ನನ್ನಲ್ಲಿ ಮನೆ ಮಾಡಿದೆ.
ಕೊಡಗಿನ (ಕೊಡವರ) ಜನಾಂಗೀಯ ಅಸ್ತಿತ್ವದ ವಿಷಯಕ್ಕೆ ಬಂದರೆ, ಈ ವಿಷಯ ಬಹಳ ಸಂಕೀರ್ಣತೆಯಿಂದ ಕೂಡಿದ್ದಾಗಿದೆ.

ಕೆಲವೊಮ್ಮೆ ಉಡಾಫೆಯಿಂದ ಕೂಡಿದ ನಮ್ಮ ಸಮುದಾಯದೊಳಗೆ ಅಂತರ್ಗತವಾಗಿರುವ ಹೆಮ್ಮೆಯೂ ಕೂಡ, ಈ ವಿಷಯವನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ನಾವು ಒಂದು ಬೇರೆಯದೇ ಆದ ಅಸ್ತಿತ್ವಕ್ಕಾಗಿ ಬೇಡಿಕೆಯನ್ನಿಟ್ಟರೂ ಸಹ, ನಮಗಾಗಿಯೇ ಒಂದು ನಿರ್ದಿಷ್ಟ ಭೌಗೋಳಿಕ ವಲಯಕ್ಕಾಗಿನ ಕೋರಿಕೆಯು ಸೂಕ್ತವಾದುದೇ ಅಥವಾ ಕಾರ್ಯಸಾಧುವಾದದ್ದೇ ಎಂಬ ಪ್ರಶ್ನೆ ನನ್ನ ಕಣ್ಣ ಮುಂದೆ ಹಾದು ಹೋಗುತ್ತದೆ. ನಮ್ಮ ಸಮುದಾಯದ ನಾಡಿ ಮಿಡಿತವನ್ನು ನೀವು ಸಂಪೂರ್ಣವಾಗಿ ತಿಳಿದುಕೊಂಡಿದ್ದು, ನಮ್ಮ ಭವ್ಯ ಕೊಡವ ಪಾರಂಪರಿಕತೆಯನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ನೀವು ಸಲಹೆಗಳನ್ನು ನೀಡಬೇಕು.

ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿನ ಬರಹಗಳನ್ನು ಬಿಟ್ಟರೆ, ನನಗೆ ಕನ್ನಡ ಓದಲು ಬರುವುದಿಲ್ಲ. ಹಾಗಾಗಿ ನೀವು ವಿವರಿಸಿರುವ ಇನ್ನೂ ಅನೇಕ ವಿಷಯಗಳನ್ನು ನನಗೆ ಓದಲಾಗಲಿಲ್ಲ.

ಸಹಿ/-
ಏರ್ ಮಾರ್ಷಲ್ ಕೆ.ಸಿ. ಕಾರಿಯಪ್ಪ

Translate »