ಸಿಎಎ ವಿರುದ್ಧದ ಹೋರಾಟ ದಮನ: ಪೊಲೀಸ್ ವಿರುದ್ಧ ಮಾನವಹಕ್ಕು ಆಯೋಗಕ್ಕೆ ಸಿಎಫ್‍ಐ ದೂರು
ಮೈಸೂರು

ಸಿಎಎ ವಿರುದ್ಧದ ಹೋರಾಟ ದಮನ: ಪೊಲೀಸ್ ವಿರುದ್ಧ ಮಾನವಹಕ್ಕು ಆಯೋಗಕ್ಕೆ ಸಿಎಫ್‍ಐ ದೂರು

February 20, 2020

ಮೈಸೂರು, ಫೆ.19(ಆರ್‍ಕೆಬಿ)-ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟ ದಮನಿಸಲು ರಾಜ್ಯದ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗ ಗಂಭೀರ ಗಮನ ಹರಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‍ಐ) ರಾಜ್ಯಾಧ್ಯಕ್ಷ ಫಯಾಜ್ ದೊಡ್ಡಮನೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪೊಲೀಸ್ ಇಲಾಖೆ ಆರ್‍ಎಸ್‍ಎಸ್ ನಿರ್ದೇಶನದಂತೆ ನಡೆಯು ತ್ತಿರುವ ಶಂಕೆ ಇದೆ. ಮೈಸೂರಲ್ಲಿ `ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ ವಿದ್ಯಾರ್ಥಿನಿಗೆ 10 ಗಂಟೆ ವಿಚಾರಣೆ ನೆಪದಲ್ಲಿ ಮಾನಸಿಕ ಹಿಂಸೆ ನೀಡಲಾಗಿದೆ. ರಾಯಚೂರಲ್ಲಿ ಸಿಎಎ ವಿರುದ್ಧ ಕರಪತ್ರ ಹಂಚಿದ ಸಾಮಾಜಿಕ ಹೋರಾಟಗಾರರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಚಿತ್ರದುರ್ಗದಲ್ಲಿ ಗೋಡೆ ಬರಹ ಹೋರಾಟಗಾರರನ್ನು ಬೆದರಿಸಲಾ ಗಿದೆ. ಗಂಗಾವತಿಯಲ್ಲಿ ಕವಿತೆ ಬರೆದ ಕಾರಣಕ್ಕೆ ಕವಿ ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಬೀದರ್‍ನಲ್ಲಿ ನಾಟಕ ಪ್ರದರ್ಶಿಸಿದ್ದಕ್ಕಾಗಿ ಶಾಹಿನ್ ಶಾಲೆ ಮಕ್ಕಳಿಗೆ ವಿಚಾರಣೆ ನೆಪದಲ್ಲಿ ಹಿಂಸಿಸಿ, ಇಬ್ಬರು ಮಹಿಳೆಯರನ್ನು ದೇಶದ್ರೋಹ ಆರೋಪದಡಿ ಬಂಧಿಸಿದ್ದಾರೆ. ಮಂಗಳೂರು ಘಟನೆಯಲ್ಲಿ ಇಬ್ಬರು ಅಮಾಯಕರ ಸಾವಿಗೆ ಕಾರಣರಾದ ಅಲ್ಲಿನ ಪೊಲೀಸ್ ಆಯುಕ್ತರ ಕೋಮುವಾದಿ ಮನಸ್ಥಿತಿ ಸ್ಪಷ್ಟವಾಗಿ ಗೋಚರಿಸಿದೆ ಎಂದು ದೂರಿದರು. ಮುಖಂಡರಾದ ಅಶ್ರಫ್ ದಾವಣಗೆರೆ, ಮಹಮ್ಮದ್ ನದೀಮ್ ಸುದ್ದಿಗೋಷ್ಠಿಯಲ್ಲಿದ್ದರು.

Translate »