ದೇಶದ ಉನ್ನತಿಗಾಗಿ ಸರ್ಕಾರದ ವಿರುದ್ಧ ಹೋರಾಡುವುದು ನಿಜವಾದ ದೇಶಭಕ್ತಿ
ಮೈಸೂರು

ದೇಶದ ಉನ್ನತಿಗಾಗಿ ಸರ್ಕಾರದ ವಿರುದ್ಧ ಹೋರಾಡುವುದು ನಿಜವಾದ ದೇಶಭಕ್ತಿ

December 3, 2019

ಮೈಸೂರು, ಡಿ.2(ಪಿಎಂ)- ದೇಶದ ಉನ್ನತಿಗಾಗಿ ಸರ್ಕಾರದ ವಿರುದ್ಧ ಹೋರಾಡುವುದು ನಿಜವಾದ ದೇಶಭಕ್ತಿಯೇ ಹೊರತು, ಸರ್ಕಾರದ ಮೂರ್ಖತನದ ನಡೆಗಳ ಪರ ಮಾತನಾಡುವುದಲ್ಲ ಎಂದು ಸ್ವಯಂ ನಿವೃತ್ತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಮಾರ್ಮಿಕವಾಗಿ ನುಡಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಕನ್ಸನ್ರ್ಡ್ ಸಿಟಿಜ್ಹನ್ಸ್ ಆಫ್ ಇಂಡಿಯಾ (ಸಿಸಿಐ) ವತಿಯಿಂದ `ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮುಂದಿರುವ ಸವಾಲುಗಳು’ ಕುರಿತಂತೆ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ-ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಏನು ಮಾಡಿದರೂ ಅದು ದೇಶದ ಒಳಿತಿಗಾಗಿ ಎಂದು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಆಗುತ್ತಿರುವುದೇ ಬೇರೆ. ಸರ್ಕಾರದ ಮೂರ್ಖತನದ ನಡೆ ಖಂಡಿಸಿದರೆ ಅದನ್ನು ದೇಶ ವಿರೋಧಿ ಎಂದು ಕರೆಯಲಾಗುತ್ತಿದೆ. ಟೀಕಿಸುವ ಮತ್ತು ಭಿನ್ನಾಭಿಪ್ರಾಯದ ಹಕ್ಕಿಲ್ಲದೆ, ಒಂದು ದೇಶ ಪ್ರಜಾಪ್ರಭುತ್ವದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸರ್ಕಾರ ಕೈಗೊಳ್ಳುವ ಅವೈಜ್ಞಾನಿಕ ನಿರ್ಧಾರಗಳು ಇಡೀ ದೇಶದ ಜನತೆ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು. ಆದರೆ ಕೇಂದ್ರ ಸರ್ಕಾರ ಪ್ರತಿ ಹಂತದಲ್ಲೂ ನಿರ್ಧಾರಗಳನ್ನು ಘೋಷಿಸಲು ಸೀಮಿತವಾಗಿದೆ. ಆದರೆ ನಂತರದ ಕಾರ್ಯವೈಖರಿ ಸಂಬಂಧ ಸರ್ಕಾರದ ಬಳಿ ಯಾವುದೇ ಸ್ಪಷ್ಟ ರೂಪುರೇಷೆ ಕಾಣಲಾಗುತ್ತಿಲ್ಲ ಎಂದರು.

ಅಧಿಕ ಮುಖಬೆಲೆ ನೋಟು ಅಮಾನ್ಯೀಕರಣ, ಜಿಎಸ್‍ಟಿ ಜಾರಿ, ಜಮ್ಮು-ಕಾಶ್ಮೀರದ 370ನೇ ವಿಧಿಯ ರದ್ದು ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರ ಕೇವಲ ನಿರ್ಧಾರಕ್ಕೆ ಮಾತ್ರ ಸೀಮಿತ ವಾಗಿದ್ದು, ಇದನ್ನು ಐತಿಹಾಸಿಕ ನಿರ್ಧಾರ ಎಂದು ಬಿಂಬಿಸಲಾಗು ತ್ತಿದೆ. ಆದರೆ ಸರ್ಕಾರ ನಿರ್ಧಾರಗಳಿಂದ ಯಾವುದೇ ಧನಾತ್ಮಕ ಪರಿ ಣಾಮ ಕಾಣಲಾಗುತ್ತಿಲ್ಲ ಎಂದು ವಿಷಾದಿಸಿದರು. ಸಿಸಿಐ ರಾಜ್ಯ ಸಂಚಾಲಕ ಬಿ.ರವಿ, ನಿವೃತ್ತ ಪ್ರಾಂಶುಪಾಲರಾದ ವಿದ್ಯಾ ಶಂಕರ್ ವೇದಿಕೆಯಲ್ಲಿದ್ದರು. ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ, ಹಿರಿಯ ಸಾಹಿತಿ ದೇವನೂರ ಮಹಾದೇವ ಸೇರಿದಂತೆ ಅನೇಕ ಗಣ್ಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »