`ಕೆರೆ ತುಂಬಿಸಿ, ರೈತರಿಗೆ ಸಹಾಯ ಮಾಡಿ’ ಸಿಎಂಗೆ ಸೆಲ್ಫಿ ವೀಡಿಯೋದಲ್ಲಿ ಮನವಿ ಮಾಡಿ ರೈತ ಆತ್ಮಹತ್ಯೆ
ಮೈಸೂರು

`ಕೆರೆ ತುಂಬಿಸಿ, ರೈತರಿಗೆ ಸಹಾಯ ಮಾಡಿ’ ಸಿಎಂಗೆ ಸೆಲ್ಫಿ ವೀಡಿಯೋದಲ್ಲಿ ಮನವಿ ಮಾಡಿ ರೈತ ಆತ್ಮಹತ್ಯೆ

ಕೆ.ಆರ್.ಪೇಟೆ: ಸಾಲ ಬಾಧೆ ತಾಳಲಾರದೇ ರೈತನೋರ್ವ ಸೆಲ್ಫಿ ವಿಡಿಯೋ ಮಾಡಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತನ್ನ ಕೊನೆ ಆಸೆ ನೆರವೇರಿ ಸುವಂತೆ ಮನವಿ ಮಾಡಿಕೊಂಡು ತಮ್ಮ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ತಾಲೂಕಿನ ಅಘಲಯ ಗ್ರಾಮದಲ್ಲಿ ನಡೆದಿದೆ.ಅಘಲಯ ಗ್ರಾಮದ ನಂಜಪ್ಪನ ಮಗ ಸುರೇಶ್(50) ಆತ್ಮಹತ್ಯೆ ಮಾಡಿಕೊಂಡಿರುವ ರೈತ.

ಘಟನೆ ವಿವರ: ಅಘಲಯ ಗ್ರಾಮದಲ್ಲಿ ಸುಮಾರು ಎರಡೂವರೆ ಎಕರೆ ಜಮೀನು ಮತ್ತು ತೋಟ ಹೊಂದಿರುವ ಸುರೇಶ್, ತೋಟದ ಅಭಿವೃದ್ಧಿ ಹಾಗೂ ಬೆಳೆಗಾಗಿ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಮ್ಮ ಪತ್ನಿ ಜಯಶೀಲ ಅವರ ಹೆಸರಿನಲ್ಲಿ ಸಾಲ ಪಡೆದಿದ್ದಾರೆÀ. ಅಲ್ಲದೆ ಬೇಸಾಯಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಲಕ್ಷಾಂತರ ರೂ ಸಾಲ ಮಾಡಿದ್ದರು.

ಮಳೆ ಇಲ್ಲದೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಗ್ರಾಮದ ಕೆರೆ ತುಂಬಿರಲಿಲ್ಲ. ಇದರಿಂದ ತೋಟದಲ್ಲಿನ ತೆಂಗು, ಅಡಿಕೆ ಮರಗಳು ಒಣಗುತ್ತಿದ್ದವು. ಇದನ್ನು ನೋಡಲಾಗದೇ ತನ್ನ ಮೊಬೈಲ್‍ನಲ್ಲಿ ಸೆಲ್ಫಿ ವೀಡಿಯೋ ಮಾಡಿ `ನಾನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ. ಅಘಲಯ ಕೆರೆ ಸೇರಿದಂತೆ ಸಂತೇಬಾಚಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸಬೇಕು. ಸಂತೇಬಾಚಹಳ್ಳಿ ಹೋಬಳಿಯು ಬರಪೀಡಿತ ಹೋಬಳಿಯಾಗಿದ್ದು ಈ ಭಾಗದ ರೈತರಿಗೆ ಸಹಾಯ ಮಾಡಬೇಕು. ನನ್ನ ಅಂತಿಮ ದರ್ಶನಕ್ಕೆ ನೀವು ಬರಬೇಕು. ಕುಮಾರಸ್ವಾಮಿ ಅವರು ಇನ್ನೂ ನಾಲ್ಕು ವರ್ಷಗಳ ಕಾಲ ಮುಖ್ಯಮಂತ್ರಿ ಯಾಗಿರಬೇಕು. ಇದಕ್ಕೆ ವಿರೋಧ ಪಕ್ಷದ ಯಡಿಯೂರಪ್ಪ ಅವರು ಮೈತ್ರಿ ಪಕ್ಷದ ಅತೃಪ್ತರೊಂದಿಗೆ ಸೇರಿ ಕಾಲೆಳೆಯಬಾರದು. ಡಿ.ಕೆ.ಶಿವಕುಮಾರ್ ಅವರು ಕುಮಾರಣ್ಣ ಸರ್ಕಾರ ಉಳಿಸಲು ಮುಂದಾಗಬೇಕು. ನಾನು ಸತ್ತನಂತರ ನನ್ನ ಮಗ ಚಂದ್ರು ಸಾಲ ತೀರಿಸುತ್ತಾನೆ. ಯಾರೂ ಸಹ ನನ್ನ ಮಗನಿಗೆ ಸಾಲ ವಾಪಸ್ ಕೊಡುವಂತೆ ಒತ್ತಡ ಹೇರಬಾರದು. ಕೆರೆಗೆ ನೀರು ತುಂಬಿಸಿದರೆ ಅದರಿಂದ ಬೆಳೆ ಬೆಳೆದು ಸಾಲ ತೀರಿಸುತ್ತಾನೆ’ ಎಂದು ಆತ್ಮಹತ್ಯೆಗೂ ಮುನ್ನ ಮಾಡಿರುವ ಸೆಲ್ಫಿ ವಿಡಿಯೋದಲ್ಲಿ ರೈತ ಸುರೇಶ್ ಮನವಿ ಮಾಡಿಕೊಂಡಿದ್ದಾನೆ. ಆದರೆ ಮನೆಯವರು ಸುರೇಶ್ ಅವರ ಅಂತ್ಯಕ್ರಿಯೆ ಮುಗಿದ ನಂತರ ಮನೆಗೆ ಬಂದು ಸುರೇಶ್ ಅವರ ಮೊಬೈಲ್ ಆನ್ ಮಾಡಿ ನೋಡಿದಾಗ ಅವರು ಮಾಡಿದ್ದ ಸೆಲ್ಫಿ ವೀಡಿಯೋ ವಿಚಾರ ಬಯ ಲಾಗಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಂ.ಶಿವಮೂರ್ತಿ, ರಾಜಸ್ವ ನಿರೀಕ್ಷಕ ರಾಮಚಂದ್ರಪ್ಪ ಮತ್ತಿ ತರರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

June 18, 2019

Leave a Reply

Your email address will not be published. Required fields are marked *