ಸರ್ಕಾರಿ ಫಲಕ ಕಿತ್ತೆಸೆದವರ ವಿರುದ್ಧ ಎಫ್‍ಐಆರ್ ದಾಖಲು
ಮೈಸೂರು

ಸರ್ಕಾರಿ ಫಲಕ ಕಿತ್ತೆಸೆದವರ ವಿರುದ್ಧ ಎಫ್‍ಐಆರ್ ದಾಖಲು

January 21, 2019

ಮೈಸೂರು: ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ದೊಡ್ಡಕೆರೆ ಮೈದಾನಕ್ಕೆ ಸೇರಿದ ಸರ್ಕಾರಿ ಆಸ್ತಿಯಲ್ಲಿ ಜಿಲ್ಲಾಡಳಿತ ಅಳವಡಿಸಿದ್ದ ಫಲಕವನ್ನು ದುಷ್ಕರ್ಮಿಗಳು ಕಿತ್ತೆಸೆದಿದ್ದು, ಈ ಸಂಬಂಧ ತಹಶೀಲ್ದಾರ್ ಟಿ.ರಮೇಶ್ ಬಾಬು ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೈಸೂರು ಸರ್ವೆ ನಂ.1ರಲ್ಲಿ 150 ಕೋಟಿ ರೂ. ಮೌಲ್ಯದ 11.38 ಎಕರೆ ಭೂಮಿಯನ್ನು ಟ್ಯಾಂಕ್‍ಬಂಡ್ ನಿವೇಶನಗಳ ಮಾಲೀಕರ ಸಂಘ ತನ್ನದೆಂದು ನಾಮಫಲಕ ಹಾಕಿತ್ತು. ಈ ಹಿನ್ನೆಲೆಯಲ್ಲಿ ಜ.10ರಂದು ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿತ್ತು. ಅಲ್ಲದೇ 3 ಕಡೆ ನಾಮಫಲಕವನ್ನು ಅಳವಡಿಸಿ, ಇದು ಸರ್ಕಾರಿ ಆಸ್ತಿ. ಅತಿಕ್ರಮ ಪ್ರವೇಶಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಕಳೆದ ರಾತ್ರಿ ಆ ಸ್ಥಳದಲ್ಲಿ ಅಳವಡಿಸಲಾಗಿದ್ದ ನಾಮಫಲಕಗಳನ್ನು ಕಿಡಿಗೇಡಿಗಳು ಕಿತ್ತೆಸೆದಿದ್ದಾರೆ. ಅಲ್ಲದೇ ಸರ್ಕಾರಿ ಭೂಮಿಯನ್ನು ಕಬಳಿಸಲು ಯತ್ನಿಸಿದ್ದಾರೆ. ನಾಮಫಲಕ ಕಿತ್ತೆಸೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ನಜರ್‍ಬಾದ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Translate »