ಮೈಸೂರಲ್ಲಿ ಐವರು ಖದೀಮರ ಬಂಧನ
ಮೈಸೂರು

ಮೈಸೂರಲ್ಲಿ ಐವರು ಖದೀಮರ ಬಂಧನ

December 3, 2018

ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿರುವ ಎನ್‍ಆರ್ ಠಾಣೆ ಪೊಲೀಸರು, ಸುಲಿಗೆ ಹಾಗೂ ಕಳ್ಳತನ ಸಂಬಂಧ ಐವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 20 ಸಾವಿರ ರೂ. ಮೌಲ್ಯದ 2 ಮೊಬೈಲ್, 3 ಸಾವಿರ ರೂ. ನಗದು, ಸ್ಕೂಟರ್ ಹಾಗೂ ಕಳ್ಳತನ ಮಾಡಿದ್ದ 2 ಲಕ್ಷ ರೂ. ಮೌಲ್ಯದ ಓಮ್ನಿ ವ್ಯಾನ್‍ವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಸುಲಿಗೆ ಪ್ರಕರಣದಲ್ಲಿ ಮೈಸೂರಿನ ಮಂಡಿ ಮೊಹಲ್ಲಾದ ಮೊಹ ಮ್ಮದ್ ಅಜರ್ ಉಲ್‍ಹಖ್ (22), ಮೊಹಮ್ಮದ್ ಸಿದ್ದಿಖ್ (19), ಸಲ್ಮಾನ್ ಖಾನ್ ಅಲಿ ಯಾಸ್ ಮೋಟು (19), ಲಷ್ಕರ್ ಮೊಹಲ್ಲಾದ ಮೊಹಮದ್ ಸನಾವುಲ್ಲಾ ಅಲಿಯಾಸ್ ಸೋನು (19) ಎಂಬ ನಾಲ್ವರು ಯುವಕರನ್ನು ಬಂಧಿಸಲಾಗಿದೆ.

ಅದೇ ರೀತಿ 2 ಲಕ್ಷ ರೂ. ಮೌಲ್ಯದ ಓಮ್ನಿ ಕಳ್ಳತನ ಸಂಬಂಧ ಹಾಸನ ಜಿಲ್ಲೆಯ ಚನ್ನರಾಯನಪಟ್ಟಣದ ರಾಹಿಲ್ ಅಹಮ್ಮದ್ (32) ಎಂಬಾತನನ್ನು ಬಂಧಿಸಲಾಗಿದೆ. ಮೊಹಮ್ಮದ್ ಅಜರ್ ಉಲ್ ಹಖ್ ಹಾಗೂ ಮೊಹಮ್ಮದ್ ಸಿದ್ದಿಖ್ ನ.15ರಂದು ರಾತ್ರಿ ಮೈಸೂರು ನಗರದ ಬನ್ನಿ ಮಂಟಪ ಬಿಟಿ ಮಿಲ್ ರಸ್ತೆಯಲ್ಲಿ ಇಬ್ಬರು ಹುಡುಗರನ್ನು ಹೆದರಿಸಿ 2 ಮೊಬೈಲ್ ಫೋನ್‍ಗಳು ಹಾಗೂ ನಗದು ಹಣವನ್ನು ಸುಲಿಗೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎನ್‍ಆರ್ ಪೊಲೀಸರು, ಶುಕ್ರವಾರ ಬನ್ನಿಮಂಟಪದ ಸಿವಿ ರಸ್ತೆಯಲ್ಲಿ ಈ ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೆ, ಸುಲಿಗೆ ಮಾಡಿದ್ದ ಮಾಲುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಡಿಯೋ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಕಳುವು ಮಾಡಿರುವ ಮೊಬೈಲ್ ಎಂಬ ಬಗ್ಗೆ ತಿಳಿದಿದ್ದರೂ ಆರೋಪಿಗಳಿಂದ ಅವುಗಳನ್ನು ಪಡೆದಿದ್ದ ಸಲ್ಮಾನ್ ಖಾನ್ ಹಾಗೂ ಮೊಹಮದ್ ಸನಾವುಲ್ಲಾ ಎಂಬುವವರನ್ನೂ ಬಂಧಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಶನಿವಾರ ಮೈಸೂರು-ಬೆಂಗಳೂರು ರಸ್ತೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ನಂಬರ್ ಪ್ಲೇಟ್ ಇಲ್ಲದ ಮಾರುತಿ ಓಮ್ನಿ ವ್ಯಾನ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ರಾಹಿಲ್ ಅಹಮ್ಮದ್ ಎಂಬಾತನನ್ನು ಬಂಧಿಸ ಲಾಗಿದೆ. ಚನ್ನರಾಯಪಟ್ಟಣದ ಮೈಸೂರು ರಸ್ತೆಯಲ್ಲಿ ನಕಲಿ ಕೀ ಬಳಸಿ ಓಮ್ನಿ ವ್ಯಾನ್ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಈತ ಒಪ್ಪಿಕೊಂಡಿದ್ದಾನೆ. ನಗರದ ಅಪ ರಾಧ ವಿಭಾಗದ ಡಿಸಿಪಿ ಡಾ.ವಿಕ್ರಂ ಆಮಟೆ ಮಾರ್ಗದರ್ಶನ, ಎನ್‍ಆರ್ ಎಸಿಪಿ ಗೋಪಾಲ್ ಅವರ ನೇತೃತ್ವದಲ್ಲಿ ಎನ್‍ಆರ್ ಠಾಣೆಯ ಇನ್ಸ್‍ಪೆಕ್ಟರ್ ಬಿ.ಬಸವರಾಜು, ಎಸ್‍ಐ ಎನ್.ಮೋಹನ್, ಸಿಬ್ಬಂದಿಯಾದ ಮಂಜುನಾಥ, ಮಹದೇವ, ಕೃಷ್ಣ, ರಮೇಶ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ನಗರದ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Translate »