ಕೊನೆಗೂ ನಾಗಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ
ಮಂಡ್ಯ

ಕೊನೆಗೂ ನಾಗಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ

July 23, 2018

ನಾಗಮಂಗಲ: ರಾಜಕೀಯ ಕಾರಣಗಳಿಂದ ವಿವಾದ ಕ್ಕೀಡಾಗಿ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಶಾಸಕ ಸುರೇಶ್‍ಗೌಡರ ನಿರ್ದೇಶನದಂತೆ ಪ್ರತಿಷ್ಠಾಪಿಸುವ ಮೂಲಕ ತಾಲೂಕು ಆಡಳಿತಕ್ಕೆ ತಲೆನೋವಾಗಿದ್ದ ಪ್ರಕರಣವನ್ನು ದಲಿತ ಮುಖಂಡರು ಸುಖಾಂತ್ಯಗೊಳಿಸಿದ್ದಾರೆ.

ಪಟ್ಟಣದ ಮಿನಿ ವಿಧಾನಸೌಧದ ಎದುರು ಭಾನುವಾರ 700 ಕೆಜಿ ತೂಕದ ಕಂಚಿನ ಪ್ರತಿಮೆಯನ್ನು ಹಲವು ದಲಿತ ಮುಖಂಡರು ಬೆಳಿಗ್ಗೆ ಕ್ರೇನ್ ಮೂಲಕ ಗದ್ದುಗೆ ಮೇಲಕ್ಕೆತ್ತಿ ಪ್ರತಿಷ್ಠಾಪಿಸಿದರು. ಮಿನಿವಿಧಾನ ಸೌಧದ ಎದುರು ಪ್ರತಿಷ್ಠಾಪಿಸಲಾಗಿರುವ ಗಾಂಧಿ ಪ್ರತಿಮೆಯಂತೆ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ತಾಲೂಕು ಪ್ರಗತಿಪರ ಮತ್ತು ದಲಿತ ಸಂಘಟನೆ ಮುಖಂಡರು ಬೇಡಿಕೆ ಯಿಟ್ಟು ಹಲವು ಬಾರಿ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ದೂರಿನ ಕಾರಣಕ್ಕೆ ನೆನಗುದಿಗೆ ಬಿದ್ದಿದ್ದ ಪ್ರತಿಮೆ: ಕಳೆದ 3 ವರ್ಷದ ಹಿಂದೆ ಪಟ್ಟಣದ ಮಿನಿ ವಿಧಾನಸೌಧದ ಎದುರು ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಲು ಮುಂದಾದಾಗ ಮಾಜಿ ಸಚಿವ ಚಲುವ ರಾಯಸ್ವಾಮಿ ಬೆಂಬಲಿಗರಾದ ಕೆಲವು ದಲಿತ ಮುಖಂಡರು ವಿರೋಧ ವ್ಯಕ್ತಪಡಿಸಿ ಪ್ರತಿಮೆ ಪ್ರತಿಷ್ಠಾಪಿಸದಂತೆ ತಹಶೀಲ್ದಾರ್‍ಗೆ ಲಿಖಿತ ದೂರು ನೀಡಿ ತಡೆಯೊಡ್ಡಿದ್ದರು. ಇದರ ವಿರುದ್ಧ ಪ್ರತಿಮೆ ಸ್ಥಾಪನೆಗೆ ಪಟ್ಟು ಹಿಡಿದು ಮತ್ತೊಂದು ದಲಿತ ಮುಖಂಡರ ಗುಂಪು ಕೋರ್ಟ್ ಮೆಟ್ಟಿಲೇರಿತ್ತು. ಇದು ರಾಜಕೀಯ ತಿರುವು ಪಡೆದು ವಿವಾದಕ್ಕೀಡಾಗಿ ಪ್ರತಿಮೆ ಪ್ರತಿಷ್ಠಾಪನೆಯಾಗದೇ ನೆನಗುದಿಗೆ ಬಿದ್ದಿತು. ಈ ಬಾರಿ ಚುನಾವಣೆ ವೇಳೆ ಎರಡೂ ದಲಿತ ಗುಂಪು ಗಳು ಒಮ್ಮತವಾಗಿ ಪ್ರತಿಷ್ಠಾಪಿಸಲು ಪ್ರಯತ್ನ ನಡೆಸಿದರಾದರೂ, ಅದು ವಿಫಲವಾಗಿತ್ತು.

ಕೊಟ್ಟ ಮಾತಿನಂತೆ ನಡೆದುಕೊಂಡ ಸುರೇಶ್‍ಗೌಡ: ವಿಧಾನ ಸಭಾ ಚುನಾವಣೆ ವೇಳೆ ಮಾಜಿ ಶಾಸಕ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಶಾಸಕ ಸುರೇಶ್‍ಗೌಡ ತಾವು ಗೆದ್ದರೆ 15 ದಿನಗಳಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಪ್ರಯತ್ನ ಪಟ್ಟು 20 ದಿನಗಳ ಹಿಂದೆ ವಿಫಲರಾಗಿದ್ದ ಸುರೇಶ್‍ಗೌಡ ಈ ಭಾರೀ ಪಟ್ಟು ಬಿಡದೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರುಗಳ ನೆರವಿನೊಂದಿಗೆ ಜಿಲ್ಲಾಧಿಕಾರಿ ಮತ್ತು ತಾಲೂಕು ಆಡಳಿತ, ಪೋಲಿಸ್ ಇಲಾಖೆಗೆ ಖಡಕ್ ಸೂಚನೆ ನೀಡಿ ಸ್ಥಳದಲ್ಲಿದ್ದ ರಿಸರ್ವ್ ಪೋಲಿಸ್ ಭದ್ರತೆ ತೆರವುಗೊಳಿ ಸಿದರು ಎನ್ನಲಾಗಿದೆ. ನಂತರದಲ್ಲಿ ದಲಿತ ಮುಖಂಡರಿಗೆ ಶಾಂತಿಯುತವಾಗಿ ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿದರು.

ಅಭಿನಂದನೆ ಸಲ್ಲಿಸಿದ ಮುಖಂಡರು: ಪ್ರತಿಮೆ ಪ್ರತಿಷ್ಠಾಪನೆಯಾ ಗುತ್ತಿದ್ದಂತೆ ಹರ್ಷಗೊಂಡ ದಲಿತ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಜಯಘೋಷಗಳನ್ನು ಕೂಗಿ, ಕ್ರಾಂತಿಗೀತೆ ಮೊಳಗಿಸಿ, ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಜಿಪಂ ಸದಸ್ಯ ಡಿ.ಟಿ.ಶ್ರೀನಿವಾಸ್ ಬಹಳ ವರ್ಷಗಳಿಂದ ಕೆಲವರ ವಿರೋಧದಿಂದಾಗಿ ಪ್ರತಿಷ್ಟಾಪನೆಯಾಗದೇ ಅಂಬೇಡ್ಕರ್‍ಗೆ ಅಪಮಾನವಾಗಿತ್ತು. ಶಾಸಕ ಸುರೇಶ್‍ಗೌಡರು ಜನತೆಗೆ ಕೊಟ್ಟ ಭರವಸೆಯಂತೆ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಮಾಡಿಸಿದ್ದಾರೆ ಎಂದರು.

ಹಾಗೆಯೇ ತಾಲೂಕಿನ ಪ್ರಗತಿಪರರ ಮತ್ತು ದಲಿತ ಸಮು ದಾಯದ ಹಲವು ವರ್ಷಗಳ ಬೇಡಿಕೆಯನ್ನು ಶಾಸಕ ಸುರೇಶ್‍ಗೌಡ ಮತ್ತು ಸಿಎಂ ಕುಮಾರಸ್ವಾಮಿಯವರು ನನಸು ಮಾಡಿದ್ದಾರೆ. ಇವರೆಲ್ಲರಿಗೂ ಮತ್ತು ತಾಲೂಕು ಆಡಳಿತಕ್ಕೂ ಅಭಿನಂದನೆ ಹೇಳುತ್ತೇವೆ ಎಂದು ದಸಂಸ ಮುಖಂಡರಾದ ಮುಳುಕಟ್ಟೆ ಶಿವ ರಾಮಯ್ಯ, ಕಂಚಿನಕೋಟೆ ಮೂರ್ತಿ ಜಂಟಿ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭ ಹಿರಿಯ ದಲಿತ ಮುಖಂಡರಾದ ಸಿಬಿ ನಂಜುಂಡಪ್ಪ, ಬೆಟ್ಟದಮಲ್ಲೇನಹಳ್ಳಿ ರಮೇಶ್, ಮುಳುಕಟ್ಟೆ ಸಂತೋಷ, ಗೋವಿಂದರಾಜು, ಎನ್.ಡಿ.ಪುಟ್ಟಸ್ವಾಮಿ ಮುಂತಾದವರಿದ್ದರು.

Translate »