ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿರುವ ಗದ್ದೆಯ ಒಣ ಹುಲ್ಲಿನ ಬಣವೆಗೆ ಅಕಸ್ಮಿಕ ಬೆಂಕಿ ತಗುಲಿ ಸುಮಾರು 25 ಸಾವಿರ ಕಟ್ಟು ಹುಲ್ಲು ಬಸ್ಮಗೊಂಡು ರೂ, 3 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವ ಘಟನೆ ನಡೆದಿದೆ.
ಗುರುವಾರ ಸಂಜೆ 4.30 ಗಂಟೆ ಸುಮಾರಿಗೆ ಹುಲ್ಲಿನ ಬವಣೆಯಲ್ಲಿ ಬೆಂಕಿ ಕಾಣಿಸಿ ಕೊಂಡಾಗ ಸ್ಥಳದಲ್ಲಿದ್ದ ಕಾರ್ಮಿಕರು ಗಾಬರಿಗೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದರಾದರು ನಗರ ಠಾಣೆ ಪೊಲೀಸರಿಗೂ ಹಾಗೂ ಆಗ್ನಿ ಶಾಮಕ ದಳದವರಿಗೂ ದೂರವಾಣಿ ಮೂಲಕ ಸುದ್ದಿ ತಿಳಿಸಿ ಅವರು ಸ್ಥಳಕ್ಕೆ ಆಗಮಿಸು ವಷ್ಟರಲ್ಲಿ ಸಾವಿರಾರು ಕಟ್ಟು ಹುಲ್ಲು ಬೆಂಕಿಗಾಹುತಿಯಾಗಿತ್ತು.
ಘಟನೆಯ ಸ್ಥಳಕ್ಕೆ ಸಂತ ಅನ್ನಮ್ಮ ದೇವಾಲಯದ ವಿರಾಜಪೇಟೆ ಮತ್ತು ಆರ್ಜಿಯ ಧರ್ಮಗುರು ಮುತ್ತು, ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ಬಿ.ಜೆ.ಪಿಯ ಜೋಕಿಂ ರಾಡ್ರಿಗಾಸ್, ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಆಗ್ನಿ ಶಾಮಕ ದಳದ ಬಿ.ಟಿ.ಪಳಂಗಪ್ಪ, ಸುನೀಲ್ ಕುಮಾರ್, ಮಂಜುನಾಥ್, ಕಂದಾಯ ಇಲಾಖೆ, ಸೆಸ್ಕಾಂ ಇಲಾಖೆ, ಅಧಿಕಾರಿಗಳು ಮತ್ತು ಬೆಟೋಳಿ ಪಂಚಾಯಿತಿ ಸದಸ್ಯರು ಮುಂತಾದವರು ಆಗಮಿಸಿದ್ದರು.