ಮೈಸೂರಲ್ಲಿ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್
ಮೈಸೂರು

ಮೈಸೂರಲ್ಲಿ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್

June 18, 2019

ಮೈಸೂರು: ಕರ್ತವ್ಯ ನಿರತ ವೈದ್ಯರಿಗೆ ಸೂಕ್ಷ ರಕ್ಷಣೆ ನೀಡುವು ದರೊಂದಿಗೆ ಕೊಲ್ಕತ್ತಾದ ಎನ್‍ಆರ್‍ಎಸ್ ವೈದ್ಯ ಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಮಾಡಿ ಬೆಂಬಲ ಘೋಷಿಸಿತು. ಇದ ರಿಂದ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ವೈದ್ಯಕೀಯ ಸೇವೆ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ರಾಷ್ಟ್ರ ವ್ಯಾಪಿ ನಡೆದ ವೈದ್ಯರ ಮುಷ್ಕರಕ್ಕೆ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಓಪಿಡಿ ಬಂದ್ ಮಾಡಲಾ ಗಿತ್ತು. ತುರ್ತು ಚಿಕಿತ್ಸೆ ಹಾಗೂ ವಾರ್ಡ್‍ಗಳಲ್ಲಿ ದಾಖಲಾಗಿರುವ ರೋಗಿಗಳ ಚಿಕಿತ್ಸೆ ಹೊರತು ಪಡಿಸಿ ಹೊರರೋಗಿಗಳಿಗೆ

ಚಿಕಿತ್ಸೆ ನೀಡಲು ನಿರಾಕರಿಸಲಾಯಿತು. ಜೆಎಸ್‍ಎಸ್, ಅನಘ ಆಸ್ಪತ್ರೆ ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸ್ಥಗಿತಗೊಳಿಸಿದ್ದರೆ, ಕೆಲವು ಆಸ್ಪತ್ರೆಗಳಲ್ಲಿ ಮಾನವೀಯತೆ ಹಿನ್ನೆಲೆಯಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಚಿಕಿತ್ಸೆ ನೀಡಿದರು. ಅನಾರೋಗ್ಯದ ಸ್ಥಿತಿ ಅವಲೋಕಿಸಿ ತುರ್ತಾಗಿ ಚಿಕಿತ್ಸೆ ನೀಡಬೇಕಾದ ಸ್ಥಿತಿಯನ್ನು ಮನಗಂಡು ಖಾಸಗಿ ಆಸ್ಪತ್ರೆಗಳ ವೈದ್ಯರು ಸೇವೆ ಒದಗಿಸಿದರು. ಆದರೆ ಪೂರ್ಣ ಪ್ರಮಾಣದಲ್ಲಿ ಓಪಿಡಿ ಕಾರ್ಯನಿರ್ವಹಿಸದೇ ಇರುವುದರಿಂದ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆ ತುತ್ತಾದವರು ಸಮರ್ಪಕ ಆರೋಗ್ಯ ಸೇವೆ ದೊರೆಯದೆ ಪರದಾಡಿದರು.

ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು: ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಮಾಡಿದ್ದರಿಂದ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. ಕೆ.ಆರ್.ಆಸ್ಪತ್ರೆಯ ಕಿರಿಯ ವೈದ್ಯರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಆಸ್ಪತ್ರೆಗೆ ಬಂದ ಎಲ್ಲಾ ರೋಗಿಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಡ್ಯೂಟಿ ಡಾಕ್ಟರ್ಸ್‍ಗೆ ಸಾಧ್ಯವಾಗುತ್ತಿರಲಿಲ್ಲ. ಆರೋಗ್ಯ ತಪಾಸಣೆಗೆ ಬಂದ ರೋಗಿಗಳು ವಿವಿಧ ವಿಭಾಗಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತು.

ವಿಳಂಭವಾಯಿತು: ಏಕಕಾಲಕ್ಕೆ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬಂದಿದ್ದರಿಂದ ಚಿಕಿತ್ಸಾ ಸೇವೆ ಒದಗಿಸಲು ವಿಳಂಭವಾಯಿತು. ಸಾಮಾನ್ಯ ದಿನದಲ್ಲಿ ಒಂದೊಂದು ಓಪಿಡಿಯಲ್ಲಿ ನಾಲ್ಕಾರು ಮಂದಿ ಕಿರಿಯ ವೈದ್ಯರು ಹಿರಿಯ ವೈದ್ಯರಿಗೆ ಚಿಕಿತ್ಸೆ ನೀಡಲು ಸಾಥ್ ನೀಡುತ್ತಿದ್ದರು. ಆದರೆ ಇಂದು ಕಿರಿಯ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇದರಿಂದ ಚಿಕಿತ್ಸೆಗಾಗಿ ರೋಗಿಗಳು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಸ್ಥಿತಿ ಒದಗಿತ್ತು. ಇದರಿಂದ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪರದಾಡಿದರು.

ತುರ್ತುಸೇವೆ ಲಭ್ಯವಿತ್ತು: ಮೈಸೂರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಮಕ್ಕಳ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸಾ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಇದರಿಂದ ರೋಗಿಗಳಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗಲಿಲ್ಲ. ಖಾಸಗಿ ಆಸ್ಪತ್ರೆಗಲ್ಲಿ ಓಪಿಡಿ ಬಂದ್ ಮಾಡುವ ವಿಷಯ ತಿಳಿದು ಬಹುತೇಕ ರೋಗಿಗಳು ಸರ್ಕಾರಿ ಆಸ್ಪತ್ರೆಯತ್ತ ಮುಖಮಾಡಿದ್ದರು. ಸಂಜೆ 4ಗಂಟೆಯ ನಂತರ ಕ್ಲಿನಿಕ್‍ಗಳು ತೆರೆಯಲ್ಪಟ್ಟಿದ್ದವು. ಇದು ರೋಗಿಗಳಿಗೆವರದಾಗಿ ಪರಿಣಮಿಸಿತ್ತು. ಒಟ್ಟಾರೆ ಇಂದು ನಡೆದ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ರೋಗಿಗಳ ಮೇಲೆ ದುಷ್ಪರಿಣಾಮ ಬೀರಲಿಲ್ಲ. ಮತ್ತೊಂದೆಡೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಮೇಲ್ನೋಟಕ್ಕೆ ಬಂದ್ ಮಾಡಿರುವ ಫಲಕ ಹಾಕಲಾಗಿತ್ತಾದರೂ, ರೋಗಿಗಳ ಪರಿಸ್ಥಿತಿ ಗಮನಿಸಿ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಪ್ರದರ್ಶಿಸಿದರು ಎಂಬ ಮಾಹಿತಿಯನ್ನು ರೋಗಿಗಳ ಪೋಷಕರು ತಿಳಿಸಿದ್ದಾರೆ.

ತೊಂದರೆಯಾಗದಂತೆ ಕ್ರಮ ..
ಖಾಸಗಿ ಆಸ್ಪತ್ರೆಯಲ್ಲಿ ಓಪಿಡಿ ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ನಿವಾಸಿಗಳಿಗೆ ಆರೋಗ್ಯ ಸೇವೆ ಪಡೆಯಲು ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ವೈದ್ಯರು, ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ ತಾಲೂಕು ಆಸ್ಪತ್ರೆಗಳಿಗೆ ಬೇಟಿ ನೀಡಿ ಪರಿಶೀಲಿಸಿದ್ದೇನೆ. ಎಲ್ಲಿಯೂ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
-ಡಾ.ಆರ್.ವೆಂಕಟೇಶ್, ಜಿಲ್ಲಾ ಆರೋಗ್ಯಾಧಿಕಾರಿ.

ರಾಜ್ಯಕ್ಕೂ ತಟ್ಟಿದ ವೈದ್ಯರ ಮುಷ್ಕರ
ಬೆಂಗಳೂರು: ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯರು ಕರೆ ನೀಡಿರುವ ಮುಷ್ಕರದ ಬಿಸಿ ರಾಜ್ಯಕ್ಕೂ ತಟ್ಟಿದೆ. ರಾಜ್ಯದ ಎಲ್ಲಾ ಖಾಸಗಿ ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ನಿಮ್ಹಾನ್ಸ್, ಇಎಸ್‍ಐ ಆಸ್ಪತ್ರೆಗಳಲ್ಲಿನ ಹೊರ ರೋಗಿಗಳ ಚಿಕಿತ್ಸಾ ವಿಭಾಗ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಆರೋಗ್ಯ ಸೇವೆ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.

ಸರ್ಕಾರದ ಸೂಚನೆ ಧಿಕ್ಕರಿಸಿ ಆಸ್ಪತ್ರೆಗಳ ವೈದ್ಯರೂ ಮುಷ್ಕರದಲ್ಲಿ ತೊಡಗಿಸಿಕೊಂಡಿದ್ದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತು. ತುರ್ತು ಚಿಕಿತ್ಸೆಗಾಗಿ ಬಂದ ರೋಗಿಗಳು ವೈದ್ಯರ ಅಲಭ್ಯತೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದರು. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದರು. ಏಕಕಾಲಕ್ಕೆ ಸಾವಿರಾರು ಜನ ಆಗಮಿಸಿದ್ದರಿಂದ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದವು. ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಸರ್ಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿ ಸಲು ಸರ್ಕಾರ ಪೂರ್ವ ತಯಾರಿ ಮಾಡಿಕೊಂಡಿತ್ತು. ವೈದ್ಯರೂ ಸೇರಿ ದಂತೆ ಆಸ್ಪತ್ರೆಯ ಯಾವ ಸಿಬ್ಬಂದಿಯೂ ರಜೆ ಹಾಕದಂತೆ ಸುತ್ತೋಲೆ ಹೊರಡಿಸಿತ್ತು. ಜಿಲ್ಲಾಡಳಿತಗಳು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಿ ತುರ್ತು ಚಿಕಿತ್ಸೆ ಹಾಗೂ ಐಸಿಯು ಘಟಕಗಳನ್ನು ತೆರೆಯಲಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಆದರೆ, ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿದ್ದರಿಂದ ಬೆಳಿಗ್ಗೆ ಚಿಕಿತ್ಸೆಗೆ ಬಂದ ರೋಗಿಗಳು ಚಿಕಿತ್ಸೆ ಸಿಗದೆ ನರಳಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಓಪಿಡಿ ತೆರೆದಿರ ಲಿಲ್ಲ. ವೈದ್ಯರು ಮುಷ್ಕರ ನಿರತರಾಗಿದ್ದರಿಂದ ಬೇರೆ ಬೇರೆ ಜಿಲ್ಲೆ, ರಾಜ್ಯ ಗಳಿಂದ ಆಗಮಿಸಿದ್ದ ರೋಗಿಗಳು ತೀವ್ರ ತೊಂದರೆ ಅನುಭವಿಸಬೇಕಾಯಿತು.