ಆಯುರ್ ಮಟಂ ಸಂಸ್ಥೆಯಿಂದ ಆಯುರ್ವೇದ ಸಹಾಯಕ ಚಿಕಿತ್ಸಕರ ತರಬೇತಿ
ಮೈಸೂರು

ಆಯುರ್ ಮಟಂ ಸಂಸ್ಥೆಯಿಂದ ಆಯುರ್ವೇದ ಸಹಾಯಕ ಚಿಕಿತ್ಸಕರ ತರಬೇತಿ

February 20, 2020

ಪಂಚಕರ್ಮ, ಯೋಗ ವಿಜ್ಞಾನ, ಮರ್ಮ  ಚಿಕಿತ್ಸಾ ಪದ್ಧತಿಯ ಸರ್ಟಿಫಿಕೇಟ್ ಕೋರ್ಸ್
ಮೈಸೂರು,ಫೆ.19(ಆರ್‍ಕೆಬಿ)-ಮೈಸೂರಿನಲ್ಲಿ ನೆಲೆಗೊಂಡಿರುವ `ಆಯುರ್ ಮಟಂ ಅಕಾಡೆಮಿಕ್ ಇನ್ಸ್‍ಟಿಟ್ಯೂಟ್ ಆಫ್ ಆಯುರ್ವೇದ ಅಂಡ್ ಯೋಗಿಕ್ ಸೈನ್ಸ್’ ಸಂಸ್ಥೆಯು ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದು ಹೊಸದಾಗಿ ಶೈಕ್ಷಣಿಕ ಕೋರ್ಸ್ ಗಳನ್ನು ಆರಂಭಿಸುತ್ತಿದೆ ಎಂದು ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಡಾ.ಮನು ಬಿ.ಮೆನನ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ, ಆಯುರ್ವೇದ ವೈದ್ಯಕೀಯ ಮಾದರಿ ಚಿಕಿತ್ಸಾ ತರಬೇತಿ ನೀಡುವ ಸಂಸ್ಥೆ ಇಲ್ಲ. ಈ ಕೊರತೆ ನೀಗಿಸಲು ಆಯುರ್ ಮಟಂ ಚಿಕಿತ್ಸಾ ಕೇಂದ್ರವು ಹೊಸ ಕೋರ್ಸ್ ಆರಂಭಿಸುತ್ತಿದೆ. ಪಂಚಕರ್ಮ ವಿಜ್ಞಾನ, ಕಲರಿಪಯಟ್ಟು ಎಂಬ 6 ತಿಂಗಳ, ಪಂಚಕರ್ಮ ಮತ್ತು ಯೋಗ ವಿಜ್ಞಾನ ಮತ್ತು ಮರ್ಮ ಚಿಕಿತ್ಸಾ ವಿಜ್ಞಾನದ 1 ವರ್ಷದ ಹಾಗೂ ಆಯುರ್ವೇದ ವಿಜ್ಞಾನ ಕುರಿತ 3 ವರ್ಷಗಳ ಕೋರ್ಸ್‍ಗಳನ್ನು ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.

ಕಡಿಮೆ ಅವಧಿಯ ಕೋರ್ಸ್‍ಗಳಿಗೆ ಆನ್‍ಲೈನ್ ಶಿಕ್ಷಣ ನೀಡುವುದರೊಡನೆ ನಮ್ಮ ಸಂಸ್ಥೆಯ ವೈದ್ಯರೇ ಶಿಕ್ಷಣಾರ್ಥಿಗಳನ್ನು ಭೇಟಿ ಮಾಡಿ ತರಬೇತಿ ನೀಡಲಿದ್ದಾರೆ. ಈಗಾ ಗಲೇ ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಪಂಚಕರ್ಮ ಅಥವಾ ಆಯು ರ್ವೇದ ಮಸಾಜ್ ಹೆಸರಿನಲ್ಲಿ ಹೋಟೆಲ್, ಸ್ಪಾ, ಯೋಗಕೇಂದ್ರ ಮೊದಲಾದ ಕಡೆ ಚಿಕಿತ್ಸೆ ನೀಡುತ್ತಿದ್ದರೂ ಅವರ್ಯಾರೂ ಕ್ರಮಬದ್ಧವಾಗಿ ತರಬೇತಿ ಪಡೆದವರಲ್ಲ. ಆಯುರ್ವೇದ ವೈದ್ಯರು ಚಿಕಿತ್ಸೆ ನೀಡಿದರೂ ಬಳಿಕ ಪಂಚಕರ್ಮ ಚಿಕಿತ್ಸೆ ಅನಿವಾರ್ಯವಾಗಿರುತ್ತದೆ. ಆದರೆ ಅವರಿಗೆ ಸೂಕ್ತ ತರಬೇತಿ ಇಲ್ಲದ ಕಾರಣ ತಮ್ಮ ಕೋರ್ಸ್‍ಗಳ ಪ್ರಯೋಜನ ಪಡೆದವರಿಗೆ ರಾಜ್ಯ, ವಿದೇಶಗಳಲ್ಲಿಯೂ ಉತ್ತಮ ಅವಕಾಶವಿದೆ ಎಂದು ತಿಳಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿಯವರು ನಮ್ಮ ಸಂಸ್ಥೆ ನೀಡಲಿರುವ ಕೋರ್ಸ್ ಗಳ ಕುರಿತು ಖುದ್ದು ಪರಿಶೀಲನೆ ನಡೆಸಿದ ಬಳಿಕವಷ್ಟೇ ಸಮ್ಮತಿ ನೀಡಿದ್ದಾರೆ. ಇದನ್ನು ಆಧರಿಸಿಯೇ ಮೈಸೂರು ವಿವಿ ಹೊಸ ಕೋರ್ಸ್‍ಗಳಿಗೆ ಅಂಗೀಕಾರ ನೀಡಿದೆ. ಹೆಚ್ಚಿನ ವಿವರಗಳಿಗೆ ದೂ.0821-2477800 ಸಂಪರ್ಕಿಸಬಹುದು ಎಂದರು. ಡಾ.ಆಶಾ ಮೆನನ್, ಟಿ.ಪಿ.ಅನೂಪ್, ಡಾ.ಮಧುಶಾಲಿನಿ, ಡಾ.ಜಿಶ್ನು ಸುದ್ದಿಗೋಷ್ಠಿಯಲ್ಲಿದ್ದರು.

Translate »