ಮೈಸೂರು: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಅಂಗಡಿ ಮಳಿಗೆ ಯೊಂದು ಸುಟ್ಟುಹೋದ ಘಟನೆ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಸಾದಿಕ್ ಎಂಬುವರಿಗೆ ಸೇರಿದ ಗೃಹಬಳಕೆ ವಸ್ತುಗಳ ಅಂಗಡಿಗೆ ಬೆಂಕಿ ತಗುಲಿದ್ದು, ಇಂದು ಮುಂಜಾನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಮೂಲಕ ಇತರ ಅಂಗಡಿಗಳಿಗೆ ಅಪಾಯ ಸಂಭವಿಸುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸಾದಿಕ್ ಅವರು ಮಂಗಳವಾರ ರಾತ್ರಿ ವ್ಯಾಪಾರ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದಾಗ ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ಆರಿಸುತ್ತಿದ್ದರು. ಪರಿಣಾಮ ತುರಿಯುವ ಮಣೆ, ಕುಡುಗೋಲು, ದೋಸೆ ತವಾ, ರೊಟ್ಟಿಕಲ್ಲು, ಮುಂತಾದ ಕಬ್ಬಿಣದ ಗೃಹ ಬಳಕೆ ವಸ್ತುಗಳು ಅಂಗಡಿಯಲ್ಲಿದ್ದವು. ದೇವರಾಜ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಬಹುತೇಕ ಕಬ್ಬಿಣದ ವಸ್ತುಗಳಾದ ಕಾರಣ ಹೆಚ್ಚಿನ ನಷ್ಟ ಉಂಟಾಗಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಪೊಲೀಸರು ತಿಳಿಸಿದ್ದಾರೆ.