ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ ಮತ್ತು ದೊಡ್ಡಮ್ಮ ದೇವರ 101ನೇ ವರ್ಷದ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಥವನ್ನು ಶೃಂಗರಿಸಿ ಗ್ರಾಮದ ಮಹಿಳೆ ಯರು ತಮ್ಮ ತಮ್ಮ ಮನೆಯನ್ನು ಶೃಂಗಾರ ಮಾಡಿದ್ದರು. ಮದುವೆಯಾಗಿ ಹೋಗಿದ್ದ ಹೆಣ್ಣು ಮಕ್ಕಳು ಮತ್ತು ಬಂಧು-ಬಳಗ ಊರಿಗೆ ಬಂದು ದೇವರನ್ನು ಸ್ಮರಿಸುವ ಒಂದು ವಿಶೇಷ ವಾಡಿಕೆಯಾಗಿದೆ.
ಇಲ್ಲಿ ದೊಡ್ಡಮ್ಮತಾಯಿ ದೇವರು ಗ್ರಾಮದ ವೀರಶೈವ ಲಿಂಗಾಯಿತರ ಪೂಜಿತ ದೇವರಾದರೆ, ಚಿಕ್ಕಮ್ಮ ದೇವರು ದಲಿತರ ಪೂಜಿತ ದೇವರಾಗಿದ್ದು, ಇವುಗಳನ್ನು ಒಟ್ಟಿಗೆ ಸೇರಿಸಿ ಪೂಜಿಸಲಾಗುತ್ತದೆ. ದಲಿತರ ಬೀದಿ ಯಿಂದ ಚಿಕ್ಕದೇವರನ್ನು ಮಹಿಳೆಯರು ಬಹಳ ಭಕ್ತಿಯಿಂದ ಮನೆಯಲ್ಲಿರುವ ದವಸಧಾನ್ಯಗಳನ್ನು ಮಡಿ ಬಟ್ಟೆಯಲ್ಲಿ ಕಟ್ಟಿ ಕುಕ್ಕೆಯಲ್ಲಿ ಹೊತ್ತು ರಥವನ್ನು ಮೂರು ಸುತ್ತು ಸುತ್ತಿದ ನಂತರ ಇತರರು ದೊಡ್ಡಮ್ಮತಾಯಿ ಮತ್ತು ಚಿಕ್ಕಮ್ಮತಾಯಿ ಯನ್ನು ಒಟ್ಟಿಗೆ ಕೂರಿಸಿ ರಥವನ್ನು ಎಳೆಯುವ ಸಂಪ್ರದಾಯ 100 ವರ್ಷ ಹಿಂದಿನಿಂದ ಆಚರಿಸಿಕೊಂಡು ಬಂದಿರುವು ದರಿಂದ ಈ ಗ್ರಾಮಕ್ಕೆ ಬರಗಾಲ ಬಂದರೂ ಸಹ ಈ ಊರಿನ ಸುತ್ತಮುತ್ತಲು ಅಲ್ಪಸ್ವಲ್ಪ ಬೆಳೆ ಬೆಳೆಯುವುದು ಈ ದೇವತೆಗಳ ಆಶೀ ರ್ವಾದವೆಂದು ಸ್ಥಳೀಯರು ನಂಬುತ್ತಾರೆ.
ಈ ಹಬ್ಬದ ದಿನದಂದು ಮಳೆ ಬರುವುದು ಮತ್ತೊಂದು ವಿಶೇಷ, ಅಂತೆಯೇ ರಥೋತ್ಸವ ನಡೆಯುವ ಸಂದರ್ಭದಲ್ಲಿ ಮಳೆ ಸುರಿಯಲು ಆರಂಭಿಸಿತು. ಇದರ ನಡುವೆ ಭಕ್ತರು ಹರ್ಷೋದ್ಘಾರದೊಂದಿಗೆ ರಥವನ್ನು ಎಳೆದರು ಮತ್ತು ಗ್ರಾಮದ ಯುವಕರು ವಾದ್ಯವೃಂದದೊಂದಿಗೆ ಜನಪದ ನೃತ್ಯವನ್ನು ಮಾಡಿದರು. ಗ್ರಾಮದ ಮೇದರ ಸಮಾಜದ ಬಂಧು ಗಳು ರಥಕ್ಕೆ ಬಿದುರು ಹಗ್ಗ ಮತ್ತು ರಥಕ್ಕೆ ಬಿದಿರು ಕಡ್ಡಿಗಳನ್ನು ಕಟ್ಟಿ ಶೃಂಗರಿಸುವುದು ಇವರ ಸಂಪ್ರದಾಯವಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಿಪಂ ಮಾಜಿ ಸದಸ್ಯ ಕೆ.ಸಿ. ರಾಜಶೇಖರಯ್ಯ, ತಾಪಂ ಸದಸ್ಯೆ ಶೋಭ ಚಂದ್ರು, ತಾಪಂ ಮಾಜಿ ಉಪಾಧ್ಯಕ್ಷ ಯೋಗೇಶ್, ಗ್ರಾಪಂ ಸದಸ್ಯ ರಾದ ಆನಂದ್, ಕೆ.ಬಿ. ಮೂರ್ತಿ, ಮಲ್ಲೇಶ್, ಗ್ರಾಮಸ್ಥರಾದ ಟೈಲರ್ ಶಿವು, ಗುರಪ್ಪನವರ ನಾಗರಾಜು, ಮಹೇಶ್, ನಟರಾಜು, ಪಶುಪತಿ ಶಿವಪ್ಪ, ಕೆಂಡಗಣ್ಣಪ್ಪ ಸೇರಿ ದಂತೆ ಗ್ರಾಮದ ಎಲ್ಲಾ ಜನಾಂಗದ ಮುಖಂಡರು, ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು.