ರಾಗಿ, ತೆಂಗಿನ ಫಸಲಿಗೆ ಕಿಡಿಗೇಡಿಗಳಿಂದ ಬೆಂಕಿ
ಮಂಡ್ಯ

ರಾಗಿ, ತೆಂಗಿನ ಫಸಲಿಗೆ ಕಿಡಿಗೇಡಿಗಳಿಂದ ಬೆಂಕಿ

January 3, 2019

ಕೆ.ಆರ್.ಪೇಟೆ: ತೆಂಗಿನ ಮರಗಳು ಹಾಗೂ ರಾಗಿ ಫಸಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಂಗಣ್ಣ, ಜಯರಾಮೇಗೌಡ, ಜವರೇಗೌಡ, ಮಹೇಶ್, ಮಂಜಮ್ಮ ಸೇರಿದಂತೆ ಸುಮಾರು ಏಳೆಂಟು ಮಂದಿಗೆ ಸೇರಿದ ತೆಂಗಿನ ಮರಗಳು ಮತ್ತು ರಾಗಿ ಫಸಲಿನ ಮೆದೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋಗಿದೆ.

ಈ ಬಗ್ಗೆ ತಿಳಿಯುತ್ತಿದ್ದಂತೆಯೇ ತಾಲೂಕು ಪಂಚಾಯಿತಿ ಸದಸ್ಯ ಬಿ.ಎನ್.ದಿನೇಶ್ ಅವರು ಟ್ಯಾಂಕರ್ ಮೂಲಕ ನೀರನ್ನು ತರಿಸಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರು. ನಂತರ ಬಂದ ಅಗ್ನಿಶಾಮಕ ಅಧಿಕಾರಿಗಳು ಬೆಂಕಿಯನ್ನು ಆರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಅಷ್ಟರೊಳಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ.

ಕಿಡಿಗೇಡಿಗಳು ಹಾಕಿದ ಬೆಂಕಿಯು ರೈತರು ಕಷ್ಟಪಟ್ಟು ಬೆಳೆದ ಲಕ್ಷಾಂತರ ರೂ ಮೌಲ್ಯದ ರಾಗಿ ಬೆಳೆಯನ್ನು ಸುಟ್ಟು ಹಾಕಿರುವುದಕ್ಕೆ ಹಾಗೂ ಜಾನುವಾರುಗಳ ಮೇವಿಗೂ ಬೆಂಕಿ ಇಟ್ಟಿದ್ದು ಮೂಕ ಪ್ರಾಣಿಗಳಿಗೆ ಅನ್ಯಾಯ ಮಾಡಿರುವುದಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕಿದರು. ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »