ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ `ಗಾಂಧಿ ಪಥ’ ಹಿನ್ನಡೆ
ಮೈಸೂರು

ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ `ಗಾಂಧಿ ಪಥ’ ಹಿನ್ನಡೆ

February 18, 2020

ಮೈಸೂರು, ಫೆ.17(ಪಿಎಂ)- ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದು, ಈ ಅವಧಿಯಲ್ಲಿ ನಮ್ಮ ಜನಪ್ರತಿನಿಧಿಗಳು ಇಚ್ಛಾ ಸಕ್ತಿ ಪ್ರದರ್ಶಿಸಿದ್ದರೆ ಗಾಂಧಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತಿತ್ತು. ಗಾಂಧಿಯ ಪಥದಲ್ಲಿ ಮುನ್ನಡೆಯುವ ಬದಲು ಹಿಮ್ಮುಖ ಚಲನೆಯಲ್ಲಿದ್ದೇವೆಯೇ ಎಂಬ ಆತಂಕ ಎದುರಾಗಿದೆ ಎಂದು ಲೇಖಕಿ ರೂಪಾ ಹಾಸನ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರ ಆವರಣದ ಸಂಪತ್ ರಂಗ ಅಂಗಳದಲ್ಲಿ ರಂಗಾಯಣದ ಬಹುರೂಪಿ ನಾಟಕೋತ್ಸವದ ಅಂಗವಾಗಿ ನಡೆಯು ತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಸೋಮವಾರ `ಗಾಂಧಿ-ಗ್ರಾಮ ಭಾರತ’ ಕುರಿತು ಮಾತನಾಡಿದರು.

ಗಾಂಧಿಯವರು ಗ್ರಾಮ ಸ್ವರಾಜ್ಯದ ಕಲ್ಪನೆ ಮಾಡಿದಾಗ ದೇಶ ಶೇ.80ರಷ್ಟು ಹಳ್ಳಿಗಳ ನಾಡು. ಈಗಲೂ ಶೇ.60ರಷ್ಟು ಹಳ್ಳಿಗಳನ್ನೇ ದೇಶ ಒಳಗೊಂಡಿದೆ. ಅಭಿವೃದ್ಧಿ ಹೆಸರಿ ನಲ್ಲಿ ನಗರ ಕೇಂದ್ರೀತ ವ್ಯವಸ್ಥೆ ರೂಪುಗೊಳಿ ಸುತ್ತಿರುವ ಹಿನ್ನೆಲೆಯಲ್ಲಿ ನಗರದ ಬೃಹತ್ ಕಟ್ಟಡ ಪಕ್ಕದಲ್ಲೇ ಸ್ಲಂಗಳು ತಲೆ ಎತ್ತಿವೆ. ಗಾಂಧಿ ಕಾಲಘಟ್ಟದಲ್ಲಿ ಹಳ್ಳಿಗಳು ಅಜ್ಞಾನ, ಅನಕ್ಷರತೆ, ಮೌಢ್ಯ, ಜಾತಿ ತಾರತಮ್ಯದ ಕೂಪವಾಗಿದ್ದವು. ಪರಿಣಾಮ ಮಹಿಳೆ ಹಾಗೂ ತಳಸಮುದಾಯಗಳು ದೌರ್ಜ ನ್ಯಕ್ಕೆ ಒಳಗಾಗಿದ್ದವು. ಆದರೆ ಗಾಂಧಿ ಬದ ಲಾವಣೆ ಕನಸು ಕಂಡು ದೃಢವಾದ ಹೆಜ್ಜೆ ಇಟ್ಟರು. ಆದರೂ ಪರಿಪೂರ್ಣವಾಗಿ ಈ ಸಾಮಾಜಿಕ ಅನಿಷ್ಟಗಳಿಂದ ಗ್ರಾಮೀಣ ಪ್ರದೇಶ ಮುಕ್ತವಾಗಿಲ್ಲ ಎಂದು ವಿಷಾದಿಸಿದರು.

ಪ್ರಾಥಮಿಕ ಹಂತದ ಶಿಕ್ಷಣದಲ್ಲೇ ವೃತ್ತಿ ತರಬೇತಿ ನೀಡಬೇಕು ಎಂಬುದು ಗಾಂಧಿ ಆಶಯ. ಭಾರತದಲ್ಲಿ ಕೆಲಸಕ್ಕೆ ಅಪಾರ ಕೈಗಳು ಇರುವುದರಿಂದ ವ್ಯಾಪಕ ಯಾಂತ್ರೀಕರಣ ಅನಿಷ್ಟ ಎಂದು ಭಾವಿಸಿದ್ದರು. ಆದರೆ, ಇಂದು ಯಾಂತ್ರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು, ನಗರಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಗಳಿಗೆ ಹಳ್ಳಿಗಳನ್ನು ಕಸದ ತೊಟ್ಟಿಯಾಗಿ ಮಾಡಿಕೊಳ್ಳಲಾಗುತ್ತಿದೆ. ಆರ್ಥಿಕ ಹಾಗೂ ರಾಜಕೀಯ ಅಧಿಕಾರ ಕೇಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತಗೊಂಡರೆ ಪ್ರಜಾಪ್ರಭುತ್ವ ಹಾಗೂ ಸ್ವರಾಜ್ಯ ಕಲ್ಪನೆಗೆ ಮಾರಕ ಎಂದು ಗಾಂಧಿ ಪ್ರತಿಪಾದಿಸಿದ್ದರು. ಆದರೆ ಇಂದು ಬಂಡವಾಳಶಾಹಿ ಕಪಿಮುಷ್ಟಿಯಲ್ಲಿ ಇಡೀ ವ್ಯವಸ್ಥೆ ಸಿಲುಕುವ ಮೂಲಕ ಅವರು ಪ್ರತಿಪಾದಿಸಿದ್ದು ನಿಜವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗಾಂಧಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳ ಆಧಾರದಲ್ಲಿ ಆಧುನಿಕ ಸಮಾ ಜದ ಅವಶ್ಯಕತೆ ಅನುಗುಣವಾಗಿ ಸಂವಿ ಧಾನಕ್ಕೆ 73ನೇ ತಿದ್ದುಪಡಿ ತಂದು ದೇಶ ದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಗೊಳಿಸಲಾಯಿತು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ನೈರ್ಮಲ್ಯ ನಿಧಾನ ವಾಗಿಯಾದರೂ ಮೇಲ್ಮಟ್ಟದಲ್ಲಿ ಗುರುತರ ಬದಲಾವಣೆ ಆಯಿತು ಎಂದರು.

ಗಾಂಧಿ ಹಂತಕನಿಗೆ ಗುಡಿ: ಪ್ರಸ್ತುತ ಗಾಂಧಿ ಯನ್ನು ದೇವರೆಂದು ಪೂಜಿಸುವುದು ತಪ್ಪು ಎನ್ನುತ್ತಾರೆ. ಆದರೆ ಗಾಂಧಿ ಕೊಲೆ ಮಾಡಿ ದವನಿಗೆ ಗುಡಿ ಕಟ್ಟಿ ಪೂಜೆ ಮಾಡುತ್ತಿರು ವುದಕ್ಕೆ ಏನೇಳಬೇಕು. `ಪ್ರೀತಿ ಮತ್ತು ಸಹನೆ ನನ್ನ ಧರ್ಮ’ ಎಂದು ಗಾಂಧಿ ಹೇಳಿದ್ದಾರೆ. ಆದರೆ ಇಂದು ದೇಶದಲ್ಲಿ ದ್ವೇಷ ಮತ್ತು ಅಸಹಿಷ್ಣುತೆ ತಾಂಡವವಾಡುತ್ತಿದೆ. ಗಾಂಧಿ ನಮ್ಮೊಳಗಿದ್ದು, ಪ್ರಸ್ತುತದ ಸನ್ನಿವೇಶದಲ್ಲಿ ಇನ್ನು ಪ್ರಖರವಾಗಿ ಗಾಂಧಿ ಕಾಣುತ್ತಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ದೇಶದ ಎರಡು ಕಣ್ಣುಗಳು. ಈ ಇಬ್ಬರ ನಡುವೆ ವೈರುಧ್ಯ ವಿದೆ. ಆದರೆ ಈ ಎರಡು ಕಣ್ಣುಗಳ ನೋಟ ಇಂದಿನ ವಿಷಮ ಪರಿಸ್ಥಿತಿಯ ಕತ್ತಲಿಗೆ ಬೆಳಕಾಗಿ ಗೋಚರಿಸುತ್ತಿದೆ. ಹೃದಯ ಪರಿವರ್ತನೆಗೆ ಗಾಂಧಿ ಒತ್ತು ನೀಡಿದರು. ಅಂಬೇಡ್ಕರ್ ಮನುಷ್ಯನ ಘನತೆ ಹಾಗೂ ನಾಗರಿಕ ಹಕ್ಕುಗಳ ಬಗ್ಗೆ ಪ್ರಥಮವಾಗಿ ದನಿ ಎತ್ತಿದ್ದರು. ಎರಡೂ ಮುಖ್ಯವೇ. ಒಂದು ಕಣ್ಣ ಮುಚ್ಚಿ ನೋಡಿದರೆ ಅಸ್ಪಷ್ಟವೇ ಅಲ್ಲವೇ? ಎಂದರು.

ಅಂಬೇಡ್ಕರ್ ಹೇಳಿದ್ದು ನಿಜವಾಗುತ್ತಿದೆ: ಸಂವಿಧಾನ ರಚನಾ ಸಭೆಯ ಕೊನೆ ಭಾಷಣ ದಲ್ಲಿ `ನಾವು ವಿರೋಧಭಾಸದ ಕಾಲಘಟ್ಟ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ಹಿಂದು ಳಿದ ಜಾತಿಗಳು ಸಮಾನತೆ ಪಡೆಯ ಬಹುದು. ಆದರೆ ಆರ್ಥಿಕ ಹಾಗೂ ಸಾಮಾ ಜಿಕ ಕ್ಷೇತ್ರದಲ್ಲಿ ಈ ಜಾತಿಗಳು ಇನ್ನು ಮುಂದೆಯೂ ಬಹುದೊಡ್ಡ ವಿಷಮತೆ ಎದು ರಿಸಬಹುದು. ಇದನ್ನು ಹೋಗಲಾಡಿಸದ್ದಿ ದ್ದರೆ, ರಾಜಕೀಯ ಸ್ವಾತಂತ್ರ್ಯಕ್ಕೂ ಗಂಡಾಂ ತರ ಬರಬಹುದು’ ಎಂದಿದ್ದರು ಅಂಬೇಡ್ಕರ್. ಅವರ ಈ ಮಾತುಗಳು ನಿಜವಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಮಾಜಿಕ ಕಾರ್ಯ ಕರ್ತ ಕಾಡಶೆಟ್ಟಿಹಳ್ಳಿ ಸತೀಶ್ ಪ್ರತಿಕ್ರಿಯೆ ನೀಡಿದರು. ಪತ್ರಕರ್ತ ರವೀಂದ್ರ ಭಟ್ ಅಧ್ಯ ಕ್ಷತೆ ವಹಿಸಿದ್ದರು. ಪತ್ರಕರ್ತ ಹೃಷಿಕೇಶ್ ಬಹದ್ದೂರ್ ದೇಸಾಯಿ ಹಾಜರಿದ್ದರು.

ಲೈಂಗಿಕ ದಮನಿತರ ಪುನರ್ ವಸತಿ ಕುರಿತ ವರದಿಗಿಲ್ಲ ಕ್ರಮ  ಏಡ್ಸ್ ನಿಯಂತ್ರಣ ಮಂಡಳಿಯಿಂದ ಲೈಂಗಿಕ ಜೀತದ  ಜಾಲ ಸೃಷ್ಟಿ: ಲೇಖಕಿ ರೂಪಾ ಹಾಸನ ಅಸಮಾಧಾನ
ಮೈಸೂರು, ಫೆ.17(ಪಿಎಂ)- ಪುರುಷನ ಕಾಮಕ್ಕಾಗಿ ಶೀಲವನ್ನೇ ಮಾರಬೇಕಾದ ಸ್ಥಿತಿ ವಿರುದ್ಧ ಅಹಿಂಸಾತ್ಮಕ ಮಾರ್ಗದಲ್ಲಿ ದಮನಿತರು ದಂಗೆ ಸಾರಬೇಕು ಎಂದಿದ್ದರು ಗಾಂಧಿ. ಲೈಂಗಿಕ ದಮನಿತರ ಪುನರ್ ವಸತಿಗಾಗಿ ಸರ್ಕಾರವೇ ರಚಿ ಸಿದ್ದ ಸಮಿತಿಯು ವರದಿ ಸಲ್ಲಿಸಿ 3 ವರ್ಷಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೇಖಕಿ ರೂಪಾ ಹಾಸನ ಅಸಮಾಧಾನ ವ್ಯಕ್ತಪಡಿಸಿದರು.

ವ್ಯವಸ್ಥೆಯು ಹೆಣ್ಣು ಮಕ್ಕಳಿಗೆ ರಕ್ಷಣೆ, ಉದ್ಯೋಗ ಹಾಗೂ ಆರ್ಥಿಕ ಬೆಂಬಲವನ್ನು ನೀಡದೇ ನಿರ್ಲಕ್ಷ್ಯ ಮಾಡಿದ ಪರಿಣಾಮ ಅನಿವಾರ್ಯವಾಗಿ ಮೈ ಮಾರಿಕೊಳ್ಳುವ ದಂಧೆಗೆ ಸಿಲುಕಿರುವ ಲಕ್ಷಾಂತರ ಮಹಿಳೆಯರನ್ನು ಲೈಂಗಿಕ ದಮನಿತರು ಎಂದೇ ಕರೆಯಬೇಕು. ಅವರ (ಲೈಂಗಿಕ ವೃತ್ತಿನಿರತರು) ಪುನರ್ ವಸತಿಗಾಗಿ ಸರ್ಕಾರವೇ ರಚಿಸಿದ್ದ ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯೆ. ದಂಧೆಗೆ ಸಿಲುಕಿದವರ ಸಂಕಷ್ಟಗಳನ್ನು ವಿಸ್ತøತವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಿ 3 ವರ್ಷ ಕಳೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೈಂಗಿಕ ಜೀತ: ಕೇಂದ್ರ, ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಡಿ ಒಂದು ಘಟಕ ವಾಗಿ ಕಾರ್ಯನಿರ್ವಹಿಸುತ್ತಿರುವ `ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ’ ವೇಶ್ಯವಾಟಿಕೆ ಜಾಲಕ್ಕೆ ಸಿಲುಕಿರುವ, ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳನ್ನು ಕಳೆದ 15 ವರ್ಷಗಳಿಂದ ನೋಂದಣಿ ಮಾಡಿಕೊಂಡು ಏಡ್ಸ್ ನಿಯಂತ್ರಣದ ಹೆಸರಿನಲ್ಲಿ ಅವರಿಂದ ಉಚಿತ ಕಾಂಡೋಮ್ ಹಂಚಿಸುತ್ತಿದೆ. ಆ ಮೂಲಕ ಲೈಂಗಿಕ ಜೀತದ ಜಾಲ ಸೃಷ್ಟಿ ಮಾಡಿದ್ದು, ಇದು ನಾಗರಿಕ ಸಮಾಜದ ಘೋರ ದುರಂತ. ಇದೊಂದು ರೀತಿಯಲ್ಲಿ ಸರ್ಕಾರಿ ಪ್ರಾಯೋಜಿತ ವೇಶ್ಯಾವಾಟಿಕೆಯಾಗಿ ಗಾಂಧಿಯ ಘನತೆಯುತ ಬದುಕಿನ ಕನಸನ್ನು ಪ್ರಭುತ್ವವೇ ಅವಮಾನಿಸುತ್ತಿರುವಂತಿದೆ ಎಂದರು.

ಮದ್ಯ ನಿಷೇಧ: ಮದ್ಯ ನಿಷೇಧಕ್ಕೆ ಗಾಂಧಿ ಮುಖ್ಯ ಪ್ರೇರಣೆ. `ಆರೋಗ್ಯಕರ ಗ್ರಾಮಕ್ಕೆ ಮದ್ಯ ನಿಷೇಧವೇ ಮದ್ದು’ ಎಂದು ಗಾಂಧಿ ಬಲವಾಗಿ ನಂಬಿದ್ದರು. ಸರ್ಕಾರದ ಅಬಕಾರಿ ಇಲಾಖೆ ಕಚೇರಿಯಲ್ಲಿ ಗಾಂಧಿ ಭಾವಚಿತ್ರದ ಕೆಳಗೆ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವುದು ಗಾಂಧಿ ಅಣಕಿಸುವಂತಿದೆ. ಪ್ರತಿ ವರ್ಷ ಮದ್ಯಪಾನ ಚಟಕ್ಕೆ ಬೀಳುವವರ ಪ್ರಮಾಣ ಶೇ.18ರಷ್ಟು ಹೆಚ್ಚಾಗುತ್ತಿದೆ. ಪುರುಷರ ಅತಿಯಾದ ಮದ್ಯಪಾನ ಚಟದಿಂದ ನಿತ್ಯ ಕುಟುಂಬದೊಳಗೆ ಕಲಹ ಉಂಟಾಗುತ್ತಿದೆ. ಮದ್ಯಪಾನ ನಿಷೇಧಕ್ಕಾಗಿ ಒತ್ತಾಯಿಸಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಜಂಜಾಟದಿಂದ ಸೋತು ಹೋಗಿರುವ ಹೆಣ್ಣು ಮಕ್ಕಳೂ ಕುಡಿತದ ಚಟಕ್ಕೆ ಬಲಿಯಾಗಿರುವುದು ಇನ್ನೊಂದು ದುರಂತ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ನಿಷೇಧಿಸುವ ಅಧಿಕಾರವನ್ನು ಗ್ರಾಮ ಸಭೆಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ರೂಪಾ ಹಾಸನ ತಿಳಿಸಿದರು.

Translate »